ರಸ್ತೆ ಮೇಲೆ ಗುಡ್ಡ ಕುಸಿತ ಹಿನ್ನೆಲೆ ಶಿರಾಡಿ ಬಂದ್

| Published : Jun 27 2025, 12:49 AM IST

ರಸ್ತೆ ಮೇಲೆ ಗುಡ್ಡ ಕುಸಿತ ಹಿನ್ನೆಲೆ ಶಿರಾಡಿ ಬಂದ್
Share this Article
  • FB
  • TW
  • Linkdin
  • Email

ಸಾರಾಂಶ

ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತಾಲೂಕಿನ ಶಿರಾಡಿಘಾಟಿ ಅಸ್ತವ್ಯಸ್ತಗೊಂಡಿದ್ದು, ಹೆದ್ದಾರಿ ಅಗಲೀಕರಣದ ನೆಪದಲ್ಲಿ ಗುಡ್ಡಗಳನ್ನು ಕಡಿದಾಗಿ ಕತ್ತರಿಸಿರುವ ಪರಿಣಾಮ ಇದೀಗ ಗುಡ್ಡಗಳು ಹೆದ್ದಾರಿ ಮೇಲೆ ಕುಸಿಯುತ್ತಿವೆ. ಬುಧವಾರ ರಾತ್ರಿ ಕೂಡ ದೋಣಿಗಾಲ್‌ ಬಳಿ ರಸ್ತೆ ಮೇಲೆ ಗುಡ್ಡ ಕುಸಿದಿದ್ದರಿಂದ ನೂರಾರು ವಾಹನಗಳು ಘಾಟಿಯಲ್ಲಿ ಸಿಲುಕಿದವು. ತೆರವು ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಶಿರಾಟಿಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತಾಲೂಕಿನ ಶಿರಾಡಿಘಾಟಿ ಅಸ್ತವ್ಯಸ್ತಗೊಂಡಿದ್ದು, ಹೆದ್ದಾರಿ ಅಗಲೀಕರಣದ ನೆಪದಲ್ಲಿ ಗುಡ್ಡಗಳನ್ನು ಕಡಿದಾಗಿ ಕತ್ತರಿಸಿರುವ ಪರಿಣಾಮ ಇದೀಗ ಗುಡ್ಡಗಳು ಹೆದ್ದಾರಿ ಮೇಲೆ ಕುಸಿಯುತ್ತಿವೆ. ಬುಧವಾರ ರಾತ್ರಿ ಕೂಡ ದೋಣಿಗಾಲ್‌ ಬಳಿ ರಸ್ತೆ ಮೇಲೆ ಗುಡ್ಡ ಕುಸಿದಿದ್ದರಿಂದ ನೂರಾರು ವಾಹನಗಳು ಘಾಟಿಯಲ್ಲಿ ಸಿಲುಕಿದವು. ತೆರವು ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಶಿರಾಟಿಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

ತಾಲೂಕಿನ ಆನೇಮಹಲ್ ಗ್ರಾಮದಿಂದ-ಹೆಗದ್ದೆ ಗ್ರಾಮದವರೆಗಿನ ೧೦ ಕಿ.ಮೀ. ವ್ಯಾಪ್ತಿಯಲ್ಲಿ ಹಲವೆಡೆ ಗುಡ್ಡ ಕುಸಿದು ಹೆದ್ದಾರಿಗೆ ಬಿದ್ದಿರುವುದರಿಂದ ವಾಹನಗಳು ಸತತ ೧೦ ಗಂಟೆಗಳ ಕಾಲ ನಿಂತಲೇ ನಿಲ್ಲುವಂತಾಗಿತ್ತು. ರಾತ್ರಿ ೯ ಗಂಟೆಗೆ ದೋಣಿಗಾಲ್ ಗ್ರಾಮ ಸಮೀಪದ ಏಲಕ್ಕಿ ಮಂಡಳಿ ಬಳಿ ಗುಡ್ಡ ಕುಸಿದಿದ್ದು ಸುಮಾರು ಅರ್ಧ ಗಂಟೆಗಳ ಕಾಲ ಹೆದ್ದಾರಿಯಲ್ಲಿ ವಾಹನಗಳು ಸ್ಥಗಿತಗೊಂಡಿದ್ದವು. ಆದರೆ, ಇಲ್ಲಿಗೆ ಯಾವುದೇ ಅಧಿಕಾರಿಗಳ ತಂಡ ಸಹ ಆಗಮಿಸದ ಹಿನ್ನೆಲೆಯಲ್ಲಿ ಪ್ರಯಾಣಿಕರೇ ಮಣ್ಣು, ಕಲ್ಲುಗಳನ್ನು ತೆರವುಗೊಳಿಸಿಕೊಂಡು ಸಂಚಾರಕ್ಕೆ ಹೆದ್ದಾರಿಯನ್ನು ಮುಕ್ತಗೊಳಿಸಿಕೊಂಡರು.

ರಾತ್ರಿ ೧೨ರ ಸುಮಾರಿಗೆ ಆನೇಮಹಲ್ ಗ್ರಾಮ ಸಮೀಪ ಹೆದ್ದಾರಿ ಕುಸಿದು ಸಮಸ್ಯೆ ಸೃಷ್ಟಿಸಿತ್ತು. ಇದಾದ ನಂತರ ಹೆಗ್ಗದ್ದೆ ಗ್ರಾಮ ಸಮೀಪ ಇದೇ ಮೊದಲ ಬಾರಿಗೆ ಸುಮಾರು ಮೂನ್ನೂರು ಮೀಟರ್‌ನಷ್ಟು ದೂರದವರೆಗೆ ಭೂಮಿ ಕುಸಿದಿದ್ದು, ಸಮೀಪದ ಮೊಬೈಲ್ ಟವರ್‌ ಧರೆಗುರುಳುವ ಭಯ ಆವರಿಸಿದೆ. ದೊಡ್ಡತಪ್ಲೆ ಹಾಗೂ ಕಪ್ಪಳಿ ಗ್ರಾಮ ಸಮೀಪ ಮಧ್ಯರಾತ್ರಿ ಒಂದು ಗಂಟೆಯ ವೇಳೆ ಏಕಕಾಲದಲ್ಲಿ ಭೂಮಿ ಕುಸಿದಿದ್ದರಿಂದ ಹಲವು ವಾಹನಗಳು ಹಿಂದೆಯೂ ಸಾಗಲು ಮುಂದೆಯೂ ಹೋಗಲು ಸಾಧ್ಯವಿಲ್ಲದೆ ಅಡ್ಡಕತ್ತರಿಗೆ ಸಿಲುಕಿದರೆ, ಉಳಿದ ಲಘುವಾಹನಗಳನ್ನು ಹಾನುಬಾಳ್ ಮಾರ್ಗವಾಗಿ ಚಾರ್ಮಾಡಿ ಘಾಟ್ ಮೂಲಕ ಸಾಗಲು ಅವಕಾಶ ನೀಡಿದರೆ ಮಂಗಳೂರಿನಿಂದ ಹಾಸನದೆಡೆಗೆ ತೆರಳುತ್ತಿದ್ದ ವಾಹನಗಳನ್ನು ಕಾಡುಮನೆ ಮೂಲಕ ಸಕಲೇಶಪುರ ತಲುಪಲು ವ್ಯವಸ್ಥೆ ಮಾಡಲಾಗಿತ್ತು. ಉಳಿದಂತೆ ಸಾರಿಗೆ ಬಸ್‌ಗಳು ಸೇರಿದಂತೆ ಭಾರಿ ವಾಹನಗಳು ಕಿ.ಮೀ.ಗಳ ದೂರದವರೆಗೆ ಸರತಿಸಾಲಿನಲ್ಲಿ ನಿಲುಗಡೆಯಾಗಿದ್ದವು. ಪ್ರಯಾಣಿಕರ ಪರದಾಟ:

ಮಧ್ಯರಾತ್ರಿಯಿಂದ ಮುಂಜಾನೆ ೧೦ ಗಂಟೆವರೆಗೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಪರದಾಡಿದ್ದು ದೇಹಬಾಧೆ ತೀರಿಸಿಕೊಳ್ಳಲು ಅವಕಾಶವಿಲ್ಲದ ಮಹಿಳೆಯರ ಸ್ಥಿತಿ ಶೋಚನಿಯವಾಗಿತ್ತು. ಒಂದೆಡೆ ಬೆಂಬಿಡದೆ ಬೀಸುತ್ತಿದ್ದ ಗಾಳಿ, ಮಳೆ, ಚಳಿಯಿಂದ ಹೈರಾಣಾಗಿದ್ದ ಪ್ರಯಾಣಿಕರು ಕಾಫಿ, ಟೀಗಾಗಿ ಹಾತೊರೆದು ಕಿ.ಮೀ.ಗಳ ದೂರದವರೆಗೆ ಸಂಚರಿಸಿದರು. ಯಾವುದೇ ಅಂಗಡಿಮುಂಗಟ್ಟುಗಳನ್ನು ತೆರೆಯದ ಕಾರಣ ಹೊಟ್ಟೆಹಸಿವಿನೊಂದಿಗೆ ನಿರಾಸೆಯಲ್ಲೆ ರಾತ್ರಿ ಕಳೆದರು.ಶೌಚಕ್ಕೆ 200 ರು. ಪಡೆದ ಹೋಟೆಲ್ ಮಾಲೀಕ:

ಆನೇಮಹಲ್ ಗ್ರಾಮ ಸಮೀಪ ಸಿಲುಕಿದ್ದ ಪ್ರಯಾಣಿಕರಿಗೆ ಶೌಚಗೃಹದ ವ್ಯವಸ್ಥೆ ಕಲ್ಪಿಸಿದ್ದ ಹೋಟೆಲ್ ಮಾಲೀಕನೋರ್ವ ಪ್ರತಿ ಮಹಿಳೆಯಿಂದ ಇನ್ನೂರು ರು. ಪಡೆದು ಸುಲಿಗೆ ನಡೆಸಿದ್ದಾನೆ. ಕಷ್ಟದಲ್ಲಿದ್ದವರಿಗೆ ನೆರವಾಗಬೇಕಿದ್ದ ಈತ ಮನಸೋ ಇಚ್ಛೆ ಹಣ ಪಡೆಯುವ ಮೂಲಕ ತಾಲೂಕಿನ ಹೆಸರನ್ನೆ ಮಣ್ಣುಪಾಲು ಮಾಡಿದ್ದಾನೆ. ಈತನ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಹ ಕೇಳಿ ಬರುತ್ತಿದೆ.ಅಧಿಕಾರಿಗಳ ಕಾರ್ಯಾಚರಣೆ:

ನಿರಂತರ ಭೂಕುಸಿತ ಸಂಭವಿಸುತ್ತಿರುವ ಹೆದ್ದಾರಿಯಲ್ಲಿ ರಾತ್ರಿಯಿಡೀ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜೆ.ಸಿ.ಬಿ, ಹಿಟಾಚಿ ಬಳಸಿ ಮಣ್ಣು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡರೆ, ಅರಣ್ಯ ಇಲಾಖೆ ಸಿಬ್ಬಂದಿ ಬೀಳುವ ಹಂತದಲ್ಲಿದ್ದ ಮರಗಳನ್ನು ವಲಯ ಅರಣ್ಯಾಧಿಕಾರಿ ಹೇಮಂತ್ ನೇತೃತ್ವದಲ್ಲಿ ಮಧ್ಯರಾತ್ರಿವರಗೆ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದಾರೆ. ಇದರಿಂದಾಗಿ ಗೇರೆಯ ತುದಿಯಲ್ಲಿದ್ದ ಮರಗಳು ಹೆದ್ದಾರಿಗೆ ಬೀಳುವ ಅಪಾಯ ತಪ್ಪಿದ್ದು ಪ್ರಯಾಣಿಕರು ನಿರ್ಭಯವಾಗಿ ಸಂಚರಿಸಬಹುದಾಗಿದೆ.ಮಾರನಹಳ್ಳಿ-ಕಡಗರಹಳ್ಳಿ ರಸ್ತೆ ಬಂದ್:- ಮಾರನಹಳ್ಳಿ-ಕಡಗರಹಳ್ಳಿ ಸಂಪರ್ಕಿಸುವ ರಸ್ತೆಯ ಮೇಲೂ ಭೂಕುಸಿತ ಸಂಭವಿಸಿದ್ದರಿಂದ ಸಾಕಷ್ಟು ಸಮಯ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಗ್ರಾಮಸ್ಥರೇ ಮಣ್ಣು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವುಮಾಡಿಕೊಟ್ಟರು.ಲೆಕ್ಕವೇ ಇಲ್ಲ:

ಮೂರು ದಿನಗಳಿಂದ ಬೀಸುತ್ತಿರುವ ಬಿರುಗಾಳಿಗೆ ಮುರಿದು ಬಿದ್ದಿರುವ ವಿದ್ಯುತ್ ಕಂಬಗಳಿಗೆ ಲೆಕ್ಕವೇ ಇಲ್ಲ ಎಂಬಂತಾಗಿದೆ. ಪರಿಣಾಮ ತಾಲೂಕಿನ ಸಂಪೂರ್ಣ ಗ್ರಾಮೀಣ ಪ್ರದೇಶ ಕತ್ತಲಲ್ಲಿ ಮುಳುಗಿದ್ದು ಚೆಸ್ಕಾಂ ಸಿಬ್ಬಂದಿ ಯುದ್ದೋಪಾಧಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರೂ ಕೂಡ ನಿರೀಕ್ಷಿತ ಪ್ರಗತಿ ಸಾಧ್ಯವಾಗುತ್ತಿಲ್ಲ.ಹೆಚ್ಚಿದ ಹರಿವು:

ಆರಿದ್ರ್ಯಾ ಮಳೆ ಅಬ್ಬರ ಹೆಚ್ಚಿರುವುದರಿಂದ ತಾಲೂಕಿನ ಜೀವನದಿ ಹೇಮಾವತಿ ನದಿಯ ಹರಿವು ಹೆಚ್ಚಿದ್ದು ಪಟ್ಟಣದಲ್ಲಿ ೮ ಅಡಿಯಷ್ಟು ನೀರು ಹರಿಯುತ್ತಿದೆ. ಇದಲ್ಲದೆ ಸಾಕಷ್ಟು ಹಳ್ಳಕೊಳ್ಳಗಳು ಮೈದುಂಬಿ ಹರಿಯುತ್ತಿದ್ದರೆ, ಪಶ್ಚಿಘಟ್ಟದಲ್ಲಿ ಬೇಸಿಗೆ ವೇಳೆ ಸಂಪೂರ್ಣ ಬತ್ತಿ ಹೋಗುತ್ತಿದ್ದ ಸಾಕಷ್ಟು ಝರಿಗಳು ಜೀವಪಡೆದಿದ್ದು ಮನಮೋಹಕವಾಗಿ ಹರಿಯುತ್ತಿವೆ.