ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತಾಲೂಕಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಶಿರಾಡಿಯಲ್ಲಿ ಶನಿವಾರ ರಾತ್ರಿ ಗುಡ್ಡ ಕುಸಿದು ಸಂಚಾರ ಸ್ಥಗಿತಗೊಂಡಿತ್ತು. ಆದರೆ ಸತತ ಕಾರ್ಯಾಚರಣೆ ನಂತರ ಭಾನುವಾರ ಬೆಳಗ್ಗೆಯಿಂದ ಸಂಚಾರ ಆರಂಭವಾಗಿದೆ.ಹೆದ್ದಾರಿ ಸಂಚಾರ ದುಸ್ತರ:
ರಾಷ್ಟ್ರೀಯ ಹೆದ್ದಾರಿ ೭೫ರ ಶಿರಾಡಿಘಾಟ್‌ನಲ್ಲಿ ಶನಿವಾರ ಸಂಜೆ ಮೇಘಸ್ಫೋಟ ಸಂಭವಿಸಿದ್ದು ಎರಡು ಗಂಟೆಯ ಕನಿಷ್ಠ ಅವಧಿಯಲ್ಲಿ ನಾಲ್ಕುನೂರು ಮೀ.ಮೀಟರ್ ಮಳೆ ಸುರಿದ ಪರಿಣಾಮ ಘಾಟ್ ರಸ್ತೆಯಲ್ಲಿ ಹೊಳೆಯಂತೆ ನೀರು ಹರಿಯುತ್ತಿತ್ತು. ತೊರೆಗಳ ನೀರು ರಸ್ತೆಗೆ ಬೀಳುತ್ತಿದ್ದರಿಂದ ಘಾಟ್‌ನಲ್ಲಿ ಲಘುವಾಹನಗಳ ಸಂಚಾರ ಕಷ್ಟಕರವಾಗಿತ್ತು. ಹೆದ್ದಾರಿಯ ಪ್ರತ್ಯೇಕ ಪ್ರದೇಶದಲ್ಲಿ ಎರಡು ಕಾರುಗಳ ಮೇಲೆ ಮರಗಳು ಬಿದ್ದಿದ್ದು ಯಾವುದೇ ಹಾನಿ ಸಂಭವಿಸಿಲ್ಲ. ಸ್ಥಳದಲ್ಲೆ ಇದ್ದ ಅರಣ್ಯ ಇಲಾಖೆ ಅಧಿಕಾರಿಗಳು ಮರಗಳನ್ನು ತೆರವುಗೊಳಿಸಿದರು.ಈ ಮಧ್ಯೆ ರಾತ್ರಿ ೮ ಗಂಟೆಯ ವೇಳೆ ಡಬಲ್ ತಿರುವು ಸಮೀಪ ಎರಡು ಪ್ರದೇಶದಲ್ಲಿ ಹೊಸದಾಗಿ ಗುಡ್ಡಕುಸಿದಿದ್ದರಿಂದ ಘಾಟಿಯಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತವು. ಧೋ.. ಎಂದು ಸುರಿಯುತ್ತಿದ್ದ ಮಳೆ ಹಾಗೂ ಅಂಧಾಕಾರದ ನಡುವೆ ಪ್ರಯಾಣಿಕರು ಸಿಲುಕಿದರು. ಕೆಲವರು ಆಹಾರವಿಲ್ಲದೆ ಉಪವಾಸ ಮಲಗಿದರು. ಲಾರಿ ಚಾಲಕರು ಮಾತ್ರ ತಮ್ಮಲ್ಲಿದ್ದ ಸ್ಟೌ ಹಾಗೂ ಪಾತ್ರೆ, ಅಡುಗೆ ಸಾಮಗ್ರಿಗಳನ್ನು ಬಳಸಿ ಲಾರಿಗಳಲ್ಲೇ ಅಡುಗೆ ತಯಾರಿಸುತ್ತಿದ್ದರು. ಮಣ್ಣು ಕುಸಿದಾಗಿನಿಂದಲೇ ತೆರವು ಕಾರ್ಯಾಚರಣೆ ಶುರುವಾಯಿತು. ಮಣ್ಣು ತೆಗೆದಂತೆ ಮತ್ತೆಮತ್ತೆ ಮಣ್ಣು ಕುಸಿದಿದ್ದರಿಂದ ಕಾರ್ಯಾಚರಣೆ ಬೆಳಗ್ಗೆವರೆಗೆ ನಡೆಯಿತು. ಸ್ಥಳಕ್ಕಾಗಮಿಸಿದ ಹೆದ್ದಾರಿ ಅಧಿಕಾರಿಗಳು ಜೆಸಿಬಿ ಬಳಸಿ ಮಣ್ಣು ತೆರವುಗೊಳಿಸಿದರೆ ಅರಣ್ಯ ಇಲಾಖೆ ಬಿದ್ದ ಮರಗಳನ್ನು ತುಂಡರಿಸಿ ಸಂಚಾರಕ್ಕೆ ಅನುವು ಮಾಡಿತ್ತು. ರಾತ್ರಿಯೆಲ್ಲಾ ಶಿರಾಡಿಯ ಕಗ್ಗತ್ತಲಲ್ಲೇ ಕಾಲ ಕಳೆದ ವಾಹನ ಚಾಲಕರು ಮತ್ತು ಪ್ರಯಾಣಿಕರು ಬೆಳಗಾಗುತ್ತಲೇ ಪ್ರಯಾಣ ಮುಂದುವರಿಸಿದರು.
ಉಪವಿಭಾಗಾಧಿಕಾರಿ ರಾಜೇಶ್, ತಹಸೀಲ್ದಾರ್ ಸುಪ್ರೀತಾ, ವಲಯ ಅರಣ್ಯಾಧಿಕಾರಿ ಹೇಮಂತ್ ಮಧ್ಯರಾತ್ರಿವರಗೆ ಘಾಟ್‌ನಲ್ಲೆ ಇದ್ದು ಕಾರ್ಯಾಚರಣೆ ನೇತೃತ್ವ ವಹಿಸಿ ತೆರವುಕಾರ್ಯ ವೇಗವಾಗಿ ನಡೆಸುವ ಮೂಲಕ ಸಂಚಾರಕ್ಕೆ ಅವಕಾಶ ನೀಡಲಾಯಿತಾದರೂ ಭಾನುವಾರ ಸಹ ಮತ್ತೆ ಗುಡ್ಡಕುಸಿದಿದ್ದು ತೆರವುಗೊಳಿಸಲಾಗಿದೆ. ಈ ಭಾಗದಲ್ಲಿ ಇಂದಿಗೂ ಭಾರೀ ಮಳೆಯಾಗುತ್ತಿರುವುದರಿಂದ ಮತ್ತಷ್ಟು ಭೂಕುಸಿತದ ಸಾಧ್ಯತೆ ದಟ್ಟವಾಗಿದೆ. ಅಲ್ಲದೆ ಪ್ರತಿವರ್ಷ ಕುಸಿಯುತ್ತಿರುವ ದೊಡ್ಡತಪ್ಪಲೆ ಬೆಟ್ಟ ಸಹ ಯಾವ ಕ್ಷಣದಲ್ಲಿ ಬೇಕಿದ್ದರು ಭಾರಿ ಪ್ರಮಾಣದಲ್ಲಿ ಕುಸಿಯುವ ಸಾಧ್ಯತೆ ಹೆಚ್ಚಿದ್ದು ಈ ಪ್ರದೇಶದಲ್ಲಿ ನದಿಯಂತೆ ಅಂತರ್ಜಲ ಹರಿಯುತ್ತಿದ್ದು. ಇಲ್ಲಿನ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ವಾಹನ ಸಂಚಾರ ಬಹಳ ಅಪಾಯಕಾರಿಯಾಗಿದೆ. ಭಾನುವಾರವು ಹೆದ್ದಾರಿಗೆ ಮರಗಳು ಉರುಳಿದ್ದು ಕೆಲಕಾಲ ವಾಹನ ಸಂಚಾರಕ್ಕೆ ಧಕ್ಕೆಯಾಗಿತ್ತು. ಅರಣ್ಯ ಇಲಾಖೆ ಹೆದ್ದಾರಿಗೆ ಬಾಗಿದ್ದ ಮರಗಳನ್ನು ಮೂರು ಜೆಸಿಬಿ ಯಂತ್ರಗಳನ್ನು ಬಳಸಿ ತೆರವುಗೊಳಿಸಿದರೆ, ಹಿರಿದನಹಳ್ಳಿ ರಸ್ತೆಯಲ್ಲಿ ಬೀಳುವ ಸ್ಥಿತಿಯಲ್ಲಿದ್ದ ಮರಗಳನ್ನು ಅರಣ್ಯ ಇಲಾಖೆ ತೆರವುಗೊಳಿಸಿದೆ. ಮಾರ್ಗ ಬದಲಿಸಿದ ನಾಯಕರು:ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾಧಿ ನಾರಾಯಣಸ್ವಾಮಿ ಗಡಿ ಚೌಡೇಶ್ವರಿ ದೇವಸ್ಥಾನದವರೆಗೂ ತೆರಳಿದರಾದರು ಗುಡ್ಡ ಕುಸಿತದಿಂದ ಹೆದ್ದಾರಿ ಬಂದ್ ಆಗಿರುವುದನ್ನು ಖಚಿತಪಡಿಸಿಕೊಂಡು ಚಾರ್ಮಾಡಿ ಘಾಟ್ ಮೂಲಕ ತೆರಳಿದರು. ಭಾನುವಾರ ಬೆಳಿಗ್ಗೆ ಧರ್ಮಸ್ಥಳದಿಂದ ಹೊರಟ ವಿಜಯೇಂದ್ರ ಮತ್ತೆ ಗುಡ್ಡಕುಸಿತದ ಕಾರಣ ಬಿಸಿಲೆ ಘಾಟ್ ಮೂಲಕ ಬೆಂಗಳೂರಿಗೆ ತೆರಳಿದರು.ರೈಲು ಮಾರ್ಗವೂ ಬಂದ್:
ಸಕಲೇಶಪುರ-ಸುಬ್ರಮಣ್ಯ ಸಂಪರ್ಕಿಸುವ ರೈಲ್ವೆ ಸಂಚಾರ ಸಹ ಭೂಕುಸಿತದಿಂದಾಗಿ ಶನಿವಾರ ರಾತ್ರಿ ಸ್ಥಗಿತಗೊಂಡಿದೆ. ತಾಲೂಕಿನ ದೋಣಿಗಾಲ್, ಕಡಗರಹಳ್ಳಿ ಹಾಗೂ ಯಡಕುಮೇರಿ ವ್ಯಾಪ್ತಿಯ ೭ ಪ್ರದೇಶದಲ್ಲಿ ಶನಿವಾರ ಸಂಜೆ ೫ ಗಂಟೆಗೆ ಭೂಕುಸಿತ ಸಂಭವಿಸಿದೆ. ಭೂಕುಸಿತ ಸುದ್ದಿ ತಿಳಿದ ಮೈಸೂರು ವಿಭಾಗದ ರೈಲ್ವೆ ಅಧಿಕಾರಿಗಳು ನೂರಾರು ನೌಕರರೊಂದಿಗೆ ಆಗಮಿಸಿ ರಾತ್ರಿ ಇಡಿ ಕಾರ್ಯಾಚರಣೆ ನಡೆಸಿ ರೈಲ್ವೆ ಹಳಿಯ ಮೇಲೆ ಬಿದ್ದಿದ್ದ ಮಣ್ಣನ್ನು ಮುಂಜಾನೆ ೬.೩೦ಕ್ಕೆ ತೆರವುಗೊಳಿಸಿ ರೈಲು ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ. ಮಂಗಳೂರಿನಿಂದ ಈ ಭಾಗವಾಗಿ ಸಂಚರಿಸಬೇಕಿದ್ದ ೧೦ಕ್ಕೂ ಅಧಿಕ ರೈಲುಗಳ ಮಾರ್ಗವನ್ನು ಬದಲಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಾಗಿದೆ.ಆಷಾಢದ ನಂತರ ಮಳೆ ಆರ್ಭಟ:ಕಳೆದ ಎರಡು ದಿನಗಳ ಅವಧಿಯಲ್ಲಿ ತಾಲೂಕಿನ ಹಾನುಬಾಳು, ಕಸಬಾ ಹಾಗೂ ಹೆತ್ತೂರು ಹೋಬಳಿಯಲ್ಲಿ ೩೫೦ ರಿಂದ ೫೦೦ ಮಿ.ಮೀಟರ್ ಮಳೆಯಾಗಿದ್ದು, ಈ ಭಾಗದ ಎಲ್ಲ ನದಿ ತೊರೆಗಳು ಅಕ್ಷರಸಹ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಸಾಕಷ್ಟು ಪ್ರದೇಶದಲ್ಲಿ ನಾಟಿ ಮಾಡಿದ್ದ ಭತ್ತದ ಗದ್ದೆಗಳು ನದಿ ನೀರಿನಿಂದ ಆವೃತಗೊಂಡಿವೆ. ಕ್ಯಾನಹಳ್ಳಿ-ಚಿನ್ನಹಳ್ಳಿ ಮಾರ್ಗದಲ್ಲಿ ಭೂಕುಸಿತ ಸಂಭವಿಸಿರುವುದರಿಂದ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಒಸ್ಸೂರು ಗ್ರಾಮದಲ್ಲಿ ರಮೇಶ್ ಎಂಬುವವರ ಮನೆ ಹಾನಿಗೊಂಡಿದ್ದರೆ ಪಟ್ಟಣದ ಬಾಳೆಗದ್ದೆಯಲ್ಲಿ ಉಸ್ಮಾನ್ ಎಂಬುವವರ ಮನೆ ಸಹ ಕುಸಿತಗೊಂಡಿದೆ. ಆನೇಮಹಲ್ ಗ್ರಾಮದ ಶಾಲೆಯ ಕಾಂಪೌಡ್ ನೆಲಕ್ಕುರುಳಿದೆ. ಯಡಕೇರೆ ಹಳ್ಳ ತುಂಬಿ ಹರಿಯುತ್ತಿರುವ ಪರಿಣಾಮ ಕುಂಬ್ರಹಳ್ಳಿ-ಯಡಕೇರೆ ರಸ್ತೆ ಬಂದ್ ಆಗಿದೆ. ನದಿ ನೀರು ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ಮಾಗೇರಿ-ಪಟ್ಲ ಮಾರ್ಗದಲ್ಲಿ ವಾಹನ ಸಂಚಾರ ಕಷ್ಟಕರವಾಗಿದೆ. ಬಿಸ್ಲೆಘಾಟ್ ರಸ್ತೆಯಲ್ಲಿ ಧರೆಗುರುಳಿರುವ ಮರಗಳ ತೆರವು ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಹೇಮಾವತಿ ನದಿ ಸಹ ಪಟ್ಟಣದಲ್ಲಿ ಒಡಲು ಬಿಟ್ಟುಹರಿಯುತ್ತಿದ್ದು ಸಕಲೇಶ್ವರಸ್ವಾಮಿ ದೇವಸ್ಥಾನ ಗರ್ಭಗುಡಿಪ್ರವೇಶಕ್ಕೆ ಕೆಲವೇ ಅಡಿಗಳು ಬಾಕಿ ಉಳಿದಿದ್ದರೆ, ಅಜಾದ್ ರಸ್ತೆಗೆ ನದಿ ನೀರು ನುಗ್ಗವ ಭಯ ಜನರನ್ನು ಕಾಡುತ್ತಿದೆ. ಬಾರಿ ಮಳೆಯ ಕಾರಣ ತಾಲೂಕಿನಾದ್ಯಂತ ಕೃಷಿ ಕಾರ್ಯಕ್ಕೆ ರಜೆ ನೀಡಲಾಗಿದ್ದು ಸೋಮವಾರದ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸುವ ಸಾಧ್ಯತೆ ಹೆಚ್ಚಿದೆ. ಸಾಂಭವ್ಯ ಅಪಾಯ ತಪ್ಪಿಸುವ ನಿಟ್ಟಿನಲ್ಲಿ ತಾಲೂಕು ಆಡಳಿತ ಸಹಾಯವಾಣಿ ಕೇಂದ್ರ ಆರಂಭಿಸಿದೆ.ಪ್ರವಾಸಿಗರ ಹುಚ್ಚಾಟ:
ಒಂದೆಡೆ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಸ್ಥಳೀಯರು ಮನೆಯಿಂದ ಹೊರಬಾರದಂತಾಗಿದೆ. ಆದರೆ ಇನ್ನೊಂದೆಡೆ ತಾಲೂಕಿಗೆ ಪ್ರವಾಸಕ್ಕೆ ಬಂದಿರುವ ಪ್ರವಾಸಿಗರು ಮಳೆಯಲ್ಲೆ ಹುಚ್ಚಾಟ ಮೆರೆಯುತ್ತಿದ್ದು ಮಳೆ ನಡುವೆ ಬೆಟ್ಟಗುಡ್ಡ, ಜರಿತೊರೆಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ತಾಲೂಕಿನಲ್ಲಿ ಪ್ರವಾಸಿಗರ ಸಂಖ್ಯೆ ಪ್ರತಿವಾರಕ್ಕಿಂತ ಹೆಚ್ಚಿದೆ.-------------------------------------------------------------------
* ಹೇಳಿಕೆತಾಲೂಕಿನ ಹಲವೇಡೆ ರಸ್ತೆಗೆ ಉರುಳುವ ಸ್ಥಿತಿಯಲ್ಲಿದ್ದ ಸಾಕಷ್ಟು ಮರಗಳನ್ನು ಕಳೆದ ಎರಡು ದಿನಗಳಿಂದ ತೆರವುಗೊಳಿಸಲಾಗಿದೆ. ಶಿರಾಡಿ ಘಾಟ್‌ನಲ್ಲಿ ಸಾಂಭವ್ಯ ಅಪಾಯ ತಪ್ಪಿಸುವ ನಿಟ್ಟಿನಲ್ಲಿ ನಮ್ಮ ತಂಡ ಸ್ಥಳದಲ್ಲೆ ಬೀಡು ಬಿಟ್ಟಿದೆ.
- ಹೇಮಂತ್‌ಕುಮಾರ್. ಆರ್‌ಎಫ್‌ಒ ಸಕಲೇಶಪುರ ವಲಯಫೋಟೋ:೧೭ ಎಸ್‌ಕೆಪಿ;
ಮಳೆಯ ನಡುವೆ ತೆರವುಕಾರ್ಯಚರಣೆ ನಡೆಸುತ್ತಿರುವ ತಂಡ. ಹೆದ್ದಾರಿಗೆ ಮರ ಉರುಳಿರುವುದು. ಹೆದ್ದಾರಿಗೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸುತ್ತಿರುವುದು. ರೈಲ್ವ ಹಳಿಯ ಮೇಲೆ ಗುಡ್ಡಕುಸಿದಿರುವುದು. ಮಾಗೇರಿ ಗ್ರಾಮಸಮೀಪ ರಸ್ತೆಯ ಮೇಲೆ ನದಿ ಹರಿಯುತ್ತಿರುವುದು.