ಭಾವೈಕ್ಯತೆಗೆ ಹೆಸರಾದ ಶಿರಹಟ್ಟಿ ಫಕೀರೇಶ್ವರ ಮಠ

| Published : Feb 02 2024, 01:04 AM IST

ಭಾವೈಕ್ಯತೆಗೆ ಹೆಸರಾದ ಶಿರಹಟ್ಟಿ ಫಕೀರೇಶ್ವರ ಮಠ
Share this Article
  • FB
  • TW
  • Linkdin
  • Email

ಸಾರಾಂಶ

ಮಠಮಾನ್ಯಗಳು ಹಲವು ಸಂಸ್ಥೆಗಳನ್ನು ಸ್ಥಾಪಿಸಿ ಧಾರ್ಮಿಕ, ಶೈಕ್ಷಣಿಕ ಏಳ್ಗೆಗೆ ಶ್ರಮಿಸುತ್ತಿವೆ. ಶಿರಹಟ್ಟಿ ಮಠವು ಭಾವೈಕ್ಯತೆ ಸಾರುವ ಮಠ. ಇಂದಿಗೂ ಈ ಕಾರ್ಯವನ್ನು ಫಕೀರ ಸಿದ್ಧರಾಮ ಶ್ರೀಗಳು ಮುಂದುವರೆಸಿಕೊಂಡು ಬಂದಿದ್ದಾರೆ

ಹುಬ್ಬಳ್ಳಿ: ದೇಶದಲ್ಲಿ ಭಾವೈಕ್ಯತೆಯ ಪರಂಪರೆಯನ್ನು ಶಿರಹಟ್ಟಿಯ ಮಠವು ಇಂದಿಗೂ ಉಳಿಸಿಕೊಂಡು ಹೋಗುವ ಮೂಲಕ ಜನರಲ್ಲಿ ಸೂಫಿ ಸಂತರ, ಶರಣರ ಸಂದೇಶಗಳನ್ನು ತಿಳಿಸುವ ಕಾರ್ಯ ಮಾಡುತ್ತಿದೆ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.

ಅವರು ಗುರುವಾರ ಸಂಜೆ ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ಶಿರಹಟ್ಟಿ ಫಕೀರೇಶ್ವರ ಮಠದ ಫಕೀರ ಸಿದ್ಧರಾಮ ಶ್ರೀಗಳ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಐದು ಆನೆ ಅಂಬಾರಿ ಉತ್ಸವ, 5555 ಕೆಜಿ ನಾಣ್ಯಗಳಿಂದ ಆನೆಯ ಅಂಬಾರಿ ಸಹಿತ ಫಕೀರ ಸಿದ್ಧರಾಮ ಶ್ರೀಗಳ ತುಲಾಭಾರ ಕಾರ್ಯಕ್ರಮದಲ್ಲಿ ಜೀವನ ದರ್ಶನ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಮಠಮಾನ್ಯಗಳು ಹಲವು ಸಂಸ್ಥೆಗಳನ್ನು ಸ್ಥಾಪಿಸಿ ಧಾರ್ಮಿಕ, ಶೈಕ್ಷಣಿಕ ಏಳ್ಗೆಗೆ ಶ್ರಮಿಸುತ್ತಿವೆ. ಶಿರಹಟ್ಟಿ ಮಠವು ಭಾವೈಕ್ಯತೆ ಸಾರುವ ಮಠ. ಇಂದಿಗೂ ಈ ಕಾರ್ಯವನ್ನು ಫಕೀರ ಸಿದ್ಧರಾಮ ಶ್ರೀಗಳು ಮುಂದುವರೆಸಿಕೊಂಡು ಬಂದಿದ್ದಾರೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಎಚ್‌.ಕೆ. ಪಾಟೀಲ ಮಾತನಾಡಿ, ಶಿರಹಟ್ಟಿ ಫಕೀರೇಶ್ವರ ಮಠದ ತತ್ವ, ಸಿದ್ಧಾಂತ ಎಲ್ಲ ಮಠಗಳು ಅನುಸರಿಸಿದರೆ ದೇಶವೇ ಸ್ವರ್ಗವಾಗಲಿದೆ. ಪ್ರೀತಿ ಗಳಿಸು ದ್ವೇಷ ಅಳಿಸು ಎಂಬ ಪರಂಪರೆಯನ್ನು ಶ್ರೀಮಠವು ಇಂದಿಗೂ ಮುಂದುವರೆಸಿಕೊಂಡು ಹೋಗುತ್ತಿದೆ ಎಂದರು.

ಸಚಿವ ಈಶ್ವರ ಖಂಡ್ರೆ ಮಾತನಾಡಿ, ಇಂದಿಗೂ ದೇಶದ 140 ಕೋಟಿ ಜನ ವಿಭಿನ್ನತೆಯಲ್ಲಿ ಏಕತೆ ಎಂಬ ಸುಂದರ ಜೀವನ ನಡೆಸುತ್ತಿದ್ದಾರೆ. ಆದರೆ, ಇಂದು ಜಾತಿ- ಜಾತಿಗಳಲ್ಲಿ, ಧರ್ಮಧರ್ಮಗಳ ನಡುವೆ ವೈಷಮ್ಯ ಮೂಡಿಸುವ ಕಾರ್ಯವಾಗುತ್ತಿವೆ. ಇಂತವುಗಳಿಂದ ಜಾಗೃತರಾದಲ್ಲಿ ದೇಶವು ರಾಮರಾಜ್ಯವಾಗುವುದರಲ್ಲಿ ಸಂದೇಹವಿಲ್ಲ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಶತಮಾನಗಳಿಂದ ದೇಶ‍ದಲ್ಲಿ ಪ್ರತಿಯೊಂದು ಧರ್ಮವೂ ಸಹ ದಾನದ ಮಹತ್ವ ಸಾರಿವೆ. ದಾನದ ಬಗ್ಗೆ ಹೇಳದ ಧರ್ಮವೇ ಇಲ್ಲ. ನೀರು, ಭೂಮಿ, ಗಾಳಿ, ಅಗ್ನಿಯಲ್ಲಿ ದೇವರನ್ನು ಕಾಣುತ್ತೇವೆ. ಅದರಂತೆ ಮನುಷ್ಯನಲ್ಲೂ ದೇವರನ್ನು ಕಾಣಲು ಮನೋಭಾವ ಯಾವಾಗ ಬರುವುದೋ ಆಗ ದೇಶವು ರಾಮರಾಜ್ಯವಾಗಲಿದೆ ಎಂದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಅಂದುಕೊಂಡಂತೆ ಫಕೀರ ಸಿದ್ಧರಾಮ ಶ್ರೀಗಳ ಅಮೃತ ಮಹೋತ್ಸವದಲ್ಲಿ ಆನೆ, ಅಂಬಾರಿಯೊಂದಿಗೆ ಸಿದ್ಧರಾಮ ಶ್ರೀಗಳ ತುಲಾಭಾರ ನಡೆಸುವ ಮೂಲಕ ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಆನೆ, ಅಂಬಾರಿಯೊಂದಿಗೆ ಸಿದ್ಧರಾಮ ಶ್ರೀಗಳ ತುಲಾಭಾರ ನೋಡುವುದೇ ಒಂದು ಸುಂದರ ಅನುಭವ. ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಕೈಜೋಡಿಸಿದ ಭಕ್ತರ ಕಾರ್ಯ ಶ್ಲಾಘನೀಯ. ಇದನ್ನು ನೋಡಿದರೆ ಭಾರತೀಯ ಸಂಸ್ಕೃತಿ ಎಷ್ಟು ಉದಾತ್ತವಾಗಿದೆ ಎಂಬುದನ್ನು ತೋರಿಸುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಪ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಾದಿ ಶರಣರು ಹೋರಾಡಿದಂತೆ ಶಿರಹಟ್ಟಿ ಮಠವು ಜಾತಿ, ಧರ್ಮ ಹೋಗಲಾಡಿಸಿ ಭಾವೈಕ್ಯತೆ ಸಾರುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ರಾಜ್ಯ ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಸೇರಿದಂತೆ ಹಲವರು ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಗುರುಸಿದ್ಧರಾಜಯೋಗಿಂದ್ರ ಶ್ರೀಗಳು ಆಶೀರ್ವಚನ ನೀಡಿದರು. ಈ ವೇಳೆ ಹಲವು ಸಾಧಕರನ್ನು ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಹಲವರನ್ನು ಸನ್ಮಾನಿಸಲಾಯಿತು.