ಸಾರಾಂಶ
ಶಿರಹಟ್ಟಿ: ಹಿಂದು -ಮುಸ್ಲಿಂ ಭಾವೈಕ್ಯತೆಯ ಶಿರಹಟ್ಟಿ ಫಕೀರೇಶ್ವರ ಮಠದ ಭವ್ಯ ರಥೋತ್ಸವ ಜನಸಾಗರದ ಮಧ್ಯೆ ಸೋಮವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು.
ಶ್ರೀಮಠದ ಪೀಠಾಧಿಪತಿ ಫಕೀರ ಸಿದ್ದರಾಮ ಸ್ವಾಮೀಜಿ ಟೆಂಗಿನಕಾಯಿ ಒಡೆದು ರಥೋತ್ಸವಕ್ಕೆ ಚಾಲನೆ ನೀಡಿದರು. ರಥಕ್ಕೆ ನೆರೆದಿದ್ದ ಭಕ್ತ ಸಮೂಹ ಉತ್ತತ್ತಿ, ಪೇರಲ, ಬಾಳೆ ಹಣ್ಣು ಎಸೆದು ಫಕೀರೇಶ್ವರ ಮಹಾರಾಜ ಕೀ ಜೈ, ಫಕೀರೇಶ್ವರನ ಅಂಗಾರ ನಾಡಿಗೆಲ್ಲ ಬಂಗಾರ, ಫಕೀರೇಶ್ವರನ ಜೋಳಗಿ ನಾಡಿಗೆಲ್ಲ ಹೋಳಿಗೆ, ಹರಹರ ಮಹಾದೇವ ಎಂದು ಜಯಘೋಷ ಮಾಡಿದರು.ಪ್ರತಿ ವರ್ಷ ಬೌದ್ಧ ಪೌರ್ಣಿಮೆಯಂದು ನಡೆಯುವ ಉತ್ತರ ಕರ್ನಾಟಕದ ಪ್ರಸಿದ್ಧ ಜಾತ್ರೆಗಳಲ್ಲಿ ಇದು ಒಂದಾಗಿದೆ. ಸುಡು ಬಿಸಿಲಿನಲ್ಲಿಯೂ ಭಕ್ತ ಸಮೂಹ ತಂಡೋಪತಂಡವಾಗಿ ಫಕೀರೇಶ್ವರ ಮಠಕ್ಕೆ ಧಾವಿಸಿ ಬರುತ್ತಿದ್ದರು. ಬಸ್, ಕಾರು, ಜೀಪು, ಅಟೋ, ಟ್ರ್ಯಾಕ್ಟರ್‌ಗಳಲ್ಲಿ ಬರುವವರು ಒಂದೆಡೆಯಾದರೆ, ಅಸಂಖ್ಯಾತ ಜನರು ಪಾದಯಾತ್ರೆ ಮೂಲಕ ರಥೋತ್ಸವ ನೋಡಲು ಧಾವಿಸಿದ್ದರು.
ಮಠದ ಸಂಪ್ರದಾಯ, ಪರಂಪರೆಯಂತೆ ಕಳಸಾರೋಹಣ ಮಾಡಿದ ದಿನದಂದೇ ಮಠದ ಪೀಠಾಧ್ಯಕ್ಷ ಫಕೀರ ಸಿದ್ದರಾಮ ಸ್ವಾಮೀಜಿ ಪಟ್ಟಣದ ಹೊರ ವಲಯದ ಶಿಕ್ಷಣ ಸಂಸ್ಥೆಗೆ ಬಂದು ನೆಲೆಸುತ್ತಾರೆ. ನಂತರ ರಥೋತ್ಸವದ ದಿನದಂದು ಅವರನ್ನು ಮೆರವಣಿಗೆ ಮೂಲಕ ಪುನಃ ಮಠಕ್ಕೆ ಕರೆತರಲಾಗುತ್ತದೆ.ಭಕ್ತ ಸಮೂಹ ಪಾದಗಟ್ಟಿ ತಲುಪಿ ಮತ್ತೆ ಮೊದಲಿನ ಸ್ಥಳಕ್ಕೆ ರಥವನ್ನು ತಂದರು. ರಥೋತ್ಸವದಲ್ಲಿ ಡೊಳ್ಳು ಕುಣಿತ, ಝಾಂಜ ಮೇಳ, ಹೆಜ್ಜೆ ಮೇಳ, ನಂದಿ ಕೋಲು, ವಾದ್ಯ ಮೇಳ ಮನಸೂರೆಗೊಂಡವು.ಸಿದ್ದರಾಮ ಶ್ರೀಗಳು ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ದೇವಾಲಯಗಳು ಭಕ್ತರ ಜೀವನದ ಅವಿಭಾಜ್ಯ ಅಂಗ. ದೇವರ ಜಾತ್ರೆ, ಉತ್ಸವ ನಮ್ಮ ಸಾಂಸ್ಕೃತಿಕ ಪರಂಪರೆ. ತೇರು ಎಳೆಯುವುದೂ ಸಂಸ್ಕೃತಿಯ ಭಾಗವೇ. ತೇರು ಎಂಬುದು ಸಂಚಾರಿ ದೇವಾಲಯ ಇದ್ದಂತೆ ಎಂದು ಹೇಳಿದರು.
ನಮ್ಮ ದೇಶದಲ್ಲಿ ದೇವಾಲಯಗಳಿಗೆ ಮಹತ್ವ ಇದೆ. ಪ್ರತಿ ಗ್ರಾಮದಲ್ಲಿಯೂ ದೇವಾಲಯಗಳಿವೆ. ಆದರೆ ದೇವಾಲಯದ ಗರ್ಭಗುಡಿಯಲ್ಲಿ ಎಲ್ಲರಿಗೂ ಅವಕಾಶ ಇಲ್ಲ. ಇದೊಂದು ನಾವು ಮಾಡಿಕೊಂಡ ಕೆಟ್ಟ ವ್ಯವಸ್ಥೆ. ಎಲ್ಲರೂ ದೇವರ ಮಕ್ಕಳೆಂದಾಗ ಅಲ್ಲಿ ಎಲ್ಲರಿಗೂ ಅವಕಾಶ ಇರಬೇಕು. ಈ ವ್ಯವಸ್ಥೆಯ ಬದಲಾವಣೆಯೇ ರಥದ ನಿರ್ಮಾಣ. ಹಿರಿಯರು, ಮಠಾಧೀಶರು ಈ ಬದಲಾವಣೆ ಮಾಡಿ ಜನರು ಇರುವಲ್ಲಿಗೆ ರಥ ಎಳೆಯುವ ಮೂಲಕ ಭಗವಂತನ ದರ್ಶನ ಮಾಡಿಸುವ ವ್ಯವಸ್ಥೆ ಮಾಡಿದರು. ದೇವರ ಉತ್ಸವ ಮೂರ್ತಿಯನ್ನೇ ರಥದಲ್ಲಿಟ್ಟು ರಥ ಎಳೆಯಲಾಗುತ್ತದೆ. ಭಕ್ತರಿದ್ದಲ್ಲಿಗೆ ದೇವರು ಬಂದು ದರ್ಶನ ನೀಡುವ ವ್ಯವಸ್ಥೆಯೇ ರಥ ಎಳೆಯುವುದು ಎಂದು ತಿಳಿಸಿದರು.ದೇವರ ಕೃಪೆಯಿಂದ ಈ ವರ್ಷ ನಾಡಿನ ಎಲ್ಲ ಜನರ ಬದುಕು ಹಸನಾಗಿರಲಿ, ಮಳೆ, ಬೆಳೆ ಚೆನ್ನಾಗಿ ಬಂದು ಜನತೆಯ ಮನೆ ಮನ ಬೆಳಗುವಂತಾಗಲಿ ಎಂದು ಹರಸಿದರು. ಮಾನವ ತನ್ನ ಜೀವನದಲ್ಲಿ ಮೇಲು ಕೀಳು ಎಂಬ ಭೇದ ಭಾವ ಮರೆತು ಎಲ್ಲ ಧರ್ಮದ ತಿರುಳು ಒಂದೇ ಎಂಬುದನ್ನು ಅರಿತು ದ್ವೇಷಬಿಟ್ಟು ಪ್ರೀತಿಯಿಂದ ಸನ್ಮಾರ್ಗದಲ್ಲಿ ನಡೆದಾಗಲೇ ಮಾನವನಾಗಿ ಹುಟ್ಟಿದ್ದಕ್ಕೂ ಸಾರ್ಥಕ ಎಂದು ನುಡಿದರು.