ಸಾರಾಂಶ
ಮಹದೇವಪ್ಪ ಎಂ. ಸ್ವಾಮಿ
ಶಿರಹಟ್ಟಿ: ಫೆಂಗಲ್ ಚಂಡಮಾರುತದ ಪರಿಣಾಮ ಮೋಡ ಮುಸುಕಿದ ವಾತಾವರಣ ಹಾಗೂ ಸಣ್ಣಪ್ರಮಾಣದ ಮಳೆಯಾಗಿದ್ದು, ಹಬ್ಬು ಶೇಂಗಾ ಬೆಳೆದ ರೈತರು ಕಂಗಾಲಾಗಿದ್ದಾರೆ.ತಾಲೂಕಿನಾದ್ಯಂತ ಒಂದು ವಾರದಿಂದ ಮೋಡ ಮುಸುಕಿದ ವಾತಾವರಣವಿದೆ. ಈ ಬಾರಿ ಮೊದಲೇ ವಿಪರೀತ ಮಳೆ ಸುರಿದು ಹೊಲಗಳು ಜವಳು ಬಿದ್ದು ರೈತರು ಮುಂಗಾರು ಫಸಲು ಕಳೆದುಕೊಂಡಿದ್ದಾರೆ. ಈಗ ಹಿಂಗಾರು ಪ್ರಮುಖ ವಾಣಿಜ್ಯ ಬೆಳೆ ಹಬ್ಬು ಶೇಂಗಾ ಹರಗಲು ಪ್ರಾರಂಭಿಸಿದ್ದಾರೆ.
ಫಸಲು ಕೈಗೆ ಬರುವ ಹಂತದಲ್ಲಿ ಇಂತಹ ವಾತಾವರಣ ನಿರ್ಮಾಣವಾಗಿದ್ದರಿಂದ ರೈತರು ಚಿಂತಾಕ್ರಾಂತರಾಗಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಪರಿಸ್ಥಿತಿ ಉಂಟಾಗಬಹುದು ಎಂದು ಚಿಂತಿಸುತ್ತಿದ್ದಾರೆ. ಸತತ ೩-೪ ವರ್ಷಗಳಿಂದ ಅತಿವೃಷ್ಟಿ, ಬರಗಾಲ ಸುಳಿಗೆ ರೈತರು ಸಿಕ್ಕು ನರಳುತ್ತಿದ್ದಾರೆ. ಮಳೆ ಸುರಿದು ಮುಂಗಾರು ಹಂಗಾಮಿನ ಬೆಳೆ ನಾಶವಾಗಿದೆ. ಈಗ ಮತ್ತೊಂದು ಹಿಂಗಾರು ವಾಣಿಜ್ಯ ಬೆಳೆಯಾದ ಹಬ್ಬು ಶೇಂಗಾ ಅಲ್ಲಲ್ಲಿ ಹರಗಿ ಬಣವೆ ಒಟ್ಟುವಷ್ಟರಲ್ಲಿ ಅಕಾಲಿಕ ಮಳೆಯೂ ಆರಂಭವಾಗಿದೆ. ರೈತರು ಫಸಲನ್ನು ಸಂರಕ್ಷಿಸಲು ಪರದಾಡುತ್ತಿದ್ದಾರೆ.ಹಬ್ಬು ಶೇಂಗಾ ಕಾಯಿಬಿಡುವ ಸಮಯದಲ್ಲಿ ವಿಪರೀತ ಮಳೆ ಸುರಿದು ತೇವಾಂಶ ಹೆಚ್ಚಾಗಿ ಇಳುವರಿ ಬರದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಕೊರಗಿನ ನಡುವೆಯೇ ಅಕಾಲಿಕ ಮಳೆಯ ಆತಂಕ ರೈತರ ಜೀವ ಹಿಂಡುತ್ತಿದೆ. ಹೀಗೆ ಹಲವಾರು ತೊಂದರೆಗಳ ಮಧ್ಯೆ ಅಪಾರ ಪ್ರಮಾಣದಲ್ಲಿ ಖರ್ಚು ಮಾಡಿ ಬಿತ್ತನೆ ಮಾಡಿದ ಬೆಳೆ ಕೈಸಿಗುವ ಸಮಯದಲ್ಲಿ ಇಂಥ ಪರಿಸ್ಥಿತಿ ಎದುರಾಗಿದ್ದು, ಸಹಜವಾಗಿ ರೈತರಲ್ಲಿ ಆತಂಕ ಮೂಡುವಂತಾಗಿದೆ.
ರೈತರಿಗೆ ಶೇಂಗಾ ಕಾಯಿಗಿಂತಲೂ ತಮ್ಮ ಜೀವನಾಡಿಯಾಗಿರುವ ಹಾಗೂ ಆಪ್ತಮಿತ್ರರಂತಿರುವ ದನಕರುಗಳನ್ನು ಹಾಗೂ ಎತ್ತುಗಳನ್ನು ಪೋಷಿಸಲು ಅವಶ್ಯವಾಗಿ ಮೇವು, ಹೊಟ್ಟು ಬೇಕಾಗಿದ್ದು, ಅಕಾಲಿಕ ಮಳೆ ಸುರಿದಿದ್ದೇ ಆದಲ್ಲಿ ಬಣವೆಗಳಲ್ಲಿ ಉಷ್ಣತೆ (ಕಾವು) ಉಂಟಾಗಿ ಶೇಂಗಾ ಕಾಯಿ ಕಪ್ಪಾಗಿ ಶೇಂಗಾ ಬಳ್ಳಿ ಬೂಸ್ಟ್ ಬಂದು ಎಲೆಮಂಜು ಉದುರಿ ಹೊಟ್ಟುಕೂಡ ಸಿಗದಂತಹ ಸ್ಥಿತಿ ನಿರ್ಮಾಣವಾಗುವ ಬಗ್ಗೆ ರೈತವಲಯ ಮತ್ತೆ ಕಳವಳಕ್ಕೀಡಾಗಿದೆ.ಫೆಂಗಲ್ ಚಂಡಮಾರುತದ ಪ್ರಭಾವ ಶನಿವಾರದಿಂದಲೇ ಆರಂಭವಾಗಿದ್ದು, ಸೋಮವಾರ ನಸುಕಿನ ವೇಳೆಯಿಂದ ಸಂಜೆ ವರೆಗೆ ತುಂತುರು ಮಳೆ ಕಾಣಿಸಿಕೊಂಡಿದೆ. ಕಳೆದ ಒಂದು ವಾರದಿಂದಲೇ ಮೋಡಕವಿದ ವಾತಾವರಣ ಇತ್ತು. ಭಾನುವಾರ ದಿನವಿಡಿ ಮಬ್ಬು ವಾತಾವರಣ, ಸಣ್ಣ ಪ್ರಮಾಣದಲ್ಲಿ ಗಾಳಿ ಬೀಸುತ್ತಿರುವುದರಿಂದ ಮೈಕೊರೆವ ಚಳಿ ಸೃಷ್ಟಿಯಾಗಿದೆ.ಮುಂಗಾರು ಹಂಗಾಮಿನಲ್ಲಿಯೂ ಯಾವುದೇ ಫಸಲು ಬರದೇ ರೈತರು ಕಂಗಾಲಾಗಿದ್ದಾರೆ. ಹಿಂಗಾರು ವಾಣಿಜ್ಯ ಬೆಳೆ ಹಬ್ಬು ಶೇಂಗಾ ಹರಗುವಷ್ಟರಲ್ಲಿ ಅಕಾಲಿಕ ಮಳೆಯಾಗುತ್ತಿದೆ. ಕೂಲಿ ಆಳುಗಳ ಕೊರತೆಯಿಂದಾಗಿ ಫಸಲು ಹಾಳಾಗುತ್ತಿದೆ ಎಂದು ರೈತರು ಕೊರಗುತ್ತಿದ್ದು, ಕೆಲವರು ಬಣವೆ ಹಾಕಿ ಪ್ಲಾಸ್ಟಿಕ್ ಹೊದಿಕೆ ಹಾಕಿದ್ದಾರೆ. ಇನ್ನು ಕೆಲವು ರೈತರು ಹರಗಿ ಹೊಲದಲ್ಲಿಯೇ ಬಿಟ್ಟಿದ್ದಾರೆ. ಹವಾಮಾನ ವೈಪರಿತ್ಯದಿಂದಾಗಿ ಒಟ್ಟಾರೆ ರೈತರಲ್ಲಿ ಕೃಷಿಯೇ ಬೇಡ ಎನ್ನುವ ಮನಸ್ಥಿತಿ ಮೂಡಿದೆ ಎಂದು ರೈತ ಗಂಗಪ್ಪ ಚವಡಾಳ ಹೇಳಿದರು.ಶಿರಹಟ್ಟಿ ತಾಲೂಕಿನಲ್ಲಿ ಒಟ್ಟು ೩,೯೦೦ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿದೆ. ಈಗಾಗಲೇ ಶೇ. ೮೦ರಷ್ಟು ರೈತರು ಶೇಂಗಾ ಹರಗಿ ಬಣವೆ ಹಾಕಿಕೊಂಡಿದ್ದಾರೆ. ಹವಾಮಾನ ಇಲಾಖೆ ವರದಿಯಂತೆ ಫೆಂಗಲ್ ಚಂಡಮಾರುತದಿಂದ ಅಕಾಲಿಕ ಮಳೆಯಾಗಿದೆ. ಹಬ್ಬು ಶೇಂಗಾ ಮತ್ತು ಹೊಟ್ಟು ಹಾನಿಯಾಗುವ ಸಾಧ್ಯತೆ ಇದೆ. ರೈತರು ಮುಂಜಾಗ್ರತಾ ಕ್ರಮವಾಗಿ ರೈತ ಸಂಪರ್ಕ ಕೇಂದ್ರದಲ್ಲಿ ದೊರೆಯುವ ತಾಡಪತ್ರಿ ಖರೀದಿಸಿ, ರಕ್ಷಣೆ ಮಾಡಿಕೊಳ್ಳಬೇಕು ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ರೇವಣೆಪ್ಪ ಮನಗೂಳಿ ಹೇಳಿದರು.