ಸಾರಾಂಶ
ಶಿರಹಟ್ಟಿ: ರೈತರ ಸಮಸ್ಯೆ ಆಲಿಸಿ ನ್ಯಾಯ ದೊರಕಿಸಿಕೊಡಬೇಕು. ಅಲ್ಲಿಯವರೆಗೂ ಯಾವುದೇ ವಹಿವಾಟು ನಡೆಸಕೂಡದು ಎಂದು ಆಗ್ರಹಿಸಿ ಮಂಗಳವಾರ ನೂರಾರು ರೈತರು ಇಲ್ಲಿಯ ರೇಷ್ಮೆ ಮಾರುಕಟ್ಟೆ ಬಂದ್ ಮಾಡಿ ಪ್ರತಿಭಟಿಸಿದರು.
ರೇಷ್ಮೆ ಮಾರುಕಟ್ಟೆ ಅಧಿಕಾರಿ, ರೀಲಿಂಗ್ ಇನ್‌ಸ್ಪೆಕ್ಟರ್ ಹಾಗೂ ರೇಷ್ಮೆಗೂಡು ಖರೀದಿ ಮಾಡುವವರು ಶಾಮೀಲಾಗಿ ಒಳ ಒಪ್ಪಂದ ಮಾಡಿಕೊಂಡು ರೈತರ ರೇಷ್ಮೆ ಗೂಡಿಗೆ ಯೋಗ್ಯ ಬೆಲೆ ನೀಡದೇ ಕಡಿಮೆ ಬೆಲೆಗೆ ಖರೀದಿಸುವುದಲ್ಲದೇ, ಮಾರಾಟಕ್ಕೆ ತಂದ ರೇಷ್ಮೆ ಗೂಡನ್ನು ಕಳ್ಳತನ ಮಾಡುತ್ತಿರುವ ಎಲ್ಲರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ನಂತರ ೫ ಗಂಟೆ ವೇಳೆಗೆ ಅಧಿಕಾರಿಗಳು ಆಗಮಿಸುತ್ತಿದ್ದಂತೆ ತಮಗಾಗುತ್ತಿರುವ ಅನ್ಯಾಯವನ್ನು ಎಳೆ ಎಳೆಯಾಗಿ ಅಧಿಕಾರಿಗಳ ಗಮನಕ್ಕೆ ತಂದರು.ಈ ವೇಳೆ ರೇಷ್ಮೆ ಬೆಳೆಗಾರರಾದ ನೀಲಪ್ಪ ಖಾನಾಪೂರ, ಮಂಜುನಾಥ ಘಂಟಿ, ಎಚ್.ಎಂ. ದೇವಗೀರಿ ಮಾತನಾಡಿ, ಸ್ಥಳೀಯ ಸರಕಾರಿ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಪಾರದರ್ಶಕವಾಗಿ ಗೂಡು ಖರೀದಿ ವ್ಯವಹಾರ ನಡೆಯುತ್ತಿಲ್ಲ. ಗೂಡು ಖರೀದಿಸುವವರ ಪರವಾನಗಿ ನವೀಕರಣವಾಗಿಲ್ಲ. ಬೇನಾಮಿ ವ್ಯಕ್ತಿಗಳು ಅಧಿಕಾರಿಗಳ ಸಹಕಾರದಿಂದ ಕಮ್ಮಿ ಬೆಲೆಗೆ ರೇಷ್ಮೆ ಗೂಡನ್ನು ಖರೀದಿಸಿ ರೈತರ ರಕ್ತ ಹೀರುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ದೂರಿದರು.ರೇಷ್ಮೆ ಮಾರುಕಟ್ಟೆಯಲ್ಲಿ ಯಾವುದೇ ಮೂಲ ಸೌಲಭ್ಯವಿಲ್ಲ. ಮಾರುಕಟ್ಟೆ ಸುತ್ತಲೂ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಎಲ್ಲೆಂದರಲ್ಲಿ ಸಾರಾಯಿ ಬಾಟಲಿಗಳು ಬಿದ್ದಿದ್ದು, ಅಧಿಕಾರಿಗಳು ಯಾವುದನ್ನು ಗಮನಿಸದೇ ಬೇಜವಾಬ್ದಾರಿ ತೋರುತ್ತಿದ್ದಾರೆ ಎಂದು ಆರೋಪಿಸಿದರು. ಕಳೆದ ೬ ವರ್ಷಗಳಿಂದ ಖರೀದಿದಾರರು ರೀಲಿಂಗ್ ಶೆಡ್ ಬಾಡಿಗೆ ಕಟ್ಟದೇ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ. ರೀಲಿಂಗ್ ಶೆಡ್ ಕೋಳಿ ಸಾಕಾಣಿಕೆಗೆ ಬಾಡಿಗೆ ರೂಪದಲ್ಲಿ ನೀಡಿದ್ದು, ಸ್ಥಳೀಯ ರೇಷ್ಮೆ ಮಾರುಕಟ್ಟೆ ಅಧಿಕಾರಿ ರೀಲಿಂಗ್ ಇನ್‌ಸ್ಪೆಕ್ಟರ್ ಖಾಸಗಿ ವ್ಯಕ್ತಿಗಳಿಂದ ಪ್ರತಿ ತಿಂಗಳು ಬಾಡಿಗೆ ಹಣ ಪಡೆದು ಸರ್ಕಾರಿ ಆಸ್ತಿಯನ್ನು ಸ್ವಂತಕ್ಕೆ ಬಳಕೆ ಮಾಡಿಕೊಂಡು ರೇಷ್ಮೆ ಮಾರುಕಟ್ಟೆ ನೆಲ ಕಚ್ಚುವಂತೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.ಅಧಿಕಾರಿಗೆ ಮನವಿ: ಬೆಳಗಾವಿ ಪ್ರಭಾರಿ ರೇಷ್ಮೆ ಜಂಟಿ ನಿರ್ದೇಶಕ ಎಸ್.ಎಂ. ಕೋರೆ ಅವರಿಗೆ ರೈತರು ಲಿಖಿತ ಮನವಿ ಸಲ್ಲಿಸಿದರು. ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಮತ್ತು ರೀಲರ್‌ಗಳ ದಬ್ಬಾಳಿಕೆ ತಡೆಯಲು ತುರ್ತು ಕಟ್ಟುನಿಟ್ಟಿನ ಆದೇಶ ಮಾಡುವಂತೆ ಒತ್ತಾಯಿಸಿದರು. ಅನಧಿಕೃತ ಚಟುವಟಿಕೆಗೆ ಕಾರಣರಾದ ಸ್ಥಳೀಯ ರೇಷ್ಮೆ ಮಾರುಕಟ್ಟೆ ಅಧಿಕಾರಿ ಪಿ.ಎಚ್. ಹಳಿಯಾಳ, ರೀಲಿಂಗ್ ಇನ್‌ಸ್ಪೆಕ್ಟರ್ ಪ್ರಕಾಶ ಸಾಮ್ರಾಣಿ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಅಧಿಕಾರಿ ಸ್ಥಳೀಯ ಮಾರುಕಟ್ಟೆಯಲ್ಲಿ ಅವ್ಯವಹಾರ ನಡೆದಿರುವುದು ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಕುರಿತು ಈಗಾಗಲೇ ಗಮನಕ್ಕೆ ಬಂದಿದೆ. ಒಮ್ಮೆಲೆ ಕಾನೂನು ಕ್ರಮ ತೆಗೆದುಕೊಳ್ಳಲು ಆಗುವುದಿಲ್ಲ. ಸ್ಥಳೀಯ ಅಧಿಕಾರಿಗಳಿಂದಲೇ ಆಗಿರುವ ಲೋಪಗಳ ಬಗ್ಗೆ ಹಾಗೂ ದೋಷಾರೋಪ ವರದಿ ಪಡೆದುಕೊಂಡು ಹೆಚ್ಚುವರಿ ನಿರ್ದೇಶಕರು ಮತ್ತು ಕಮೀಷನರ್ ಗಮನಕ್ಕೆ ತಂದು ಒಂದು ತಿಂಗಳೊಳಗಾಗಿ ರೈತರಿಗೆ ನ್ಯಾಯ ದೊರಕಿಸಿ ಕೊಡಲು ಶ್ರಮಿಸುವುದಾಗಿ ಭರವಸೆ ನೀಡಿದರು.ಜಿಲ್ಲೆಯ ಹಿರಿಯ ರೇಷ್ಮೆ ಇಲಾಖೆ ಅಧಿಕಾರಿಗಳು ಬರುವವರೆಗೂ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಬೆಳಗ್ಗೆಯಿಂದಲೇ ಶಿರಹಟ್ಟಿ ಪೊಲೀಸ್ ಠಾಣೆ ವತಿಯಿಂದ ಬಿಗಿಯಾದ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಜಿಲ್ಲಾ ರೇಷ್ಮೆ ಉಪನಿರ್ದೇಶಕ ಕೈಲಾಸ ಮೂರ್ತಿ, ಜಿಲ್ಲಾ ರೇಷ್ಮೆ ಸಹಾಯಕ ನಿರ್ದೇಶಕ ಸಿ.ಎಚ್. ಮುದಗಲ್ ಇದ್ದರು. ಎನ್.ವೈ. ಕರಿಗಾರ, ಆನಂದ ಸ್ವಾಮಿ, ಗೂಳಪ್ಪ ಕರಿಗಾರ, ಹನಮಂತ ಹುಯಿಲಗೋಳ, ನಾಗರಾಜ ಇಂಗಳಗಿ, ಈರಣ್ಣ ಕಲ್ಯಾಣಿ, ನಿಂಗಪ್ಪ ಕರಿಗಾರ, ಫಕ್ಕಿರೇಶ ಕರಿಗಾರ, ಬಸವರಾಜ ಪೂಜಾರ ಇದ್ದರು.