ಶಿರಹಟ್ಟಿ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ಪಾಲು

| Published : Aug 21 2024, 12:33 AM IST

ಸಾರಾಂಶ

ಶಿರಹಟ್ಟಿ ಪಟ್ಟಣ ಪಂಚಾಯತ್ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ದೇವಕ್ಕ ಯಲ್ಲವ್ವ ಗುಡಿಮನಿ ಅಧ್ಯಕ್ಷರಾಗಿ ಹಾಗೂ ನೀಲವ್ವ ಯಲ್ಲಪ್ಪಗೌಡ ಹುಬ್ಬಳ್ಳಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶಿರಹಟ್ಟಿ: ಪಟ್ಟಣ ಪಂಚಾಯತ್ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ದೇವಕ್ಕ ಯಲ್ಲವ್ವ ಗುಡಿಮನಿ ಅಧ್ಯಕ್ಷರಾಗಿ ಹಾಗೂ ನೀಲವ್ವ ಯಲ್ಲಪ್ಪಗೌಡ ಹುಬ್ಬಳ್ಳಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಟ್ಟಣ ಪಂಚಾಯಿತಿಯ ಒಟ್ಟು ೧೮ ಸದಸ್ಯರಲ್ಲಿ ಕಾಂಗ್ರೆಸ್ ೧೧ ಸದಸ್ಯರು, ಬಿಜೆಪಿ ೭ ಸದಸ್ಯರು ಆಯ್ಕೆಯಾಗಿದ್ದರು. ಚುನಾವಣಾ ಪ್ರಕ್ರಿಯೆಯಲ್ಲಿ ಬಿಜೆಪಿ ಓರ್ವ ಮಹಿಳಾ ಸದಸ್ಯೆ ಅನಿತಾ ಬಾರಬರ ಗೈರಾಗಿದ್ದರು. ಮಂಗಳವಾರ ಬೆಳಗ್ಗೆ ಚುನಾವಣಾ ಅಧಿಕಾರಿಗಳು ಆಗಮಿಸಿ ೧೦ರಿಂದ ೧೨ರ ವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಿಸಿದರು.

ಈ ಬಾರಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲಾಗಿತ್ತು. ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ವಾರ್ಡ್ ನಂ. ೧೫ರ ದೇವಕ್ಕ ತಾಯಿ ಯಲ್ಲವ್ವ ಗುಡಿಮನಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ವಾರ್ಡ್‌ ನಂ. ೪ರ ನೀಲವ್ವ ಯಲ್ಲಪ್ಪಗೌಡ ಹುಬ್ಬಳ್ಳಿ ನಾಮಪತ್ರ ಸಲ್ಲಿಸಿದ್ದರು.

ಚುನಾವಣೆ ಅಧಿಕಾರಿಯಾಗಿದ್ದ ತಹಸೀಲ್ದಾರ್ ಅನಿಲ ಬಡಿಗೇರ ಶಿರಹಟ್ಟಿ ಪಟ್ಟಣ ಪಂಚಾಯಿತಿ ಬಾಕಿ ಉಳಿದ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಗೆಲುವನ್ನು ಅಧಿಕೃತವಾಗಿ ಘೋಷಣೆ ಮಾಡಿದರು. ಪಪಂ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ, ಜಮೀರ ಮನಿಯಾರ, ಸಂತೋಷ ಅಸ್ಕಿ ಇದ್ದರು.

ಅಭಿವೃದ್ದಿ ವಿಷಯದಲ್ಲಿ ರಾಜಕೀಯವಿಲ್ಲ

ಶಿರಹಟ್ಟಿ ಪಟ್ಟಣದ ಜನತೆಯಲ್ಲಿ ಅಭಿವೃದ್ಧಿಗೆ ಪೂರಕವಾದ ಮನೋಭಾವ ಇದೆ. ಒಳ್ಳೆಯ ಕೆಲಸಕ್ಕೆ ಸದಾ ಪ್ರೋತ್ಸಾಹ, ಬೆಂಬಲ ನೀಡುತ್ತಾರೆ. ಈ ರೀತಿಯ ಪ್ರೋತ್ಸಾಹ ಸಿಕ್ಕಲ್ಲಿ ಅಧ್ಯಕ್ಷರಾಗಿ ಕೆಲಸ ಮಾಡುವುದಕ್ಕೆ ಖುಷಿಯಾಗುತ್ತದೆ ಎಂದು ನೂತನ ಅಧ್ಯಕ್ಷರಾದ ದೇವಕ್ಕ ಗುಡಿಮನಿ ಹೇಳಿದರು.

ಅಭಿವೃದ್ದಿ ವಿಷಯದಲ್ಲಿ ನಾನು ಯಾವುದೇ ರಾಜಕೀಯ ಮಾಡುವುದಿಲ್ಲ. ಆದರೆ ಸ್ವಾರ್ಥಕ್ಕೋಸ್ಕರ ಅಭಿವೃದ್ಧಿ ಕಡೆಗಣಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಜನರಿಗೆ ಸರ್ಕಾರದ ಸೌಲಭ್ಯಗಳನ್ನು ಅನುಭವಿಸುವ ಹಕ್ಕಿದೆ. ಜನಪ್ರತಿನಿಧಿಯಾದವರು ಅದನ್ನು ಕೊಡಿಸಬೇಕು. ಇಲ್ಲವಾದಲ್ಲಿ ಅದಕ್ಕಿಂತ ವಂಚನೆ ಮತ್ತೊಂದಿಲ್ಲ ಎಂದು ಹೇಳಿದರು.

ಹೊರ ನಡೆದ ಬಿಜೆಪಿ ಸದಸ್ಯರು

ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಘೋಷಣೆಗೂ ಮೊದಲೇ ೬ ಬಿಜೆಪಿ ಸದಸ್ಯರು ಹೊರಗೆ ಹೋದರು.

ಬಂದೋಬಸ್ತ್‌

ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಘೋಷಣೆಯಾದ ಮೇಲೆ ಪಟ್ಟಣದಲ್ಲಿ ಮೆರವಣಿಗೆಗೆ ಸಜ್ಜಾಗಿದ್ದ ಜನರ ಹತೋಟಿಗಾಗಿ ಪಿಎಸ್‌ಐ ಶಿವಾನಂದ ಲಮಾಣಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಪಟಾಕಿ ಸಿಡಿಸಿ, ಗುಲಾಲ್ ಎರಚಿ ಸಂಭ್ರಮದಿಂದ ಮೆರವಣಿಗೆ ಕೈಗೊಂಡರು. ಚುನಾವಣೆ ಅತ್ಯಂತ ಶಾಂತವಾಗಿ ನೆರವೇರಿತು.

ಮಾಜಿ ಶಾಸಕರಾದ ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ಸುಜಾತ ದೊಡ್ಡಮನಿ, ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಮಾಯೂನ ಮಾಗಡಿ, ಬುಡನಶ್ಯಾ ಮಕಾನದಾರ, ಹಮಿದ ಸನದಿ, ಸಿ.ಕೆ. ಮುಳಗುಂದ, ಡಿ.ಕೆ. ಹೊನ್ನಪ್ಪನವರ, ಮುತ್ತು ಭಾವಿಮನಿ, ರಾಮಚಂದ್ರ ಗಡಾದ, ಅಲ್ಲಾಭಕ್ಷಿ ನಗಾರಿ, ಆನಂದ ಕೋಳಿ ಸೇರಿ ನೂರಾರು ಜನ ಪಕ್ಷದ ಅಭಿಮಾನಿಗಳು ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿದರು.