ರಾಜಸ್ಥಾನ್ ಸಮಾಜದವರು ಇಂದು ನಡೆದ ಭಾವೈಕ್ಯಯತೆಯ ಸಮಾನತೆ ಸಂದೇಶ ಸಾರುವ ಧರ್ಮ ರಥದ ಮೆರವಣಿಗೆಯಲ್ಲಿ ಕನ್ನಡ ಬಾವುಟಗಳನ್ನು ಕೈಯಲ್ಲಿ ಹಿಡಿದುಕೊಂಡು, ಕನ್ನಡದ ಶಲ್ಯಗಳನ್ನು ಹಾಕಿ ತಮ್ಮ ಕನ್ನಡ ಪ್ರೇಮ ಮೆರೆದಿದ್ದಾರೆ. ತಮಗೆ ಆಶ್ರಯ ನೀಡಿರುವ ಕನ್ನಡದ ಮಣ್ಣಿನ ಋಣ ತೀರಿಸುವ ದಿಕ್ಕಿನಲ್ಲಿ ಭಾವೈಕ್ಯತೆಯ ಸಂದೇಶ ನಾಡಿಗೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಹಾಲಿಗೆ ಸಕ್ಕರೆ ಬೆರೆತರೆ ಹಾಲಿನ ರುಚಿಯು ಹೆಚ್ಚಾಗುವಂತೆ ಶಿರವಿ ಸಮಾಜದ ಬಂಧುಗಳು ಎಲ್ಲಾ ಜಾತಿ, ವರ್ಗಗಳ ಜನರ ಜೊತೆ ಒಂದಾಗಿ ಬೆರೆಯುವ ಮೂಲಕ ನಾಡಿಗೆ ಕೋಮು ಸೌಹಾರ್ದತೆಯ ಸಂದೇಶ ಸಾರಿದ್ದಾರೆ ಎಂದು ದೇಶದ ಶಿರವಿ ಸಮಾಜದ 19ನೇ ರಮಗುರು ದಿವಾನ್ ಮಾಧವ ಸಿಂಗ್ ಜೀ ಹೇಳಿದರು. ಪಟ್ಟಣದ ಶಿರವಿ ಸಮಾಜದಿಂದ ನಿರ್ಮಿಸಿರುವ ಅಯಿಮಾ ದೇವಿ ಮಂದಿರದ ನೂತನ ಭವನ ಉದ್ಘಾಟಿಸಿ ಮಾತನಾಡಿ, ತಾಲೂಕಿನ ರಾಜಸ್ಥಾನ್ ಸಮಾಜದ ಶಿರವಿ ಸಮುದಾಯದ ಬಂಧುಗಳ ಒಗ್ಗಟ್ಟು ಹಾಗೂ ಸಂಘಟನೆ, ಕನ್ನಡಪ್ರೇಮವು ರಾಜ್ಯಕ್ಕೆ ಮಾದರಿಯಾಗಿದೆ ಎಂದರು.ರಾಜಸ್ಥಾನ್ ಸಮಾಜದವರು ಇಂದು ನಡೆದ ಭಾವೈಕ್ಯಯತೆಯ ಸಮಾನತೆ ಸಂದೇಶ ಸಾರುವ ಧರ್ಮ ರಥದ ಮೆರವಣಿಗೆಯಲ್ಲಿ ಕನ್ನಡ ಬಾವುಟಗಳನ್ನು ಕೈಯಲ್ಲಿ ಹಿಡಿದುಕೊಂಡು, ಕನ್ನಡದ ಶಲ್ಯಗಳನ್ನು ಹಾಕಿ ತಮ್ಮ ಕನ್ನಡ ಪ್ರೇಮ ಮೆರೆದಿದ್ದಾರೆ. ತಮಗೆ ಆಶ್ರಯ ನೀಡಿರುವ ಕನ್ನಡದ ಮಣ್ಣಿನ ಋಣ ತೀರಿಸುವ ದಿಕ್ಕಿನಲ್ಲಿ ಭಾವೈಕ್ಯತೆಯ ಸಂದೇಶ ನಾಡಿಗೆ ನೀಡಿದ್ದಾರೆ ಎಂದು ಶ್ಲಾಘಿಸಿದರು.
ಶಿರವಿ ಸಮಾಜದ ಮೇಲೆ ಕನ್ನಡಿಗರು ಇಟ್ಟಿರುವ ಪ್ರೀತಿ, ಮಮತೆ, ವಿಶ್ವಾಸ, ಬೆಂಬಲ ಹಾಗೂ ಪ್ರೋತ್ಸಾಹವನ್ನು ಕಂಡು ನನಗೆ ಹೃದಯ ತುಂಬಿ ಬಂದಿದೆ. ದೇವಿಯ ಮಂದಿರ ನಿರ್ಮಿಸಿ ಕೋಮು ಸೌಹಾರ್ದತೆ, ಸಹಬಾಳ್ವೆಗೆ ಕಾರಣರಾಗಿದ್ದಾರೆ ಎಂದರು.ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮಾತನಾಡಿ, ತಾಲೂಕಿನಲ್ಲಿ ರಾಜಸ್ಥಾನ್ ಸಮಾಜದವರು ಸೌಹಾರ್ದತೆಯಿಂದ ಬದುಕುವ ಜೊತೆಗೆ ಗ್ರಾಮದೇವತೆ ದೊಡ್ಡಕೇರಮ್ಮನವರ ಜಾತ್ರೆ ವೇಳೆ 10 ಸಾವಿರಕ್ಕೂ ಹೆಚ್ಚಿನ ಜನರಿಗೆ ಅನ್ನಪ್ರಸಾದ ನೀಡುವ ಮೂಲಕ ನಾವು ಕೊಡುಗೆ ದಾನಗಳು ಕೂಡ ಹೌದು ಎಂಬುದನ್ನು ನಿರೂಪಿಸಿ ತೋರಿಸಿಕೊಟ್ಟಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಶಾಸಕ ಎಚ್.ಟಿ.ಮಂಜು ಮಾತನಾಡಿ, ಸಮಾಜದ ಜನರು ತಮ್ಮ ಒಗ್ಗಟ್ಟಿನಿಂದ ಚಾಮುಂಡೇಶ್ವರಿ ತಾಯಿ ಆಯಿಮಾ ದೇವಿ ಮಂದಿರವನ್ನು ಭವ್ಯವಾಗಿ ನಿರ್ಮಿಸಿ ನಮ್ಮ ಸಂಸ್ಕೃತಿ ಹಾಗೂ ಪರಂಪರೆ ಉಳಿಸಿ ಬೆಳೆಸುವ ಕೆಲಸವನ್ನು ಬದ್ಧತೆಯಿಂದ ಮಾಡುತ್ತಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಶೀಳನೆರೆ ಅಂಬರೀಶ್, ಪುರಸಭೆ ಮಾಜಿ ಅಧ್ಯಕ್ಷ ನಟರಾಜ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಎಚ್.ಆರ್.ಲೋಕೇಶ್, ಕೆ.ಆರ್.ರವೀಂದ್ರಬಾಬು, ತಾಲೂಕು ಜೆಡಿಎಸ್ ಮುಖಂಡ ಜಾನಕಿರಾಮ್, ನಿರ್ಗಮಿತ ಆರಕ್ಷಕ ನಿರೀಕ್ಷಕಿ ಸುಮಾರಾಣಿ, ತಾಲೂಕಿನ ಸಿರವಿ ಸಮಾಜದ ಅಧ್ಯಕ್ಷ ಜೈ ರಾಮ್, ಕಾರ್ಯದರ್ಶಿ ದಿನೇಶ್, ಖಜಾಂಚಿ ಧರ್ಮೇಂದ್ರ, ಮಲ್ಲಾರಾಮ್, ಮೋತಿ ರಮೇಶ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು.
ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರಾಜಸ್ಥಾನದಿಂದ ಆಗಮಿಸಿದ್ದ ಆಯಿಮಾ ಮಂದಿರದ ಧರ್ಮ ರಥದ ಮೆರವಣಿಗೆಯೊಂದಿಗೆ ರಾಜಸ್ಥಾನ್ ಸಮಾಜದ ಪುರುಷರು ಹಾಗೂ ಹೆಣ್ಣು ಮಕ್ಕಳು ಸಾಂಪ್ರದಾಯಿಕ ವೇಷ ಭೂಷಣ ಧರಿಸಿ, ಬಾಂಗ್ರಾ ನೃತ್ಯವನ್ನು ಪ್ರದರ್ಶಿಸಿ ನಾಡಿಗೆ ಭಾವೈಕ್ಯತೆಯ ಸಂದೇಶವನ್ನು ನೀಡಿದರು.