ಸಾರಾಂಶ
ಶಿರಹಟ್ಟಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಚಿವ ಸ್ಥಾನದಿಂದ ಕೈ ಬಿಡಬೇಕೆಂದು ಆಗ್ರಹಿಸಿ ಡಿ. ೨೬ರಂದು ಗುರುವಾರ ಶಿರಹಟ್ಟಿ ಬಂದ್‌ಗೆ ಕರೆ ನೀಡಲಾಗಿದೆ ಎಂದು ತಾಲೂಕು ಎಸ್ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುತ್ತುರಾಜ ಭಾವಿಮನಿ ಹೇಳಿದರು.
ಮಂಗಳವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದ ೭೫ನೇ ವರ್ಷದ ಸಂದರ್ಭದಲ್ಲಿ ಲೋಕಸಭೆಯಲ್ಲಿ ವಿಸ್ತೃತ ಚರ್ಚೆ ಸಂದರ್ಭದಲ್ಲಿ ಗೃಹ ಸಚಿವರ ಹೇಳಿಕೆ ಅಂಬೇಡ್ಕರ್ ಅವರನ್ನು ಅಪಮಾನಿಸುವ ಉದ್ದೇಶ ಮಾತ್ರವಲ್ಲ, ಜಾತಿ ವ್ಯವಸ್ಥೆಯನ್ನು ಯಥಾ ರೀತಿ ಕಾಯ್ದುಕೊಳ್ಳುವ ದುರುದ್ದೇಶದಿಂದ ಕೂಡಿದೆ ಎಂದು ಆರೋಪಿಸಿದರು.ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಬೇಕಾದ ಪ್ರಧಾನಿ ನರೇಂದ್ರ ಮೋದಿ ಇದನ್ನು ಸಮರ್ಥಿಸಿಕೊಂಡಿರುವುದು ಅತ್ಯಂತ ಶೋಚನೀಯ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಗೃಹ ಸಚಿವರನ್ನು ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಶಿರಹಟ್ಟಿ ಬಂದ್‌ಗೆ ಕರೆ ನೀಡಿದ್ದು, ಅಂದು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಲೋಕಸಭೆಯ ಕಲಾಪದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ ಬಗ್ಗೆ ಸದನದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದು, ಇದು ನಮ್ಮ ದೇಶದ ಇಡೀ ಜನತಗೆ ಬೇಸರ ತಂದಿದೆ. ಇಂತಹ ಅವಹೇಳನಾಕಾರಿ ಮಾತುಗಳನ್ನಾಡಲು ಕೇಂದ್ರ ಸರ್ಕಾರ ಅವಕಾಶ ಕೊಡಬಾರದು, ಇಂತಹ ಅವಹೇಳನಾಕಾರಿ ಮಾತುಗಳನ್ನಾಡಿದ ಗೃಹ ಸಚಿವ ಅಮಿತ್ ಶಾ ಅವರನ್ನು ಕೂಡಲೇ ಗೃಹ ಸಚಿವ ಹುದ್ದೆಯಿಂದ ವಜಾಗೊಳಿಸಿ ದೇಶದ ಜನತೆಯಲ್ಲಿ ಕ್ಷಮೆಯಾಚಿಸಬೇಕೆಂದರು.ಡಿ. ೨೬ರಂದು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆಯನ್ನು ವಿವಿಧ ಕನ್ನಡಪರ, ದಲಿತಪರ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಶಿರಹಟ್ಟಿ ಬಂದ್‌ಗೆ ಕರೆ ನೀಡಿದ್ದು, ಅಂದು ನಡೆಯುವ ಈ ಬೃಹತ್ ಬಂದ್ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲ ಸಂಘಟನೆಗಳು, ಕಾಂಗ್ರೆಸ್ ಪಕ್ಷದ ಎಲ್ಲ ಕಾರ್ಯಕರ್ತರು, ಶಿರಹಟ್ಟಿ ವರ್ತಕರ ಸಂಘಗಳು ಸೇರಿದಂತೆ ಎಲ್ಲರೂ ಸಹಕಾರ ನೀಡಬೇಕೆಂದು ಎಲ್ಲರಲ್ಲಿ ವಿನಂತಿಸಿದರು.
ಈ ಸಂಧರ್ಭದಲ್ಲಿ ಹಮೀದ ಸನದಿ, ಚಾಂದಸಾಬ್ ಮುಳಗುಂದ, ಸುರೇಶ ಬೀರಣ್ಣವರ, ಮಹಾಂತೇಶ ದಶಮನಿ, ಬಸವರಾಜ ಕಂಬಳಿ, ಸಂತೋಷ ಕುರಿ, ಪ್ರಕಾಶ ಬಡೆಣ್ಣವರ, ಮಲೀಕ್ ಒಂಟಿ, ಮಂಜುನಾಥ ಗುಡಿಮನಿ, ದೇವೆಂದ್ರ ಶಿಂಧೆ ಸೇರಿದಂತೆ ಇನ್ನೂ ಅನೇಕರಿದ್ದರು.