ಶಾಸಕ ಹರೀಶ್‌ ಪೂಂಜ ನೇತೃತ್ವದ ಶಿರ್ಲಾಲು ಗ್ರಾಮ ಪಂಚಾಯಿತಿ ಜನಸ್ಪಂದನೆ ಸಭೆ

| Published : Jul 24 2025, 12:55 AM IST

ಶಾಸಕ ಹರೀಶ್‌ ಪೂಂಜ ನೇತೃತ್ವದ ಶಿರ್ಲಾಲು ಗ್ರಾಮ ಪಂಚಾಯಿತಿ ಜನಸ್ಪಂದನೆ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಶಾಸಕರ ಬಹು ಉದ್ದೇಶಿತ ಜನಸ್ಪಂದನಾ ಕಾರ್ಯಕ್ರಮ ಶಿರ್ಲಾಲು ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಮಂಗಳವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಶಾಸಕರ ಬಹು ಉದ್ದೇಶಿತ ಜನಸ್ಪಂದನಾ ಕಾರ್ಯಕ್ರಮ ಶಿರ್ಲಾಲು ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಮಂಗಳವಾರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶಾಸಕ ಹರೀಶ ಪೂಂಜ, ಜನ ಸಾಮಾನ್ಯರು ತಾಲೂಕು ಕಚೇರಿಗೆ ಅಲೆದಾಡುವುದಕ್ಕಿಂತ ಅಧಿಕಾರಿಗಳು ಗ್ರಾಮಕ್ಕೆ ಬಂದಲ್ಲಿ ಅನುಕೂಲವಾದೀತು ಎಂಬ ಉದ್ದೇಶದಿಂದ ಜನಸ್ಪಂದನೆ ನಡೆಸುತ್ತಿದ್ದೇನೆ. ರಾಜ್ಯದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಮಾತ್ರ ಇಂತಹ ಜನಪರ ಕಾರ್ಯಕ್ರಮ ನಡೆಯುತ್ತಿದೆ. ಇಂದು ನಡೆಯುತ್ತಿರುವುದು 10 ನೇ ಕಾರ್ಯಕ್ರಮ ಎಂದರು.

ಬಳಿಕ ಪಂಚಾಯಿತಿ ವ್ಯಾಪ್ತಿಯ ಸಾಮೂಹಿಕ ಸಮಸ್ಯೆಗಳ ಬಗ್ಗೆ ಗಮನ ಕೊಡಲಾಯಿತು. ಶಿರ್ಲಾಲಿನ 89/1 ಸರ್ವೆ ನಂ. ನಲ್ಲಿ 52 ಮನೆಗಳಿದ್ದು 94ಸಿ ಸಿಗಲು ಪರದಾಡುವಂತಾಗಿದೆ. ಇದು ಅರಣ್ಯ ಎಂದು ಗುರುತಿಸಲಾಗುತ್ತಿದೆ. ಹೀಗಾಗಿ ಇಲ್ಲಿ ಜಂಟಿ ಸರ್ವೆ ಆಗಬೇಕು ಎಂದು ತಾರಾನಾಥ ಗೌಡ ಒತ್ತಾಯಿಸಿದರು. ಶಿರ್ಲಾಲಿನಲ್ಲಿ ಮರಳು ಮತ್ತು ಕಲ್ಲಿನ ಅಭಾವದಿಂದಾಗಿ ಸುಮಾರು 35 ರಷ್ಟು ಮಂದಿ ಯಾವುದೇ ಉದ್ಯೋಗವಿಲ್ಲದೆ ಇದ್ದಾರೆ. ಹೀಗಾದರೆ ಹೇಗೆ ಎಂದು ಅಲವತ್ತುಕೊಂಡಾಗ ಶಾಸಕರು ಪ್ರತಿಕ್ರಿಯಿಸಿ, ಸರ್ಕಾರ ಲೀಗಲ್ ಮತ್ತು ಇಲ್ಲೀಗಲ್ ಎಂಬ ನಿಯಮಕ್ಕೆ ಜೋತು ಬಿದ್ದಿದೆ. ಜಿಲ್ಲೆಯಲ್ಲಿನ ಈ ಪರಿಸ್ಥಿತಿಯಿಂದಾಗಿ ಮೇಸ್ತ್ರಿಗಳಿಗೆ ಮಾತ್ರವಲ್ಲ ಹಳ್ಳಿಯಲ್ಲಿನ ಹೊಟೇಲ್ ವ್ಯಾಪಾರಕ್ಕೂ ತಾಪತ್ರಯವಾಗಿದೆ. ಈ ಬಗ್ಗೆ ಸಾಕಷ್ಟು ಪ್ರತಿಭಟನೆ ನಡೆದಿದೆ ಎಂದರು.ಜಲ ಜೀವನ್ ಮಿಶನ್ ಕಾಮಗಾರಿ ಅರ್ಧದಲ್ಲೇ ನಿಂತಿರುವ ಬಗ್ಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮನೆಗಳಿಗೆ ಸಂಪರ್ಕ ಬಂದಿದೆ. ಆದರೆ ನೀರಿಲ್ಲ. ಕೆಲವಡೆ ಪೈಪು ಒಡೆದುಹೋಗಿದೆ ಎಂದಾಗ 15ದಿನಗಳೊಳಗೆ ಸರಿ ಪಡಿಸುವಂತೆ ಶಾಸಕರು ಎಇಇ ಅವರಿಗೆ ತಾಕೀತು ಮಾಡಿದರಲ್ಲದೆ ಆಗದಿದ್ದರೆ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ ಗೆ ಹಾಕುವಂತೆ ಸೂಚಿಸಿದರು. ಪಂಚಾಯಿತಿ ಅಧ್ಯಕ್ಷ ಉಷಾ, ಉಪಾಧ್ಯಕ್ಷ ಸೋಮನಾಥ ಬಂಗೇರ, ಸಿ.ಎ. ಬ್ಯಾಂಕ್ ಅಧ್ಯಕ್ಷ ಸುಧೀರ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು. ಇ.ಒ. ಭವಾನಿ ಶಂಕರ್ ಸ್ವಾಗತಿಸಿದರು. ಯೋಗೀಶ್ ನಿರೂಪಿಸಿದರು.

ಅಂದು ನಾನು ವಿಧಾನ ಸಭೆಯಲ್ಲಿ ಆನೆಯನ್ನು ಕೊಲ್ಲಲು ಅನುಮತಿ ನೀಡಿ ಎಂಬ ಅರ್ಥದಲ್ಲಿ ಮಾತನಾಡಿದ್ದೆ. ಅದಕ್ಕೆ ನನ್ನನ್ನು ತೀವ್ರವಾಗಿ ಟ್ರೋಲ್ ಮಾಡಲಾಗಿತ್ತು. ಅದಕ್ಕೆ ನಾನು ಬೇಸರ ಮಾಡಿಕೊಂಡಿರಲಿಲ್ಲ. ಕಾಲ ಬಂದಾಗ ಎಲ್ಲವೂ ತಿಳಿಯುತ್ತದೆ ಎಂದು ಸುಮ್ಮನಿದ್ದೆ. ಈಗ ಜನರಿಗೆ ಅರ್ಥವಾಗಿರಬಹುದು. ಸೌತಡ್ಕದಲ್ಲಿ ಆನೆ ದಾಳಿಯಿಂದಾಗಿ ಓರ್ವನ ಪ್ರಾಣವೇ ಹೋಗಿದೆ. ನೆರಿಯ, ತೋಟತ್ತಾಡಿ, ಚಾರ್ಮಾಡಿ, ಕಕ್ಕಿಂಜೆ, ಮುಂಡಾಜೆ ಭಾಗದಲ್ಲಿ ಆನೆಗಳ ಉಪಟಳದಿಂದಾಗಿ ಕೃಷಿಕರು ಎಷ್ಟು ಹಾನಿಗೊಳಗಾಗಿದ್ದಾರೆ ಎಂಬುದನ್ನು ಅರಿತುಕೊಳ್ಳಬೇಕು.

-ಹರೀಶ್ ಪೂಂಜ, ಬೆಳ್ತಂಗಡಿ ಶಾಸಕ.