ಸಾರಾಂಶ
ಕಾರವಾರ/ಅಂಕೋಲಾ: ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ಎಂಟು ಮಂದಿ ವಿರುದ್ಧ ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಕಲಬುರ್ಗಿಯ ಬ್ರಹ್ಮರ್ಷಿ ನಾರಾಯಣಗುರು ಶಕ್ತಿಪೀಠದ ಪೀಠಾಧಿಪತಿ ಡಾ.ಪ್ರಣವಾನಂದ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ರಾಷ್ಟ್ರೀಯ ಹೆದ್ದಾರಿ ೬೬ರ ಚತುಷ್ಪಥ ಕಾಮಗಾರಿ ನಡೆಸುತ್ತಿರುವ ಐಆರ್‌ಬಿ ಕಂಪೆನಿಯ ನೌಕರರಾದ ವೀರೇಂದ್ರ ಡಿ., ರವೀಂದ್ರ ದಾರಿವಾಳ, ಜೋಸ್ ತಮಾರಿಸ್ ಮಾರ್ಟಿ, ದೀಪಾಲಿ ಯು., ವಿಜಯ ಭಟ್, ಭಜರಂಗ ಗುಪ್ತ, ಸಂದೀಪ ಜೈಶಾ, ಪ್ರಥ್ವಿ ಸವಾಲಾ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಣವಾನಂದ ಶ್ರೀ ಆಕ್ರೋಶ: ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿದ್ದ ಐಆರ್‌ಬಿ ಕಂಪನಿಯ ಎಂಟು ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ನ್ಯಾಯಾಲಯದ ಆದೇಶ ಹೊರಡಿಸಿ 24 ದಿನ ಕಳೆದರೂ ನ್ಯಾಯಾಲಯದ ಆದೇಶಕ್ಕೆ ಮಾನ್ಯತೆ ಕೊಡದ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಣವಾನಂದ ಸ್ವಾಮೀಜಿ ಮಂಗಳವಾರ ಅಂಕೋಲಾ ಠಾಣೆ ಎದುರು ಆಕ್ರೋಶ ವ್ಯಕ್ತಪಡಿಸಿದರು.ಐಆರ್‌ಬಿ ಕಂಪನಿಯ ಎಂಟು ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಅಂಕೋಲಾ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ಹೊರಡಿಸಿತ್ತು. ಆದೇಶ ಹೊರಡಿಸಿ 24 ದಿನ ಕಳೆದರೂ ಕ್ರಮ ಕೈಗೊಳ್ಳದ ಪೊಲೀಸ್ ಅಧಿಕಾರಿಗಳ ನಡೆ ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.
ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ದೊರೆತಿಲ್ಲ. ಅವೈಜ್ಞಾನಿಕ ಕಾಮಗಾರಿ ಕೈಗೊಂಡು ಗುಡ್ಡ ಕುಸಿತಕ್ಕೆ ಕಾರಣವಾಗಿದ್ದ ಐಆರ್‌ಬಿ ಕಂಪನಿಯವರು ನಿರಾತಂಕವಾಗಿ ಇದ್ದಾರೆ. ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯ ಮೆಟ್ಟಿಲೇರಿದರೂ ಸ್ಪಂದಿಸಿರಲಿಲ್ಲ. ಹಾಗಾಗಿ ನ್ಯಾಯಾಲಯದ ಮೊರೆ ಹೋದೆವು. ಅಲ್ಲಿ ಐಆರ್‌ಬಿ ಕಂಪನಿಯ ಎಂಟು ಅಧಿಕಾರಿಗಳ ಮೇಲೆ ಎಫ್‌ಐಆರ್ ದಾಖಲಿಸುವಂತೆ ಆದೇಶ ನೀಡಿದ್ದರೂ ಪೊಲೀಸರು ಕ್ರಮ ಕೈಗೊಳ್ಳಲಿಲ್ಲ. ಹಾಗಾಗಿ ಸ್ವತಃ ಬಂದು ವಿಚಾರಿಸಿದಾಗ ನ್ಯಾಯಾಲಯ ನಮಗೆ ಮತ್ತೊಮ್ಮೆ ಜ್ಞಾಪಿಸಬೇಕು ಎಂದು ಉಡಾಫೆ ಉತ್ತರ ನೀಡುತ್ತಾರೆ. ನ್ಯಾಯಾಲಯದ ಆದೇಶ ಉಲ್ಲಂಘಿಸಿ ನಿರ್ಲಕ್ಷ್ಯತೋರಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮವಾಗಬೇಕು ಎಂದು ಸ್ವಾಮೀಜಿ ಹೇಳಿದರು.ಸಿಎಂ ಸಿದ್ದರಾಮಯ್ಯ, ಗೃಹಮಂತ್ರಿ ಜಿ.ಪರಮೇಶ್ವರ ಅವರೇ ಏಕೆ ಸುಮ್ಮನಿದ್ದೀರಿ? ನಿಮ್ಮಿಂದ ಸಂತ್ರಸ್ತರಿಗೆ ನ್ಯಾಯ ಕೊಡಿಸಲು ಅಸಾಧ್ಯವೇ? ಎಂದು ಗುಡುಗಿದರು.
ಏನಾಗಿತ್ತು..?: ಶಿರೂರು ಗುಡ್ಡ ಕುಸಿತಕ್ಕೆ ಐಆರ್‌ಬಿ ಕಂಪನಿಯ ಅವೈಜ್ಞಾನಿಕ ರಸ್ತೆ ಕಾಮಗಾರಿಯೇ ಕಾರಣ ಎಂದು ಬ್ರಹ್ಮರ್ಷಿ ನಾರಾಯಣ ಗುರು ಶಕ್ತಿ ಪೀಠದ ಪೀಠಾಧಿಪತಿ, ಈಡಿಗ ಸಮುದಾಯದ ಸ್ವಾಮೀಜಿ ಪ್ರಣವಾನಂದ ಸ್ವಾಮೀಜಿ ವಿರೋಧ ವ್ಯಕ್ತಪಡಿಸಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಪೊಲೀಸರು ಪ್ರಕರಣ ದಾಖಲಿಸದ ಕಾರಣ ಸ್ವಾಮೀಜಿ ನ್ಯಾಯಾಲಯದ ಮೊರೆ ಹೋಗಿದ್ದರು. ಸ್ವಾಮೀಜಿಯ ದೂರು ಪುರಸ್ಕರಿಸಿದ ಜೆಎಂಎಫ್‌ಸಿ ನ್ಯಾಯಾಲಯ ಕಂಪನಿಯ ಎಂಟು ಜನರ ಮೇಲೆ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಿತ್ತು. ಆದರೆ ಪೊಲೀಸ್ ಇಲಾಖೆ ಇವರೆಗೂ ಐಆರ್‌ಬಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿರಲಿಲ್ಲ.
ಮಂಗಳವಾರ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಅಂಕೋಲಾ ಪೊಲೀಸರು ಐಆರ್‌ಬಿ ಕಂಪನಿಯ ಎಂಟು ಅಧಿಕಾರಿಗಳ ಮೇಲೆ ಎಫ್‌ಐಆರ್ ದಾಖಲು ಮಾಡಿದ್ದಾರೆ.