ಸಾರಾಂಶ
ವಸಂತಕುಮಾರ್ ಕತಗಾಲ
ಕಾರವಾರ: ಶಿರೂರು ಗುಡ್ಡ ಕುಸಿತ ದುರಂತ ಸ್ಥಳಕ್ಕೆ ಆಗಮಿಸಿರುವ ಮಿಲಿಟರಿ ಪಡೆ ಜಿಪಿಆರ್(ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್) ತಂತ್ರಜ್ಞಾನದ ಮೂಲಕ ಕಣ್ಮರೆಯಾದ ಶವ ಶೋಧ ಕಾರ್ಯಾಚರಣೆ ವೇಗ ಹೆಚ್ಚಿಸಿದೆ.ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಒಟ್ಟೂ 10 ಜನರು ಕಣ್ಮರೆಯಾದ ಬಗ್ಗೆ ದೂರು ಬಂದಿತ್ತು. ಇದುವರೆಗೆ 7 ಶವಗಳು ಪತ್ತೆಯಾಗಿವೆ. ಆರು ಶವಗಳು ಗೋಕರ್ಣ ಸಮೀಪ ಸಮುದ್ರ ತೀರದಲ್ಲಿ ಪತ್ತೆಯಾದರೆ, ಒಂದು ಶವ(ಅರ್ಧ ಭಾಗ) ಅಂಕೋಲಾ ತಾಲೂಕಿನ ಬೆಳಂಬಾರ ಬಳಿ ಸಮುದ್ರತೀರದಲ್ಲಿ ಪತ್ತೆಯಾಗಿದೆ. ಕಣ್ಮರೆಯಾಗಿರುವ ಜಗನ್ನಾಥ ನಾಯ್ಕ, ಕೇರಳದ ಚಾಲಕ ಅರ್ಜುನ್ ಹಾಗೂ ಸಣ್ಣು ಗೌಡ ಎಂಬ ಮಹಿಳೆಯ ಪತ್ತೆಗಾಗಿ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಆರು ದಿನಗಳ ಹುಡುಕಾಟ ನಡೆಸುತ್ತಿದ್ದರೂ ಪತ್ತೆಯಾಗಿಲ್ಲ.
ಪತ್ತೆ ಕಾರ್ಯ ವಿಳಂಬವಾಗುತ್ತಿರುವ ಹಿನ್ನೆಲೆ ಪ್ರಧಾನಮಂತ್ರಿ ಕಾರ್ಯಾಲಯದ ಸೂಚನೆಯ ಮೇರೆಗೆ ಬೆಳಗಾವಿಯಿಂದ ಮರಾಠಾ ಲೈಟ್ ಇನ್ಫೆಂಟ್ರಿಯ 40- 50 ಯೋಧರು ಭಾನುವಾರ ಸಂಜೆ ಮೂರು ಟ್ರಕ್‌ಗಳಲ್ಲಿ ಸ್ಥಳಕ್ಕೆ ಆಗಮಿಸಿ ಜಿಪಿಆರ್ ಮೂಲಕ ಕಾರ್ಯಾಚರಣೆ ಆರಂಭಿಸಿದ್ದಾರೆ.ಏನಿದು ಜಿಪಿಆರ್?: ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ ಬಳಸಿ ನೆಲದಾಳದಲ್ಲಿ ವಿದ್ಯುತ್ಕಾಂತೀಯ ತರಂಗವನ್ನು ಹರಿಬಿಡುವ ಮೂಲಕ ಮಣ್ಣಿನಡಿಯಲ್ಲಿ ವಸ್ತು ಅಥವಾ ವ್ಯಕ್ತಿಯ ಇರವನ್ನು ಪತ್ತೆ ಹಚ್ಚಲಾಗುತ್ತದೆ. ರಾಡಾರ್‌ನಲ್ಲಿರುವ ಅಂಟೆನಾ ವಿದ್ಯುತ್ಕಾಂತೀಯ ತರಂಗವನ್ನು ಹೊರಸೂಸುತ್ತದೆ. ನೆಲದಾಳಕ್ಕೆ ನುಗ್ಗುವ ಈ ತರಂಗಗಳು ಮಣ್ಣಿನಡಿ ವಸ್ತುಗಳು ಇದ್ದಲ್ಲಿ ಅಲೆಗಳು ರಾಡಾರ್‌ನಲ್ಲಿರುವ ಅಂಟೆನಾದಲ್ಲಿ ಪ್ರತಿಬಿಂಬಿಸುತ್ತದೆ. ನಂತರ ಇದನ್ನು ಡಿಜಿಟಲ್ ಶೇಖರಣಾ ಸಾಧನದಲ್ಲಿ ದಾಖಲಿಸಿ ವಿಶ್ಲೇಷಿಸಲಾಗುತ್ತದೆ.
ಕೇರಳದ ಚಾಲಕ ಅರ್ಜುನ್ ಪತ್ತೆ ಹಚ್ಚಲು ಅಲ್ಲಿನ ಜನತೆ, ಲಾರಿ ಚಾಲಕರು ಹಾಗೂ ಮಾಧ್ಯಮದವರು ಇನ್ನಿಲ್ಲದ ಒತ್ತಡ ಹೇರುತ್ತಿದ್ದಾರೆ. ಸ್ಥಳೀಯರಿಬ್ಬರ ಶೋಧಕ್ಕಾಗಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.ಸುರಿಯುತ್ತಿರುವ ಭಾರಿ ಮಳೆ, ಆಗಾಗ ಗುಡ್ಡದಿಂದ ಉರುಳುವ ಕಲ್ಲು, ಮಣ್ಣು ಶೋಧ ಕಾರ್ಯಕ್ಕೆ ಅಡ್ಡಿ ಉಂಟುಮಾಡುತ್ತಿದೆ. ಸೋಮವಾರ ಮಳೆ ಸ್ವಲ್ಪ ಕಡಿಮೆ ಆಗಿದೆ. ಜತೆಗೆ ಮಿಲಿಟರಿ ಆಗಮನದೊಂದಿಗೆ ಪತ್ತೆ ಕಾರ್ಯ ಇನ್ನಷ್ಟು ಚುರುಕಾಗಿ ನಡೆಯುವಂತಾಗಿದೆ.
ಕಾರ್ಯಾಚರಣೆ: ಶಿರೂರು ಗುಡ್ಡ ಕುಸಿತದಲ್ಲಿ ಸಿಲುಕಿದವರ ಪತ್ತೆಗಾಗಿ ಮಿಲಿಟರಿ ತಂಡ ಸೋಮವಾರ ಬೆಳಗ್ಗೆಯಿಂದ ಕಾರ್ಯಾಚರಣೆ ನಡೆಸುತ್ತಿದೆ. ಅವರ ಜತೆ ಇತರ ತಂಡಗಳೂ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದರು.;Resize=(128,128))
;Resize=(128,128))