ಶಿರೂರು ಗುಡ್ಡ ದುರಂತ: ಗಂಗಾವಳಿ ನದಿಯ ಅಧಿಕ ವೇಗ - ಶೋಧ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತ

| Published : Jul 29 2024, 12:53 AM IST / Updated: Jul 29 2024, 07:59 AM IST

ಶಿರೂರು ಗುಡ್ಡ ದುರಂತ: ಗಂಗಾವಳಿ ನದಿಯ ಅಧಿಕ ವೇಗ - ಶೋಧ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತ
Share this Article
  • FB
  • TW
  • Linkdin
  • Email

ಸಾರಾಂಶ

ಗಂಗಾವಳಿ ನದಿಯ ನೀರಿನ ವೇಗ ಹೆಚ್ಚಿರುವುದರಿಂದ ಇಷ್ಟು ದಿನಗಳ ಕಾರ್ಯಾಚರಣೆ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ನದಿಯ ವೇಗ, ನೀರು ಕಡಿಮೆಯಾದ ಮೇಲೆ ಮತ್ತೆ ಕಾರ್ಯಾಚರಣೆ ನಡೆಸಲು ತೀರ್ಮಾನಿಸಲಾಗಿದೆ.

ಕಾರವಾರ: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಕಣ್ಮರೆಯಾದ ಮೂವರ ಶವ ಶೋಧಕ್ಕೆ 13 ದಿನ ನಡೆಸಿದ ಪ್ರಯತ್ನಗಳೆಲ್ಲ ಸಫಲ ಆಗದೆ ಇರುವುದರಿಂದ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಗಂಗಾವಳಿ ನದಿಯ ನೀರಿನ ವೇಗ ಹೆಚ್ಚಿರುವುದರಿಂದ ಇಷ್ಟು ದಿನಗಳ ಕಾರ್ಯಾಚರಣೆ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ನದಿಯ ವೇಗ, ನೀರು ಕಡಿಮೆಯಾದ ಮೇಲೆ ಮತ್ತೆ ಕಾರ್ಯಾಚರಣೆ ನಡೆಸಲು ತೀರ್ಮಾನಿಸಲಾಗಿದೆ. 

ದುರಂತದಲ್ಲಿ ಒಟ್ಟೂ 11 ಜನರು ನಾಪತ್ತೆಯಾಗಿದ್ದರು. ಅದರಲ್ಲಿ 8 ಶವಗಳು ಪತ್ತೆಯಾಗಿದ್ದವು. ಕೇರಳದ ಲಾರಿ ಚಾಲಕ ಅರ್ಜುನ್, ಜಗನ್ನಾಥ ನಾಯ್ಕ ಹಾಗೂ ಲೋಕೇಶ ನಾಯ್ಕ ಈ ಮೂವರ ಮೃತದೇಹಕ್ಕಾಗಿ ನಿರಂತರ 13 ದಿನಗಳ ಕಾರ್ಯಾಚರಣೆ ನಡೆಸಲಾಯಿತು. 

ದೊರೆತ ಎಲ್ಲ ಎಂಟೂ ಶವಗಳು ಸಮುದ್ರ, ನದಿ ತೀರದಲ್ಲಿ ಪತ್ತೆಯಾಗಿದ್ದೇ ಹೊರತೂ ಕಾರ್ಯಾಚರಣೆಯಿಂದ ದೊರಕಿರಲಿಲ್ಲ. ಸೇನಾಪಡೆ, ನೌಕಾಪಡೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ನೇತೃತ್ವದ ತಂಡ, ಅಗ್ನಿಶಾಮಕ, ಪೊಲೀಸ್, ಮುಳುಗು ತಜ್ಞ ಈಶ್ವರ ಮಲ್ಪೆ ತಂಡ, ಸ್ಥಳೀಯ ಮೀನುಗಾರರ ತಂಡ ಹೀಗೆ ಎಲ್ಲ ರಕ್ಷಣಾ ತಂಡಗಳು ನಿರಂತರ ಪ್ರಯತ್ನ ನಡೆಸಿದರೂ ಯಶಸ್ಸು ಸಿಗಲಿಲ್ಲ. 

ಈಶ್ವರ ಮಲ್ಪೆ ಲಾರಿ ಇದೆ ಎಂದು ಗುರುತಿಸಲಾದ ನಾಲ್ಕು ಪಾಯಿಂಟ್‌ಗಳಲ್ಲಿ ಸಾಹಸದಿಂದ ಡೈವ್ ಮಾಡಿದರೂ ಏನೂ ಪತ್ತೆಯಾಗಲಿಲ್ಲ. ಗಂಗಾವಳಿ ನದಿಯಲ್ಲಿ 8 ನಾಟ್ಸ್ ವೇಗದಲ್ಲಿ ಹರಿಯುತ್ತಿರುವ ನೀರಿನಿಂದಾಗಿ ಡೈವ್ ಮಾಡಲು ಕಷ್ಟಕರವಾಗಿದೆ. ನದಿ ನೀರು ಮಳೆಗಾಲವಾದ್ದರಿಂದ ಕೆಂಪು ಬಣ್ಣಕ್ಕೆ ತಿರುಗಿದ್ದು, ನದಿಯ ಆಳದಲ್ಲಿ ಯಾವುದೂ ಗೋಚರವಾಗುತ್ತಿಲ್ಲ. ಬೃಹದಾಕಾರದ ಬಂಡೆಗಳು, ಭಾರಿ ಪ್ರಮಾಣದ ಮಣ್ಣು, ಗಿಡ ಮರಗಳು ಬಿದ್ದುಕೊಂಡಿದ್ದರಿಂದ ನಾಪತ್ತೆಯಾದ ಲಾರಿಯ ಕುರುಹೂ ಸಿಗುತ್ತಿಲ್ಲ. ಹೂಳು ತುಂಬಿಕೊಂಡಿರುವುದೂ ಕಾರ್ಯಾಚರಣೆಗೆ ಕಷ್ಟವಾಗಿದೆ. 

ಇವೆಲ್ಲವುಗಳಿಂದಾಗಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಶಾಸಕ ಸತೀಶ ಸೈಲ್, ಕೇರಳದ ಮಂಜೇಶ್ವರ ಶಾಸಕ ಅಶ್ರಫ್ ಮತ್ತಿತರರು ಕಾರ್ಯಾಚರಣೆ ಬಗ್ಗೆ ವಿವರ ನೀಡಿದರು.

ಮುಂದುವರಿಕೆ: ಕಾರ್ಯಾಚರಣೆ ಸ್ಥಗಿತಗೊಳಿಸುವುದಿಲ್ಲ. ಸದ್ಯಕ್ಕೆ ಪ್ರತಿಕೂಲ ಪರಿಸ್ಥಿತಿ ಇರುವುದರಿಂದ ಏನು ಮಾಡಲೂ ಸಾಧ್ಯವಾಗುತ್ತಿಲ್ಲ. ಮುಂದೆ ಮಳೆ ಕಡಿಮೆಯಾಗಿ ನೀರಿನ ಹರಿವಿನ ವೇಗ ಇಳಿದಲ್ಲಿ ಮತ್ತೆ ಕಾರ್ಯಾಚರಣೆ ಮುಂದುವರಿಸುತ್ತೇವೆ ಎಂದು ಉಸ್ತುವಾರಿ ಸಚಿವ ಮಂಕಾಳು ವೈದ್ಯ ತಿಳಿಸಿದರು.