ಶಿರೂರು: ವಿಶೇಷ ಪರಿಹಾರಕ್ಕೆ ಪ್ರಧಾನಿ ಮೋದಿ ಭರವಸೆ

| Published : Aug 23 2024, 01:01 AM IST

ಸಾರಾಂಶ

ಭಾರಿ ಮಳೆಯಿಂದ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ನಡೆದ ದುರಂತದ ಬಗ್ಗೆ ಸಂಸದ ಕಾಗೇರಿ ಪ್ರಧಾನ ಮಂತ್ರಿ ಮೋದಿ ಅವರಿಗೆ ಪತ್ರ ಬರೆದು, ಸಂತ್ರಸ್ತರ ಕುಟುಂಬಕ್ಕೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ವಿಶೇಷ ಪರಿಹಾರ ನೀಡುವಂತೆ ವಿನಂತಿಸಿದ್ದರು.

ಕಾರವಾರ:

ಶಿರೂರು ಗುಡ್ಡ ಕುಸಿತ ಸಂತ್ರಸ್ತರಿಗೆ ವಿಶೇಷ ಪರಿಹಾರ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಸದ ವಿಶ್ವೇಶ್ವರ ಹೆಗಡೆ ಅವರಿಗೆ ತಿಳಿಸಿದ್ದಾರೆ.ಭಾರಿ ಮಳೆಯಿಂದ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ನಡೆದ ದುರಂತದ ಬಗ್ಗೆ ಸಂಸದ ಕಾಗೇರಿ ಪ್ರಧಾನ ಮಂತ್ರಿ ಮೋದಿ ಅವರಿಗೆ ಪತ್ರ ಬರೆದು, ಸಂತ್ರಸ್ತರ ಕುಟುಂಬಕ್ಕೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ವಿಶೇಷ ಪರಿಹಾರ ನೀಡುವಂತೆ ವಿನಂತಿಸಿದ್ದರು. ಈ ಪತ್ರಕ್ಕೆ ಕಾಗೇರಿ ಅವರಿಗೆ ಪ್ರತ್ಯುತ್ತರ ಬರೆದಿರುವ ಪ್ರಧಾನಿ ಮೋದಿ, ಶಿರೂರು ಸಂತ್ರಸ್ತರ ಕುಟುಂಬಕ್ಕೆ ವಿಶೇಷ ಪರಿಹಾರ ಮಂಜೂರು ಮಾಡಿರುವುದಾಗಿ ತಿಳಿಸಿದ್ದಾರೆ ಹಾಗೂ ಸಂತ್ರಸ್ತರೊಂದಿಗೆ ಸರ್ಕಾರ ಇದ್ದು, ಸರ್ಕಾರದಿಂದ ಆಗುವ ಎಲ್ಲ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಸ್ವಾಗತಾರ್ಹ: ಶಿರೂರು ಸಂತ್ರಸ್ತರಿಗೆ ಪ್ರಧಾನಮಂತ್ರಿ ಮೋದಿ ವಿಶೇಷ ಪರಿಹಾರ ಮಂಜೂರು ಮಾಡಿರುವುದು ಸ್ವಾಗತಾರ್ಹ. ಆದರೆ ಪರಿಹಾರದ ಮೊತ್ತ ಎಷ್ಟು, ಯಾವಾಗ ಬಿಡುಗಡೆಯಾಗಲಿದೆ ಎನ್ನುವುದು ಶೀಘ್ರದಲ್ಲಿ ತಿಳಿಯಲಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಹಳಿಯಾಳದಲ್ಲಿ ರಾಯಲ್ ಎನ್‌ಫೀಲ್ಡ್ ಕೌಶಲ್ಯ

ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಚರ್ಚೆ

ಹಳಿಯಾಳ: ಪಟ್ಟಣದ ಕೆಎಲ್ಎಸ್ ಸಂಸ್ಥೆಯ ವಿಡಿಐಟಿ ಎಂಜಿನಿಯರಿಂಗ್ ಕಾಲೇಜಿಗೆ ಗುರುವಾರ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ಪ್ರತಿನಿಧಿಗಳ ನಿಯೋಗವು ಭೇಟಿ ನೀಡಿ ರಾಯಲ್‌ ಎನ್‌ಫೀಲ್ಡ್‌ ಕೌಶಲ್ಯ ಅಭಿವೃದ್ಧಿ ಕೇಂದ್ರ ಪ್ರಾರಂಭಿಸುವ ಕುರಿತು ಚರ್ಚೆ ನಡೆಸಿತು.ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಕೌಶಲ್ಯ ಅಭಿವೃದ್ಧಿಗೆ ವಿದ್ಯಾಲಯವು ಕೈಗೊಂಡಿರುವ ಉಪಕ್ರಮಗಳ ಕುರಿತು ನಿಯೋಗವು ಮಾಹಿತಿ ಪಡೆಯಿತು. ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ನಿಯೋಗವು ರಾಯಲ್ ಎನ್‌ಫೀಲ್ಡ್‌ ಸಂಸ್ಥೆಯ ಅಟೋಮೋಟಿವ್ ಕ್ಷೇತ್ರ ಬಯಸುವ ಕೌಶಲ್ಯವನ್ನು ವಿದ್ಯಾರ್ಥಿಗಳಿಗೆ ಕಲಿಸಲು ಉತ್ಸುಕವಾಗಿದೆ ಎಂದರು.

ಉತ್ತರ ಕರ್ನಾಟಕ ಮತ್ತು ದಕ್ಷಿಣ ಗೋವಾದ ವಿದ್ಯಾರ್ಥಿಗಳು ತರಬೇತಿಗೆ ಅನುಕೂಲವಾಗಿಸುವ ದೃಷ್ಟಿಯಿಂದ ಕೆಎಲ್ಎಸ್ ಸಂಸ್ಥೆಯ ವಿಡಿಐಟಿ ಕಾಲೇಜಿನಲ್ಲಿ ತರಬೇತಿ ಕೇಂದ್ರ ಸ್ಥಾಪನೆ ಕುರಿತು ಪ್ರಾಥಮಿಕ ಹಂತದ ವಿಚಾರ ವಿನಿಮಯ ಮಾಡಲಾಯಿತು.

ಕಾಲೇಜಿನ ಪ್ರಾಚಾರ್ಯ ಡಾ. ವಿ.ಎ. ಕುಲಕರ್ಣಿ ಅವರು, ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಸಹಕರಿಸಲು ಮುಂದಾಗುತ್ತಿರುವುದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.ರಾಯಲ್ ಎನ್‌ಫೀಲ್ಡ್‌ ಸಂಸ್ಥೆಯ ದಕ್ಷಿಣ ಭಾರತ ವಿಭಾಗದ ಮುಖ್ಯ ತರಬೇತುದಾರ ಕಬಿಲನ್, ಕರ್ನಾಟಕ ವಿಭಾಗದ ತರಬೇತುದಾರ ಬಿನೋಯ್, ಪ್ರಾದೇಶಿಕ ವ್ಯವಸ್ಥಾಪಕ ಅಶೋಕ್ ಮಳಗಿ ಹಾಗೂ ವಿಶ್ವಾ ಅವರು ನಿಯೋಗದಲ್ಲಿದ್ದರು.

ಮಾತುಕತೆಯ ಸಂದರ್ಭದಲ್ಲಿ ವಿಆರ್‌ಡಿಎಂ ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು, ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಚಾರ್ಯ ದಿನೇಶ್ ನಾಯ್ಕ್, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ. ಮುರಗಯ್ಯಾ ಎಸ್.ಬಿ., ಟ್ರೈನಿಂಗ್ ಮತ್ತು ಪ್ಲೇಸ್‌ಮೆಂಟ್ ವಿಭಾಗದ ಸಂಚಾಲಕ ಪ್ರೊ. ರಜತ್ ಆಚಾರ್ಯ, ಪ್ರೊ. ನವೀನ ಹಿರೇಮಠ ಹಾಗೂ ಎಲ್ಲ ವಿಭಾಗದ ಡೀನ್‌ಗಳು ಹಾಗೂ ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು.