ಸಾರಾಂಶ
ರಾಘು ಕಾಕರಮಠ
ಅಂಕೋಲಾ: ಒಂದೆಡೆ ಬಿರುಕು ಬಿಟ್ಟ ಗೋಡೆಯನ್ನು ಕಂಡು ಹೊಸ ಮನೆ ಕಟ್ಟಿ ಗೃಹಪ್ರವೇಶ ಮಾಡಬೇಕು ಎಂಬ ತವಕ. ಇನ್ನೊಂದೆಡೆ ವಯಸ್ಸಿಗೆ ಬಂದ ಇಬ್ಬರು ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡಬೇಕು ಎಂದು ಮಹಾದಾಸೆ ಅಪ್ಪನದಾಗಿತ್ತು. ಆದರೆ ಶಿರೂರಿನಲ್ಲಿ ಇತ್ತೀಚೆಗೆ ನಡೆದ ಗುಡ್ಡ ಕುಸಿತದ ಮಹಾ ದುರಂತದಲ್ಲಿ ಅರವತ್ತರ ಪ್ರಾಯದ ಈ ಜೀವದ ಕನಸು ಮಣ್ಣಿನಲ್ಲಿ ಹೂತು ಹೋಯಿತು.ಇದು ಶಿರೂರಿನ ಮಣ್ಣು ಕುಸಿತ ಪ್ರದೇಶದಲ್ಲಿ ನಾಪತ್ತೆಯಾದ ಜಗನ್ನಾಥ ನಾಯ್ಕ ಅವರ ಕುಟುಂಬದ ಕಥೆ. ಮೂವರು ಹೆಣ್ಣುಮಕ್ಕಳನ್ನು ಸಾಕಿ ಸಲುಹಿದ ಜಗನ್ನಾಥ ನಾಯ್ಕ ಕಣ್ಮರೆಯಾಗಿ 8 ದಿನ ಕಳೆಯುತ್ತ ಬಂದಿದೆ. ಆದರೆ ಇರುವಿಕೆ ಮಾತ್ರ ನಿಗೂಢವಾಗಿದ್ದು, ಆತನ ಕುಟುಂಬದವರು ಕಣ್ಣೀರಲ್ಲೆ ಕೈ ತೊಳೆಯುತ್ತಿದ್ದಾರೆ.
ನೂತನ ಮನೆ ಕಟ್ಟಬೇಕೆಂಬ ಕನಸು: ಜಗನ್ನಾಥ ನಾಯ್ಕ ಮೂಲತಃ ಕುಮಟಾದ ಬಾಡದ ಹುಬ್ಬಣಗೇರಿಯವರು. 30 ವರ್ಷದ ಹಿಂದೆ ಶಿರೂರಿನ ಬೇಬಿ ನಾಯ್ಕ ಅವರನ್ನು ಮದುವೆಯಾದ ಮೇಲೆ ಶಿರೂರಿನಲ್ಲಿಯೆ ವಾಸವಾಗಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಬಿರುಕು ಬಿಟ್ಟ ಗೋಡೆ ಕಂಡು ಹೇಗಾದರೂ ಮಾಡಿ ಮನೆ ಕಟ್ಟಬೇಕು. ಮೂವರು ಹೆಣ್ಣುಮಕ್ಕಳಿಗೆ ಒಂದೊಂದು ರೂಂ ನಿರ್ಮಿಸಬೇಕು. ನಾವು ಗಂಡ- ಹೆಂಡತಿ ಮನೆಯ ವರಾಂಡದಲ್ಲಿ ಉಳಿದುಕೊಂಡರಾಯಿತು ಎಂಬುದು ಜಗನ್ನಾಥ ಅವರ ಆಸೆಯಾಗಿತ್ತು.ಮಕ್ಕಳೆಂದರೆ ಪ್ರಾಣ: ಜಗನ್ನಾಥ ದಂಪತಿಗಳ ಮೂವರು ಹೆಣ್ಣುಮಕ್ಕಳಾದ ಮನಿಷಾ, ಕೃತಿಕಾ, ಪಲ್ಲವಿ ಅವರ ಕಣ್ಣುಗಳಾಗಿದ್ದವು. ಮನೀಷಾಳ ಮದುವೆಯನ್ನು ಮಾಡಿಕೊಡಲಾಗಿತ್ತು. ಇನ್ನು ಕೃತಿಕಾ ಹಾಗೂ ಪಲ್ಲವಿ ಮದುವೆಯನ್ನು ಒಂದೇ ದಿನ ನಿಗದಿಪಡಿಸಿ, ಆ ಸಂಭ್ರಮವನ್ನು ಕಣ್ಣು ತುಂಬಿಸಿಕೊಳ್ಳಬೇಕು ಎಂದು ಆಗಾಗ ಹೇಳಿಕೊಳ್ಳುತ್ತಿದ್ದರಂತೆ. ಘಟನೆ ನಡೆದ ಹಿಂದಿನ ದಿನದ ರಾತ್ರಿಯೂ ಊಟ ಮುಗಿದ ಈ ವಿಷಯವನ್ನು ಪ್ರಸ್ತಾಪಿಸಿ ಆದಷ್ಟು ಬೇಗ ಈ ಕನಸು ನನಸಾಗಲಿ ಎಂದು ಪತ್ನಿ ಬೇಬಿಯೊಂದಿಗೆ ಹೇಳಿಕೊಂಡಿದ್ದರಂತೆ.
ವಿಧಿಯಾಟಕ್ಕೆ ಸಿಲುಕಿದ ಜಗನ್ನಾಥ: ಕಳೆದ 20 ವರ್ಷಗಳಿಂದ ತನ್ನ ನೆಂಟ ಲಕ್ಷ್ಮಣ ನಾಯ್ಕನ ಚಹಾ ಅಂಗಡಿಯಲ್ಲಿ ಜಗನ್ನಾಥ ಸರ್ವರ್ ಕೆಲಸ ಮಾಡಿಕೊಂಡಿದ್ದರು. ಕಳೆದ 15 ದಿನಗಳಿಂದ ಆನಾರೋಗ್ಯದಿಂದ ಅಂಗಡಿಗೆ ಕೆಲಸಕ್ಕೆ ಹೋಗಿರಲಿಲ್ಲ. ಘಟನೆ ನಡೆದ 3 ದಿನದ ಹಿಂದಷ್ಟೇ ಮತ್ತೆ ಕೆಲಸಕ್ಕೆ ತೆರಳಿ ತನ್ನ ಕಾಯಕದಲ್ಲಿ ಜಗನ್ನಾಥ ತೊಡಗಿಕೊಂಡಿದ್ದರು. ಪ್ರತಿದಿನ ಬೆಳಗ್ಗೆ 7.30 ಅಂಗಡಿಗೆ ಹೋಗಿ ಸಂಜೆ 4 ಗಂಟೆಗೆ ಮನೆಗೆ ವಾಪಸ್ ಆಗುತ್ತಿದ್ದರು. ಜು. 16ರಂದು ಬಹಳ ಗಡಿಬಿಡಿಯಿಂದ ನಿಂತುಕೊಂಡೇ ಚಹಾ ಕುಡಿದು, ಇವತ್ತು ಅಂಗಡಿಯಲ್ಲಿ ಹೆಚ್ಚಿನ ಕೆಲಸ ಇದೆ. ನಿಗದಿತ ಸಮಯಕ್ಕಿಂತ ಮೊದಲು 7 ಗಂಟೆಗೆ ಮನೆಯಿಂದ ನೆಂಟ ಲಕ್ಷಣ ನಾಯ್ಕ ಅಂಗಡಿಯತ್ತ ಹೆಜ್ಜೆ ಹಾಕಿದ್ದರು. ಆದರೆ ವಿಧಿಯಾಟದ ಲೆಕ್ಕಾಚಾರ ಮಾತ್ರ ಎಣಿಕೆಗೆ ನಿಲುಕದಂತಾಗಿತ್ತು.ಇತ್ತ ತಮ್ಮ ಇಲ್ಲ, ಅತ ಪತಿಯೂ ಇಲ್ಲ: ಶಿರೂರಿನ ಗುಡ್ಡ ಕುಸಿತ ಘಟನೆಯಲ್ಲಿ ಚಹಾ ಅಂಗಡಿಯ ಮಾಲೀಕ ಲಕ್ಷ್ಮಣ ಮಣ್ಣಿನಲ್ಲಿ ಸಿಲುಕಿ ಮೃತಪಟ್ಟಿದ್ದ. ಇತ್ತ ಪತಿ ಜಗನ್ನಾಥ ಮಣ್ಣಿನಲ್ಲಿ ಹೂತು ಹೋಗಿ ನಾಪತ್ತೆಯಾಗಿದ್ದ. ಕುಟುಂಬಕ್ಕೆ ಆಸರೆಯಾಗಬೇಕಿದ್ದ ಪತಿ, ಎಲ್ಲ ಕೆಲಸದಲ್ಲೂ ಹೆಗಲಾಗುತ್ತಿದ್ದ ತಮ್ಮನ ಪ್ರೋತ್ಸಾಹ, ಮುತ್ತಿನಂಥ ಅತ್ತಿಗೆ ಶಾಂತಿ, ಚಿಲಿಪಿಲಿಯಂತೆ ಓಡಾಡುತ್ತಿದ್ದ ಮಕ್ಕಳಾದ ರೋಷನ್, ಆವಂತಿಕಾ ಎಲ್ಲವನ್ನು ನಾನು ಕಳೆದುಕೊಂಡೆ ಎಂಬ ಬೇಬಿ ನಾಯ್ಕ ಅವರ ರಕ್ತ ಕಣ್ಣೀರಿಗೆ ಎಂಥವರ ಕಲ್ಲು ಹೃದಯವು ಕರಗಿಸುತ್ತದೆ.
ನಮ್ಮ ತಂದೆ ಹುಡುಕಿ ಕೊಡಿ: ಕೂಲಿ ಮಾಡಿಯೆ ಮೂವರು ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದ ಅಪ್ಪನನ್ನು ನೋಡದೆ 8 ದಿನ ಕಳೆದಿದೆ. ದಯವಿಟ್ಟು ನಮ್ಮ ಅಪ್ಪನನ್ನು ಹುಡುಕಿಕೊಡಿ ಎಂಬ ಈ ಹೆಣ್ಮಕ್ಕಳು ಕರುಳು ಹಿಂಡುವ ಆರ್ತನಾದ ಇನ್ನು ತನಕ ಜಿಲ್ಲಾಡಳಿತದ ಕಿವಿಗೆ ಅಪ್ಪಳಿಸದೆ ಇರುವುದು ದುರುಂತವೆ ಸರಿ. ಕೇವಲ ರಸ್ತೆಯಲ್ಲಿ ಬಿದ್ದ ಮಣ್ಣನ್ನು ತೆರವುಗೊಳಿಸಲಾಗುತ್ತಿದೆ. ಅಂಗಡಿಯ ಬಳಿ ಕಾರ್ಯಾಚರಣೆ ನಡೆಸಿದರೆ ನಮ್ಮ ಅಪ್ಪ ಸಿಗುತ್ತಿದ್ದ ಎಂಬ ಆಕ್ರಂದನ ಈ ಮಕ್ಕಳದ್ದಾಗಿದೆ.ಶಿರೂರಿನ ಗುಡ್ಡ ಕುಸಿತದಲ್ಲಿ ನಾಪತ್ತೆಯಾದ ಜಗನ್ನಾಥ ನಾಯ್ಕ ಪತ್ತೆ ಇನ್ನುವರೆಗೂ ಆಗಿಲ್ಲ. ಇವರ ಮನೆಯಲ್ಲಿ ಕಣ್ಣೀರು ಬಿಟ್ಟರೆ, ಊಟವನ್ನು ಬಿಟ್ಟು ನೀರೆ ಕುಡಿದು ಜಗನ್ನಾಥ ನಾಯ್ಕ ಬರುವಿಕೆಗಾಗಿ ಕಾದು ಕುಳಿತಿರುವ ಈ ಕುಟುಂಬದ ಕಣ್ಣುಗಳು ಮಂಜಾಗುತ್ತಿದೆ. ಆದಷ್ಟು ಬೇಗ ಜಗನ್ನಾಥ ಅವರ ಪತ್ತೆಯನ್ನು ಜಿಲ್ಲಾಡಳಿತ ಕೈಗೊಂಡು ದುಗುಡ ದೂರ ಮಾಡಿಕೊಡಬೇಕು ಎಂಬ ಕೂಗು ಕೇಳಿ ಬಂದಿದೆ.
ಮದುವೆ ವಾರ್ಷಿಕೋತ್ಸವದ ಸಂಭ್ರಮಾಚರಣೆ ಮಾಡಿಕೊಂಡಿದ್ದರು...ಮದುವೆಯಾದ ಮೇಲೆ ಎಂದೂ ಮದುವೆಯ ವಾರ್ಷಿಕೋತ್ಸವ ಸಂಭ್ರಮಾಚರಣೆಯನ್ನು ಜಗನ್ನಾಥ ನಾಯ್ಕ ಅವರು ಮಾಡಿಕೊಂಡಿರಲಿಲ್ಲ. ಕಳೆದ ಮೇ 17ರಂದು ಮಕ್ಕಳ ಒತ್ತಾಯಕ್ಕೆ ಮಣಿದು ಕೇಕ್ ಕಟ್ ಮಾಡಿ ಸಂಭ್ರಮ ಪಟ್ಟು, ಮಕ್ಕಳ ಪ್ರೀತಿ ಕಂಡು ಜನ್ಮ ಸಾರ್ಥಕವಾಯಿತು ಎಂದಿದ್ದರಂತೆ ಜಗನ್ನಾಥ.