ಮಂಜೇಶ್ವರ ಮತ್ತು ಕಾಸರಗೋಡು ವಿಧಾನಸಭಾ ಕ್ಷೇತ್ರದ ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಕೇರಳ ನಿವಾಸಿಗಳು ಜಮಾಯಿಸಿದ್ದರು. ಆಂಬ್ಯುಲೆನ್ಸ್ ಟೋಲ್ ಬೂತ್ ದಾಟಿದ ಬಳಿಕ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಯಿತು. ಹೂಗುಚ್ಛಗಳನ್ನು ಮೃತದೇಹದ ಮೇಲೆ ಇಡುವ ಮೂಲಕ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಉಳ್ಳಾಲ

ಶಿರೂರು ಭೂಕುಸಿತ ದುರಂತದಲ್ಲಿ ಮೃತಪಟ್ಟಿದ್ದ ಕೇರಳ ಕಲ್ಲಿಕೋಟೆ ಮೂಲದ ಲಾರಿ ಚಾಲಕ ಅರ್ಜುನ್ (೩೫) ಮೃತದೇಹ ೭೩ ದಿನಗಳ ನಂತರ ಪತ್ತೆಯಾಗಿ ಹುಟ್ಟೂರು ಕೇರಳಕ್ಕೆ ಕೊಂಡೊಯ್ಯುವ ಸಂದರ್ಭ ಗಡಿಭಾಗ ತಲಪಾಡಿಯಲ್ಲಿ ಜನಪ್ರತಿನಿಧಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿ ಅಂತಿಮ ದರ್ಶನ ಪಡೆದುಕೊಂಡರು. ಶುಕ್ರವಾರ ಸಂಜೆ ಅಂಕೋಲಾದಿಂದ ಆಂಬ್ಯುಲೆನ್ಸ್ ಮೂಲಕ ಅರ್ಜುನ್ ಅಂತಿಮ ಯಾತ್ರೆಯನ್ನು ಕೈಗೊಳ್ಳಲಾಗಿತ್ತು. ಕರ್ನಾಟಕ- ಕೇರಳ ಗಡಿಭಾಗ ತಲಪಾಡಿ ತಲುಪುವಾಗ ತಡರಾತ್ರಿ ೨ ಗಂಟೆಯಾಗಿತ್ತು. ಈ ವೇಳೆ ಮಂಜೇಶ್ವರ ಮತ್ತು ಕಾಸರಗೋಡು ವಿಧಾನಸಭಾ ಕ್ಷೇತ್ರದ ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಕೇರಳ ನಿವಾಸಿಗಳು ಜಮಾಯಿಸಿದ್ದರು. ಆಂಬ್ಯುಲೆನ್ಸ್ ಟೋಲ್ ಬೂತ್ ದಾಟಿದ ಬಳಿಕ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಯಿತು. ಹೂಗುಚ್ಛಗಳನ್ನು ಮೃತದೇಹದ ಮೇಲೆ ಇಡುವ ಮೂಲಕ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.

ಇದೇ ವೇಳೆ ಆಂಬ್ಯುಲೆನ್‌ನಲ್ಲಿದ್ದ ಸಮಾಜ ಸೇವಕ, ಅರ್ಜುನನಿಗಾಗಿ ಜೀವದ ಹಂಗು ತೊರೆದು ನದಿಯಾಳಕ್ಕೆ ಮುಳುಗಿ ಹುಡುಕಾಡಿದ ಆಪದ್ಬಾಂಧವ ಈಶ್ವರ್ ಮಲ್ಪೆ ಅವರಿಗೂ ಗಡಿಭಾಗದ ಜನತೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭ ಪೈವಳಿಕೆ ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೈಯ್ಯಾರ್ ಮಾತನಾಡಿದರು.

ಶಾಸಕ ಸತೀಶ್ ಸೈಲ್ ಸಾಥ್ :

ಕಾರವಾರ ಶಾಸಕ ಸತೀಶ್ ಸೈಲ್ ಮಾತನಾಡಿ, ಶಿರೂರು ಗುಡ್ಡ ಕುಸಿತ ಪ್ರಕರಣ ರಾಜ್ಯದಲ್ಲೇ ವಿಚಿತ್ರ ಘಟನೆಯಾಗಿದ್ದು, ಘಟನೆಯಲ್ಲಿ ೧೧ ಜನ ಮೃತಪಟ್ಟಿದ್ದು, ಕಳೆದ ೭೧ ದಿನಗಳಲ್ಲಿ ೩ ಹುಡುಕಾಟದಲ್ಲಿದ್ದೆವು. ಈ ಪೈಕಿ ಅರ್ಜುನನ ಮೃತದೇಹ ಲಾರಿಯೊಳಗಡೆ ೭೧ನೇ ದಿನಕ್ಕೆ ಪತ್ತೆಯಾಗಿದ್ದರೆ, ಸ್ಥಳೀಯ ಲೋಕೇಶ್ ಮತ್ತು ಜಗನ್ನಾಥ್ ಇಬ್ಬರು ಇನ್ನೂ ಪತ್ತೆಯಾಗಿಲ್ಲ. ದುರಂತ ಸಂಭವಿಸಿ ಇಂದಿಗೆ ೭೩ ದಿನಗಳಾಗಿವೆ. ೭೧ ದಿನಗಳ ಸತತ ವಿವಿಧ ರೀತಿಯಲ್ಲಿ ನಡೆಸಿದ ಪ್ರಯತ್ನದಿಂದ ಅರ್ಜುನ್ ಅವರ ಮೃತದೇಹ ಪತ್ತೆಯಾಗಿದೆ. ಮಂಜೇಶ್ವರ ಶಾಸಕ ಶಿರೂರಿನಲ್ಲೇ ಇದ್ದು, ಕಾರ್ಯಾಚರಣೆಗೆ ಸಹಕರಿಸಿದ್ದರು. ಕರ್ನಾಟಕ ಸರ್ಕಾರ ೫ ಲಕ್ಷ ರು. ಪರಿಹಾರದ ಚೆಕ್ ನೀಡಿದ್ದು, ಅದನ್ನು ಮತ್ತು ಅರ್ಜುನನ ಮೃತದೇಹವನ್ನು ಅವರ ಮನೆಗೆ ತಲುಸಿಪಿ ವಾಪಸ್‌ ಬರುತ್ತೇವೆ ಎಂದರು.