ಶಿರೂರು ದುರಂತ: ಮತ್ತೆ ಶೋಧ ಶುರು

| Published : Sep 21 2024, 01:46 AM IST

ಸಾರಾಂಶ

ಶನಿವಾರದಿಂದ ಬೆಳಗ್ಗೆ 8 ಗಂಟೆಯಿಂದ ಸಂಜೆ 6.30 ಗಂಟೆಯವರೆಗೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.

ಅಂಕೋಲಾ: ತಾಲೂಕಿನ ಶಿರೂರು ಗುಡ್ಡ ಕುಸಿತದ ದುರಂತದಿಂದಾಗಿ ಗಂಗಾವಳಿ ನದಿಯಲ್ಲಿ ನಡುಗಡ್ಡೆಯಂತಾಗಿರುವ ಮಣ್ಣನ್ನು ತೆರವುಗೊಳಿಸಿ ಅದರಡಿ ಸಿಲುಕಿರುವ ಶವ ಹಾಗೂ ಬೆಂಜ್ ಲಾರಿಯನ್ನು ಪತ್ತೆ ಹಚ್ಚಲು ಬೃಹತ್‌ ಡ್ರೆಜಿಂಗ್ ಯಂತ್ರವು ಶುಕ್ರವಾರ ಸಂಜೆಯಿಂದ ಕಾರ್ಯಾಚರಣೆಗೆ ಇಳಿದಿದೆ.ಶಾಸಕ ಸತೀಶ ಸೈಲ್ ಅವರು ಡ್ರೆಜಿಂಗ್ ಯಂತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಾಚರಣೆಗೆ ಚಾಲನೆ ನೀಡಿದರು. ಪೂಜೆಯ ನಂತರ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ, ಕೇರಳದ ಶಾಸಕ ಎ.ಕೆ‌.ಎಂ. ಅಶ್ರಫ್, ಶಾಸಕ‌ ಸತೀಶ ಸೈಲ್ ಡ್ರೆಜಿಂಗ್ ಯಂತ್ರದೊಂದಿಗೆ ಸಾಗಿ ಕಾರ್ಯಾಚರಣೆಗೆ ಸೂಕ್ತ ಮಾರ್ಗದರ್ಶನ ನೀಡಿದರು.

ಪತ್ತೆ ಕಾರ್ಯಾಚರಣೆಯು ಸಂಜೆ 5.30ರ ನಂತರ ಚಾಲನೆ ನೀಡಲಾಯಿತು. ಕೇವಲ 1 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಆಲದ ಮರದ‌ ರೆಂಬೆಯೊಂದು ಮಾತ್ರ ಪತ್ತೆಯಾಗಿದೆ.

ಕಳೆದ 2- 3 ದಿನಗಳಿಂದ ಮಳೆ ಇಳಿಮುಖವಾಗಿದ್ದರಿಂದ‌ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಇದರಿಂದ ಕಾರ್ಯಾಚರಣೆಗೆ ಅನುಕೂಲವಾಗಿದೆ. ಡ್ರೆಜಿಂಗ್ ಯಂತ್ರದಲ್ಲಿ ಎರಡು ಹಿಟಾಚಿ ಹಾಗೂ ಒಂದು ಬಗ್ಗಿ ಯಂತ್ರ ಹೊಂದಿದೆ. ಈ ಯಂತ್ರಗಳ ಮೂಲಕ ತೆರವು ಕಾರ್ಯ ಮಾಡಲಾಗುತ್ತಿದೆ.ಸುಮಾರು ಹತ್ತು ದಿನಗಳ ಕಾಲ ಕಾರ್ಯಾಚರಣೆ ನಡೆಯಲಿದೆ. ಈಗಾಗಲೇ ಐಆರ್‌ಬಿ ಹಾಗೂ ಎನ್‌ಎಚ್‌ಎಐ ₹41 ಲಕ್ಷವನ್ನು ಡ್ರೆಜಿಂಗ್ ಯಂತ್ರದ ಮಾಲೀಕರಿಗೆ ಸಂದಾಯ ಮಾಡಿರುವುದಾಗಿ ತಿಳಿದುಬಂದಿದೆ. ಸುಮಾರು ₹1 ಕೋಟಿ ಶಿರೂರು ಗುಡ್ಡ ಕುಸಿತದ 3ನೇ ಹಂತದ ಕಾರ್ಯಾಚರಣೆಗೆ ತಗುಲಬಹುದೆಂದು ಅಂದಾಜಿಸಲಾಗಿದೆ.ಕತ್ತಲಾಗಿದ್ದರಿಂದ ಶುಕ್ರವಾರ ಸಂಜೆ 6.40ಕ್ಕೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು. ಶನಿವಾರದಿಂದ ಬೆಳಗ್ಗೆ 8 ಗಂಟೆಯಿಂದ ಸಂಜೆ 6.30 ಗಂಟೆಯವರೆಗೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.

8 ಜನರ ಮೃತದೇಹ ಪತ್ತೆ

ಜು. 16ರಂದು ಶಿರೂರು ಸಮೀಪದ ಗುಡ್ಡ ಕುಸಿತದಿಂದಾಗಿ ಉಂಟಾದ ಭೀಕರ ಅವಘಡದಲ್ಲಿ 11 ಜನರು ದಾರುಣವಾಗಿ ಸಾವು ಕಂಡಿದ್ದರು. ಇವರ ಪೈಕಿ 8 ಜನರ ಮೃತದೇಹಗಳು ಪತ್ತೆಯಾಗಿವೆ. ಶಿರೂರಿನ ಜಗನ್ನಾಥ ನಾಯ್ಕ, ಗಂಗೆಕೊಳ್ಳದ ಲೋಕೇಶ ನಾಯ್ಕ ಕೇರಳದ ಚಾಲಕ ಅರ್ಜುನ ಅವರಿಗಾಗಿ ಮತ್ತು ಲಾರಿಯ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಲಾಗಿದೆ.

ಜಂಟಿ ಕಾರ್ಯಾಚರಣೆ

ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳ, ನೌಕಾಸೇನೆ, ಪೊಲೀಸ್ ಇಲಾಖೆ ಸಹಯೋಗದಲ್ಲಿ ಶೋಧ ಕಾರ್ಯಾಚರಣೆ ನಡೆದಿದೆ. ಇನ್ನೊಂದೆಡೆ ಇಂದ್ರಪಾಲನ್ ನೇತೃತ್ವದ ಪರಿಣಿತರ ತಂಡ ಹಾಗೂ ಮುಳುಗುತಜ್ಞ ಈಶ್ವರ ಮಲ್ಪೆ ನೇತೃತ್ವದ ತಂಡ ಕಾರ್ಯಾಚರಣೆಗೆ ಸಾಥ್ ನೀಡಿದೆ.