ಸಾರಾಂಶ
ಕನ್ನಡಪ್ರಭ ವಾರ್ತೆ ಕಾಪು
ಇಲ್ಲಿನ ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಆಂಬುಲೆನ್ಸ್ ಸೇವೆ ಸ್ಥಗಿತಗೊಂಡಿದ್ದು, ಇದನ್ನು ಪುನಃ ಆರಂಭಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರಿಗೆ ಸಾಮಾಜಿಕ ಕಾರ್ಯಕರ್ತ ಪವನ್ ಕುಮಾರ್ ಮನವಿ ಸಲ್ಲಿಸಿದರು.ಪ್ರಸ್ತುತ ಶಿರ್ವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಂದು 108 ಆಂಬುಲೆನ್ಸ್ ಮತ್ತು ಇನ್ನೊಂದು ಆಸ್ಪತ್ರೆಯ ಆಂಬುಲೆನ್ಸ್ ಸೇರಿದಂತೆ ಎರಡು ಆಂಬುಲೆನ್ಸ್‌ಗಳಿವೆ. ಆದರೆ, ಈ ಎರಡೂ ಆಂಬುಲೆನ್ಸ್‌ಗಳಿಗೆ ಚಾಲಕರ ಕೊರತೆ ಇದೆ. ಆಸ್ಪತ್ರೆಯ ಆಂಬುಲೆನ್ಸ್ ವಾರದಲ್ಲಿ ಮೂರು ದಿನ ಮಾತ್ರ ಕೆಲಸದ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ, 108 ಆಂಬುಲೆನ್ಸ್ ಚಾಲಕರಿಲ್ಲದೆ ನಿಷ್ಕ್ರಿಯ ಗೊಂಡಿದ್ದು, ಈ ಬಗ್ಗೆ ಕಾರ್ಕಳದ ಅಧಿಕಾರಿಗಳನ್ನು ಕೇಳಿದರೆ ಅದನ್ನು ದುರಸ್ತಿ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಶಿರ್ವದಲ್ಲಿ ಹೆಚ್ಚಿನ ಜನಸಂಖ್ಯೆ ಇರುವ ಕಾರಣ 108 ಆಂಬುಲೆನ್ಸ್ ಲಭ್ಯತೆ ಅತ್ಯವಶ್ಯಕವಾಗಿದೆ. ತುರ್ತು ಸಂದರ್ಭದಲ್ಲಿ ಸರ್ಕಾರಿ ಆಂಬುಲೆನ್ಸ್ ಸೇವೆಗಳು ಲಭ್ಯವಿಲ್ಲದ ಕಾರಣ ರೋಗಿಗಳು ಹೆಚ್ಚಿನ ವೆಚ್ಚದಲ್ಲಿ ಖಾಸಗಿ ಆಂಬುಲೆನ್ಸ್‌ಗಳನ್ನು ಬಳಸುವಂತಾಗಿದೆ ಎಂದು ಪವನ್ ಕುಮಾರ್ ಮನವಿಯಲ್ಲಿ ತಿಳಿಸಿದ್ದಾರೆ.ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಒಂದು ವಾರದೊಳಗೆ ಸಮಸ್ಯೆ ಪರಿಹರಿಸಲಾಗುವುದು ಮತ್ತು ಶಿರ್ವಕ್ಕೆ 108 ಆಂಬುಲೆನ್ಸ್ ಸೇವೆ ಒದಗಿಸಲಾಗುವುದು ಎಂದು ಭರವಸೆ ನೀಡಿದರು ಎಂದು ಪವನ್ ತಿಳಿಸಿದ್ದಾರೆ.