ಶಿಶುನಾಳ ಶರೀಫರು ನಮ್ಮ ನೆಲದ ಆಧ್ಯಾತ್ಮದ ಶಕ್ತಿ: ಸತೀಶ ಕುಲಕರ್ಣಿ

| Published : Jul 05 2024, 12:48 AM IST

ಶಿಶುನಾಳ ಶರೀಫರು ನಮ್ಮ ನೆಲದ ಆಧ್ಯಾತ್ಮದ ಶಕ್ತಿ: ಸತೀಶ ಕುಲಕರ್ಣಿ
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿಯ ಶಿಕ್ಷಕ ಈರನಗೌಡ ಅಗಸಿಬಾಗಿಲ ಅವರ ಮನೆಯಂಗಳದಲ್ಲಿ ಸಂತ ಶಿಶುನಾಳ ಶರೀಫರ ಜನ್ಮದಿನ ಹಾಗೂ ತತ್ವಪದ ಸಂಗೀತ, ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ನಡೆಯಿತು.

ಹಾವೇರಿ: ಶಿಶುನಾಳ ಶರೀಫರು ನಮ್ಮ ನೆಲದ ಆಧ್ಯಾತ್ಮದ ಶಕ್ತಿ, ಕಾಲ ತೂಗಿ ಕಾವ್ಯ ಬರೆದ ತತ್ವ ಪದಕಾರ, ದೂರದೃಷ್ಟಿಯ ಕಾಲಜ್ಞಾನಿ, ಇಹ-ಪರಗಳೆರಡನ್ನೂ ಹಾಡಾಗಿಸಿದ ಸಂತ ಎಂದು ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.

ಹಾವೇರಿಯ ಶಿಕ್ಷಕ ಈರನಗೌಡ ಅಗಸಿಬಾಗಿಲ ಅವರ ಮನೆಯಂಗಳದಲ್ಲಿ ಶರಣ ಸಾಹಿತ್ಯ ಪರಿಷತ್ ಹಾವೇರಿ ನಗರ ಘಟಕ, ಕರ್ನಾಟಕ ಅಚಿವರ್ಸ್‌ ಬುಕ್ ಆಫ್ ರೆಕಾರ್ಡ್‌ ಸಂಸ್ಥೆ ಆಯೋಜಿಸಿದ ಸಂತ ಶಿಶುನಾಳ ಶರೀಫರ ಜನ್ಮದಿನ ಹಾಗೂ ತತ್ವಪದ ಸಂಗೀತ, ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶರೀಫರ ಪದಗಳನ್ನು ಗಾನ ಲೋಕದ ಗಾರುಡಿಗ ಅಶ್ವತ್ಥ ಅವರು ಇಡೀ ಸಂಗೀತ ಲೋಕದಲ್ಲಿ ಅವಿಸ್ಮರಣೀಯಗೊಳಿಸಿದರು. ಜನರೊಡನೆ ಬೆರೆತು ಎಲ್ಲ ಕಾಲದ ಧ್ವನಿಯಾಗಿ ಇಹ-ಪರಗಳೆರಡನ್ನೂ ಅಧ್ಯಾತ್ಮದಲ್ಲಿ ಬೆಸೆದು ಹಾಡಾಗಿ ನೀಡಿದ ಶ್ರೇಯಸ್ಸು ಶರೀಫರದ್ದಾಗಿದೆ. ತತ್ವಪದಗಳ ಮೂಲಕ ಮೌಲ್ಯಗಳ ದೊಡ್ಡ ಮೊತ್ತವನ್ನೇ ನೀಡಿ ಜಡವಾಗಿರುವುದನ್ನು ಚಲನಶೀಲಗೊಳಿಸಿದ ಶಕ್ತಿಯುತ ಸಾಧಕ ಶಿಶುನಾಳ ಶರೀಫರು ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ. ಮಾರುತಿ ಶಿಡ್ಲಾಪುರ ಮಾತನಾಡಿ, ಶರಣರ ಸಂದೇಶಗಳು ಸತ್ಸಮಾಜ ನಿರ್ಮಾಣದ ಶಕ್ತಿಯುತ ಸಂವೇದನೆಗಳಾಗಿವೆ. ಎಲ್ಲ ಕಾಲಕ್ಕೂ ಸಲ್ಲುವ ಶರಣರ ವಿಚಾರಧಾರೆಗಳು ಅತ್ಯಂತ ಸರಳ ಹಾಗೂ ಸಂವೇದಿಯಾಗಿವೆ. ಇಂದಿನ ಯುವಕರು ಮಕ್ಕಳಿಗೆ ಅತ್ಯವಶ್ಯಕವಾಗಿ ವಚನಗಳನ್ನು ಪರಿಚಯಿಸುವ ಅಗತ್ಯವಿದೆ. ವಚನ ಸಾಹಿತ್ಯದಂತಹ ಮೌಲ್ಯಯುವ ವಿಚಾರಗಳನ್ನು ಬಿತ್ತಿ ಬೆಳೆಯುವ ಅಗತ್ಯವಿದೆ ಎಂದರು.

ಶಿಶುನಾಳ ಶರೀಫರ ಬದುಕು ಬರಹ ಕುರಿತು ಶಿಕ್ಷಕಿ ರೂಪಾ ಸಜ್ಜನ ಮಾತನಾಡಿ, ತತ್ವಪದಗಳನ್ನು ಬದುಕಿನ ಸಂವೇದನೆಗಳಾಗಿ ನೀಡಿದ ಶಿಶುನಾಳ ಶರೀಫರು ಕರ್ನಾಟಕ ಕಬೀರ ಖ್ಯಾತಿಯನ್ನು ಪಡೆದಿದ್ದಾರೆ. ಅವರ ಹಾಡುಗಳು ಸಂಜೀವಿನಿಯಂತೆ. ಜಾತಿ, ಧರ್ಮ ಮೀರಿ ಅಧ್ಯಾತ್ಮದ ಆಳಕ್ಕೆ ಇಳಿದು, ವೈದಿಕ ವೀರಶೈವವನ್ನೂ ತಿಳಿದು, ವೈರಾಗ್ಯ ಭಾವೈಕ್ಯದ ಹಿತ ಸಂದೇಶಗಳನ್ನು ನೀಡಿದರು. ಭವದ ಹಂಗು ತೊರೆದು ಭಾವೈಕ್ಯದ ಕವಿಯಾದರು. ಇಂದಿನ ಸಮಾಜಕ್ಕೆ ಸಂಸ್ಕಾರದ ಅಗತ್ಯವಿದೆ. ಅದು ಮಹಾತ್ಮರ ಜೀವನ ಅರಿತು, ಅವರ ಸಂದೇಶಗಳನ್ನು ಅರಿಯುವ ಮೂಲಕ ನಮ್ಮ ಬಾಳನ್ನು ಬೆಳಗಿಸಿಕೊಳ್ಳಲು ಮುಂದಾಗಬೇಕು ಎಂದರು.

ಶರಣ ಸಾಹಿತ್ಯ ಪರಿಷತ್ ನಗರ ಘಟಕದ ಕಾರ್ಯದರ್ಶಿ ಎಂ.ಬಿ. ಸತೀಶ ಮಾತನಾಡಿದರು. ಟಿ.ಎಸ್. ಮೇಘನಾ ಶಿಶುನಾಳ ಶರೀಫರ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ನಗರ ಘಟಕದ ಅಧ್ಯಕ್ಷ ಜಿ.ಎಂ. ಓಂಕಾರಣ್ಣನವರ, ಕರ್ನಾಟಕ ಅಚಿವರ್ಸ್ ಬುಕ್ ಆಫ್ ರೆಕಾರ್ಡ್‌ ಸಂಸ್ಥೆ ಅಧ್ಯಕ್ಷೆ ಡಾ. ಅಂಬಿಕಾ ಹಂಚಾಟೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಮನ್ವಯಾಧಿಕಾರಿ ಸಿ.ಎಸ್. ಶ್ರೀನಿವಾಸ ಇದ್ದರು.

ಕಲಾವಿದರಾದ ಕೆ.ಆರ್. ಹಿರೇಮಠ, ಮಾಲತೇಶ ಮರಿಗೂಳಪ್ಪನವರ, ಎ.ಬಿ. ಗುಡ್ಡಳ್ಳಿ, ಅಕ್ಕಮಹಾದೇವಿ ಹಾನಗಲ್ಲ, ಮಂಜುನಾಥ ವಾಲ್ಮೀಕಿ, ಹುಡೇದ ಅವರು ಶಿಶುನಾಳ ಶರೀಫರ ತತ್ವಪದಗಳನ್ನು ಹಾಡಿದರು.

ಶಿಕ್ಷಕ ಈರಣ್ಣ ಅಗಸಿಬಾಗಿಲ ಸ್ವಾಗತಿಸಿದರು. ಅನಿತಾ ಅಶೋಕ ಉಪಲಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಶಸಾಪ ಉಪಾಧ್ಯಕ್ಷ ಚಂದ್ರಶೇಖರ ಮಾಳಗಿ ವಂದಿಸಿದರು.