ಸಾರಾಂಶ
ಮುಂಬರುವ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಶಿಶುನಾಳ ಶರೀಫರ ಅಭಿವೃದ್ಧಿ ಪ್ರಾಧಿಕಾರ ಘೋಷಣೆ ಮಾಡಿ, ಶರೀಫಗಿರಿಯನ್ನು ಅಭಿವೃದ್ಧಿ ಪಡಿಸಬೇಕು ಎಂದು ಆಗ್ರಹಿಸಿ ಕರವೇ ಸ್ವಾಭಿಮಾನಿ ಸೇನೆ ಪದಾಧಿಕಾರಿಗಳು ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಹಾವೇರಿ: ಮುಂಬರುವ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಶಿಶುನಾಳ ಶರೀಫರ ಅಭಿವೃದ್ಧಿ ಪ್ರಾಧಿಕಾರ ಘೋಷಣೆ ಮಾಡಿ, ಶರೀಫಗಿರಿಯನ್ನು ಅಭಿವೃದ್ಧಿ ಪಡಿಸಬೇಕು ಎಂದು ಆಗ್ರಹಿಸಿ ಕರವೇ ಸ್ವಾಭಿಮಾನಿ ಸೇನೆ ಪದಾಧಿಕಾರಿಗಳು ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಸಂಘಟನೆ ಜಿಲ್ಲಾಧ್ಯಕ್ಷ ರಾಮು ತಳವಾರ ಮಾತನಾಡಿ, ಗ್ರಾಮೀಣ ಸೊಗಡಿನ ಸಂತ ಶಿಶುನಾಳ ಶರೀಫರು ನಾಡಿನಾದ್ಯಂತ ಸಂಚರಿಸಿ ತತ್ವಪದ, ಲಾವಣಿ, ಕೋಲಾಟ, ಹೆಜ್ಜೆಮೇಳ ಪದಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ನಾಡಿನಲ್ಲಿ ಕೋಮು ಸೌಹಾರ್ದ ಮನೋಭಾವ ಮೂಡಿಸಿದ್ದಾರೆ. ಈ ಹೆಜ್ಜೆ ಗುರುತುಗಳನ್ನು ಇನ್ನಷ್ಟು ಗಟ್ಟಿಗೊಳಿಸಲು ಶರೀಫ ಪ್ರಾಧಿಕಾರ ರಚನೆಯು ಅಗತ್ಯವಾಗಿದೆ ಎಂದರು.ಕರವೇ ಜಿಲ್ಲಾ ಮಹಿಳಾ ಸಮಿತಿ ಅಧ್ಯಕ್ಷೆ ಸುಮಾ ಪುರದ ಮಾತನಾಡಿ, ಹಲವಾರು ದಶಕಗಳಿಂದ ಈ ಭಾಗದ ಸಾರ್ವಜನಿಕರು ಕನ್ನಡಪರ ಸಂಘಟನೆಗಳು, ವಿವಿಧ ಸಂಘ ಸಂಸ್ಥೆಗಳು ಪ್ರಾಧಿಕಾರ ರಚನೆಗಾಗಿ ಹೋರಾಟ ಮಾಡುತ್ತ ಬಂದಿದ್ದರೂ ಸಹಿತ ಯಾವುದೇ ಪ್ರಯೋಜನವಾಗಿಲ್ಲ. ಶರೀಫಗಿರಿ ಅಭಿವೃದ್ಧಿಗಾಗಿ ಈ ಹಿಂದಿನ ಸರ್ಕಾರ ಸಾಕಷ್ಟು ಅನುದಾನ ನೀಡಿದ್ದರೂ ಪ್ರಾಧಿಕಾರ ರಚನೆ ಸಾಧ್ಯವಾಗಿಲ್ಲ. ಕಾರಣ ಮುಂಬರುವ ಬಜೆಟ್‌ನಲ್ಲಿ ಪ್ರಾಧಿಕಾರ ಘೋಷಣೆ ಮಾಡದಿದ್ದರೆ ಜಿಲ್ಲಾದ್ಯಂತ ಉಗ್ರವಾದ ಹೋರಾಟ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಘಟನೆಯ ಎಂ.ಕೆ. ತಿಮ್ಮಾಪುರ, ಪ್ರೇಮಾ ಮುದಿಗೌಡ್ರ, ಮಂಜುನಾಥ ಕೋಲಕಾರ, ಬಸವಣ್ಣಯ್ಯ ಬಸಾಪುರಮಠ, ಪ್ರವೀಣ ಕಾಗದ, ಶರಣಪ್ಪ ಶಾಂತಗಿರಿ, ಉಮೇಶ ಮುದಿಗೌಡ್ರ, ಸುರೇಶ ವನಹಳ್ಳಿ, ಮಂಜುನಾಥ ದಾನಪ್ಪನವರ ಸೇರಿದಂತೆ ಅನೇಕ ಮುಖಂಡರು ಇದ್ದರು.