ಕಣ್ಣಿನ ರಕ್ಷಣೆಗೆ ಪ್ರತಿಯೊಬ್ಬರ ಕಾಳಜಿ ವಹಿಸಿ

| Published : Jan 17 2024, 01:47 AM IST

ಸಾರಾಂಶ

ಹುಟ್ಟಿನಿಂದಲೇ ದೃಷ್ಟಿ ಕಳೆದುಕೊಂಡವರು ಪ್ರಪಂಚ ನೋಡುವ ಭಾಗ್ಯದಿಂದ ವಂಚಿತರಾಗಿದ್ದಾರೆ. ಆದರೆ ಬಹಳಷ್ಟು ಮಂದಿ ತಮ್ಮ ನಿರ್ಲಕ್ಷ್ಯದಿಂದ ಕಣ್ಣು ಕಳೆದುಕೊಂಡವರಿದ್ದಾರೆ. ಆದ ಕಾರಣ ದೃಷ್ಟಿ ಇದ್ದವರು ಕಣ್ಣಿನ ರಕ್ಷಣೆಗೆ ಒತ್ತು ನೀಡುವುದು ಅವಶ್ಯವಾಗಿದೆ

ಯಲಬುರ್ಗಾ: ಪ್ರತಿಯೊಬ್ಬರು ಕಣ್ಣುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ರೆಡ್ ಕ್ರಾಸ್ ತಾಲೂಕು ಘಟಕದ ನಿರ್ದೇಶಕ ಶಿವಶರಣಪ್ಪ ಬಳಿಗಾರ ಹೇಳಿದರು.

ತಾಲೂಕಿನ ತೊಂಡಿಹಾಳ ಗ್ರಾಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ನಡೆದ ರಕ್ತದಾನ ಹಾಗೂ ನೇತ್ರ ತಪಾಸಣೆ ಶಿಬಿರದಲ್ಲಿ ಭಾಗವಹಿಸಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ವಯೋವೃದ್ದರಿಗೆ ಉಚಿತ ಕನ್ನಡಕ ವಿತರಿಸಿ ಮಾತನಾಡಿದ ಅವರು, ಹುಟ್ಟಿನಿಂದಲೇ ದೃಷ್ಟಿ ಕಳೆದುಕೊಂಡವರು ಪ್ರಪಂಚ ನೋಡುವ ಭಾಗ್ಯದಿಂದ ವಂಚಿತರಾಗಿದ್ದಾರೆ. ಆದರೆ ಬಹಳಷ್ಟು ಮಂದಿ ತಮ್ಮ ನಿರ್ಲಕ್ಷ್ಯದಿಂದ ಕಣ್ಣು ಕಳೆದುಕೊಂಡವರಿದ್ದಾರೆ. ಆದ ಕಾರಣ ದೃಷ್ಟಿ ಇದ್ದವರು ಕಣ್ಣಿನ ರಕ್ಷಣೆಗೆ ಒತ್ತು ನೀಡುವುದು ಅವಶ್ಯವಾಗಿದೆ ಎಂದರು.

ರೆಡ್ ಕ್ರಾಸ್ ಸಂಸ್ಥೆಯು ಹಲವು ವರ್ಷಗಳಿಂದ ನಿರಂತರವಾಗಿ ಉಚಿತ ನೇತ್ರ ತಪಾಸಣೆ ಶಿಬಿರ ಮಾಡಿ ಸಾಕಷ್ಟು ಮಂದಿಗೆ ಉಚಿತ ಕನ್ನಡಕ ಹಾಗೂ ಚಿಕಿತ್ಸೆ ಹಾಗೂ ಔಷಧ ನೀಡಿ ಸಾಮಾಜಿಕವಾಗಿ ಸ್ಪಂದಿಸಿದ್ದೇವೆ. ಇನ್ನೂ ಹಲವಾರು ಇಂತಹ ಸಮಾಜಮುಖಿ ಕಾರ್ಯ ಮಾಡಲಾಗುತ್ತದೆ ಎಂದು ಹೇಳಿದರು.

ಉಪಾಧ್ಯಕ್ಷ ಡಾ. ಶಿವಕುಮಾರ ದಿವಟರ ಮಾತನಾಡಿ, ಯುವಕರು ಸ್ವಯಂ ಪ್ರೇರಿತರಾಗಿ ಹೆಚ್ಚು ರಕ್ತದಾನ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು. ರಕ್ತದಾನ ಶ್ರೇಷ್ಠದಾನವಾಗಿದ್ದು, ರಕ್ತದಾನದಿಂದ ಆರೋಗ್ಯ ವೃದ್ಧಿಯಾಗುತ್ತದೆ. ತುರ್ತು ಸಂದರ್ಭ ಆಗತ್ಯ ಉಳ್ಳವರಿಗೆ ರಕ್ತ ದೊರೆಯಲಿದೆ ನಾವು ಪಡೆಯುವ ರಕ್ತ ಸುಲಭವಾಗಿ ಅಗತ್ಯವಾದವರಿಗೆ ಲಭಿಸಲಿದೆ. ರಕ್ತ ನೀಡುವುದರಿಂದ ಆತನಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ಆತ ಮತ್ತಷ್ಟು ಚೈತನ್ಯದಿಂದ ಇರಲು ಸಾಧ್ಯವಾಗುತ್ತದೆ ಎಂದರು.

೨೦ ಜನರಿಗೆ ಶಸ್ತ್ರಚಿಕಿತ್ಸೆ: ಶರಣಬಸವೇಶ್ವರ ಜಾತ್ರೆಯ ಅಂಗವಾಗಿ ರಕ್ತದಾನ ಶಿಬಿರ ಹಾಗೂ ಉಚಿತ ಕಣ್ಣಿನ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು. ೪೨ ಜನರು ರಕ್ತದಾನ ಮಾಡಿದ್ದರು. ೧೨೦ ಜನರಿಗೆ ನೇತ್ರ ಪರೀಕ್ಷೆ ಮಾಡಿ ಅವಶ್ಯವಿದ್ದ ೨೦ ಜನರಿಗೆ ಉಚಿತ ಶಸ್ತ್ರಚಿಕಿತ್ಸೆ ನೆರವರಿಸಲಾಯಿತು. ೩೩ ಜನರಿಗೆ ಉತ್ತಮ ಗುಣಮಟ್ಟದ ಕನ್ನಡಕ ವಿತರಣೆ ಕಾರ್ಯಕ್ರಮ ಜರುಗಿತು.

ರೆಡ್ ಕ್ರಾಸ್ ಸಾರ್ವಜನಿಕ ಸಂಪರ್ಕ ಅಧಿಕಾರಿ ದೇವೇಂದ್ರಪ್ಪ ಗ್ರಾಪಂ ಸದಸ್ಯ ಶೇಖರಗೌಡ, ಉಮೇಶ ಹೆಡಯಪ್ಪನವರ, ಕರಿಸಿದ್ದಪ್ಪ ಕಾಜಗಾರ ಮತ್ತಿತರರು ಇದ್ದರು.