ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡು
ಪಟ್ಟಣದ ಶ್ರೀಕಂಠೇಶ್ವರ ದೇವಾಲಯದಲ್ಲಿ ಶಿವ ಪಾರ್ವತಿಯರ ಗಿರಿಜಾ ಕಲ್ಯಾಣ ಮಹೋತ್ಸವ ದೇವಾಲಯದ ವಸಂತ ಮಂಟಪದಲ್ಲಿ ಶುಕ್ರವಾರ ಸಂಜೆ 6.20 ರಿಂದ 7ರೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಆಗಮಿಕ ನಾಗಚಂದ್ರ ದೀಕ್ಷಿತ್ ಅವರ ಆಚಾರ್ಯತ್ವದಲ್ಲಿ ನಡೆಯಿತು.ಮಹೋತ್ಸವದ ಅಂಗವಾಗಿ ಬೆಳಗ್ಗೆ ಸ್ವಾಮಿಗೆ ಅನುಜ್ಞಾಪೂರ್ವಕ ಕನ್ನಡಿ ಕಳಶ ಅಂಕುರಾರ್ಪಣ ಪೂರ್ವಕ ಮಂಗಳ ಸ್ನಾನ, ಮಧ್ಯಾಹ್ನ ನಾಂದಿ ಗೃಹಯಜ್ಞ ನಡೆಯಿತು. ನಂತರ ದೇವಾಲಯದಿಂದ ಸರ್ವ ಅಲಂಕಾರ ಭೂಷಿತವಾದ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇರಿಸಿ ದೇವಾಲಯದ ಪ್ರಾಂಗಣದ ಸುತ್ತ ಮೆರವಣಿಗೆ ಮಾಡುವ ಮೂಲಕ ಕಾಶಿ ಯಾತ್ರೆ ನಡೆಯಿತು.
ಮೆರವಣಿಗೆಯಲ್ಲಿ ಪಂಚ ವೀರಗಾಸೆ, ಪೂಜಾಕುಣಿತ, ಗಾರುಡಿಗೊಂಬೆ, ನಂದಿ ಧ್ವಜ, ಬೀಸು ಕಂಸಾಳೆ, ಮಂಗಳ ವಾದ್ಯ ತಂಡಗಳು ಉತ್ಸವಕ್ಕೆ ರಂಗು ತಂದವು.ನಂತರ ಪಾರ್ವತಿ ಅಮ್ಮನವರು ಹಾಗೂ ಶ್ರೀಕಂಠೇಶ್ವರ ಸ್ವಾಮಿಯವರ ಉತ್ಸವ ಮೂರ್ತಿಗಳನ್ನು ಕಲ್ಯಾಣ ಮಹೋತ್ಸವಕ್ಕಾಗಿ ಸಿದ್ದಗೊಂಡಿದ್ದ ಮಂಟಪದಲ್ಲಿ ಇರಿಸಿ ಸಂಬಂಧ ಮಾಲಾ ನಿರೀಕ್ಷಣಾ ಪೂರ್ವಕ ಕಲ್ಯಾಣ ಮಂಟಪ ಪ್ರವೇಶ ನಂತರ ಧಾರಾಮಹೋತ್ಸವ, ಅಕ್ಷತಾರೋಹಣ ಕಾರ್ಯಗಳು ಜರುಗಿದವು, ದೇವಾಲಯದ ವಸಂತ ಮಂಟಪದಲ್ಲಿ ಕಿಕ್ಕಿರಿದು ನೆರೆದಿದ್ದ ಭಕ್ತರು ಜಯಕಾರ ಮಾಡುತ್ತಾ ಗಿರಿಜಾಕಲ್ಯಾಣ ಮಹೋತ್ಸವವನ್ನು ಕಣ್ತುಂಬಿಕೊಂಡರು.
ಗಿರಿಜಾ ಕಲ್ಯಾಣದ ವಿಶೇಷಮೈಸೂರು ಒಡೆಯರು ಹಾಗೂ ಟಿಪ್ಪು ಸುಲ್ತಾನ್ ನೀಡಿರುವ 44 ಬಗೆಯ ಜವಹಾರಿ ಅಭರಣಗಳಿಂದ ಉತ್ಸವಮೂರ್ತಿಗಳ ಅಲಂಕರಿಸುವುದು ಗಿರಿಜಾ ಕಲ್ಯಾಣದ ವಿಶೇಷಗಳಲ್ಲೊಂದಾಗಿದೆ, ಇಮ್ಮಡಿ ಕೃಷ್ಣರಾಜ ಒಡೆಯರ್ ಅವರು ನೀಡಿರುವ ಚಿನ್ನದ ರುದ್ರಾಕ್ಷಿ, ಬಿಲ್ವಪತ್ರೆ ಸರ, ತಂಗಮಣಿ, ರತ್ನ ಖಚಿತವಾದ ಉತ್ಸವ ಕವಚ, ಕೆಂಪಿನ ಕವಚ, ಪದಕದ ಸರಗಳು ಮುತ್ತಿನ ಸರಗಳು, ಸೂರ್ಯ ಬಪಟ್ಟು, ಚಂದ್ರ ಬೊಟ್ಟು, ಹಣೆ ಬೊಟ್ಟು, ತುರಾಯಿ, ಕಡಗ, ಕಾಲು ಕಡಗ, ಹವಣದ ಉಡುದಾರಗಳಿಂದ ಶ್ರೀಕಂಠೇಶ್ವರ ಸ್ವಾಮಿ ಮತ್ತು ಅಮ್ಮನವರ ಉತ್ಸವ ಮೂರ್ತಿಗಳನ್ನು ದೇವಾಲಯದ ಖುತ್ವಿಕರು ಕ್ರಮಬದ್ದವಾಗಿ ಸಿಂಗರಿಸಿ ಕಲ್ಯಾಣ ಮಹೋತ್ಸವಕ್ಕೆ ಅಣಿಗೊಳಿಸುತ್ತಾರೆ, ಸರ್ಕಾರ ಖಜಾನೆಯಲ್ಲಿ ವಿಶೇಷ ಭದ್ರತೆಯಲ್ಲಿ ಇರಿಸಲಾದ ಈ ಅಮೂಲ್ಯವಾದ ಮುತ್ತು, ಪಚ್ಚೆ, ವಜ್ರ, ಹವಳ, ಹಾಗೂ ನವರತ್ನಗಳಿಂದ ಕೂಡಿದ ಆಭರಣಗಳನ್ನು ದೇವಾಲಯದ ಸುಪರ್ದಿಗೆ ಪಡೆದು ಅಲಂಕಾರ ಮಾಡಲಾಗುವುದು.
ಸರ್ವ ಅಲಂಕಾರ ಭೂಷಿತ ಶ್ರೀಕಂಠೇಶ್ವರ ಮತ್ತು ಪಾರ್ವತಮ್ಮನವರ ಗಿರಿಜಾ ಕಲ್ಯಾಣ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರುವ ಮೂಲಕ ಸಂಪನ್ನಗೊಂಡಿತು.ಗಿರಿಜಾ ಕಲ್ಯಾಣ ಮಹೋತ್ಸವದ ಅಂಗವಾಗಿ ಜು.7ರ ಮಂಗಳವಾರ, ಬುಧವಾರ ಮತ್ತು ಗುರುವಾರ ಮೂರು ದಿನಗಳ ಕಾಲ ಕಪಿಲಾ ನದಿಯ ತೇಲುವ ದೇವಾಲಯದಲ್ಲಿ ತೆಪ್ಪೋತ್ಸವ ಜರಗಲಿದೆ.