ಸುತ್ತೂರು ಶ್ರೀಕ್ಷೇತ್ರವು ರಮ್ಯತೆ, ಭವ್ಯತೆ, ದಿವ್ಯತೆ ಋಷಿ ಮುನಿಗಳ ನೆಲೆಬೀಡಾಗಿದೆ. ಇಲ್ಲಿ ನಡೆಯುವಂತಹ ಕಾರ್ಯಕ್ರಮಗಳು ಭಕ್ತಿ-ಭಾವಗಳ ಸಂಗಮವಾಗಿವೆ. ಸುತ್ತೂರು ಶ್ರೀಮಠವು ತ್ರಿವಿಧ ದಾಸೋಹದಿಂದ ಕೂಡಿದ ಪರಂಪರೆಯ ಮಠವಾಗಿದೆ.

ಕನ್ನಡಪ್ರಭ ವಾರ್ತೆ ಸುತ್ತೂರುಶಿವದೀಪೋತ್ಸವದ ಅಂಗವಾಗಿ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಕರ್ತೃ ಗದ್ದುಗೆ, ಶ್ರೀ ಸೋಮೇಶ್ವರ, ಶ್ರೀ ಮಹದೇಶ್ವರ, ಶ್ರೀ ವೀರಭದ್ರೇಶ್ವರ ಮತ್ತು ಶ್ರೀ ನಾರಾಯಣಸ್ವಾಮಿ ದೇವಾಲಯಗಳಲ್ಲಿ ಬುಧವಾರ ಸಂಜೆ ವಿಶೇಷ ಪೂಜಾ ಕಾರ್ಯಕ್ರಮಗಳು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಜರುಗಿತು.ಶಿವದೀಪೋತ್ಸವ (ಕೃತ್ತಿಕೋತ್ಸವ) ದಲ್ಲಿ ಮಹಾಮಂಗಳಾರತಿ, ಬೆಳ್ಳಿರಥದ ಪ್ರಾಕಾರೋತ್ಸವ ನೆರವೇರಿತು. ಇಲ್ಯುಮಿನ್ ನಾಲೆಡ್ಜ್ ರಿಸೋರ್ಸಸ್ ಲಿಮಿಟೆಡ್‌ನ ಸಂಶೋಧಕ ಡಾ. ನಾಗಮಣಿ ಎಸ್. ಖಂಡ್ರೆ ಅವರು ಭಾರತದಲ್ಲಿ ನಡೆಯುವ ಹಬ್ಬಗಳು, ಉತ್ಸವಗಳ ಆಚರಣೆಗಳು ವೈಜ್ಞಾನಿಕ ಹಿನ್ನೆಲೆ ಕೂಡಿರುತ್ತವೆ. ಜನರಲ್ಲಿ ಸುಖ, ಶಾಂತಿ, ನೆಮ್ಮದಿಯ ಬದುಕನ್ನು ರೂಪಿಸಿಕೊಳ್ಳುವಲ್ಲಿ ಸಹಕಾರಿಯಾಗಿವೆ. ಭಾರತದ ಸನಾತನ ಸಂಸ್ಕೃತಿಗೆ ಮೇಲಿಂದ ಮೇಲೆ ದಾಳಿ ನಡೆದರೂ ಕೂಡ ಮತ್ತೆ ಪುನರ್ ನಿರ್ಮಾಣವಾಗುತ್ತಿವೆ. ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಮಹತ್ತರ ಜವಾಬ್ದಾರಿಯಾಗಿದೆ. ಭಾರತೀಯ ಸಂಸ್ಕೃತಿಯು ಭವ್ಯ ಪರಂಪರೆಯನ್ನು ಹೊಂದಿದ್ದು ವಿಶಿಷ್ಟವಾಗಿದೆ. ಶಿವ ಎಂದರೆ ಮಂಗಳ, ಕತ್ತಲೆಯನ್ನು ಹೋಗಲಾಡಿಸಿ ಬೆಳಕನ್ನು ನೀಡುವುದೆ ಶಿವದೀಪೋತ್ಸವವಾಗಿದೆ. ಇದು ಜ್ಞಾನದ ಸಂಕೇತವಾಗಿದ್ದು, ಜ್ಞಾನಕ್ಕಿಂತ ಮಿಗಿಲಾದುದು ಯಾವುದು ಇಲ್ಲ ಎಂದು ತಿಳಿಸಿದರು. ಸುತ್ತೂರು ಶ್ರೀಕ್ಷೇತ್ರವು ರಮ್ಯತೆ, ಭವ್ಯತೆ, ದಿವ್ಯತೆ ಋಷಿ ಮುನಿಗಳ ನೆಲೆಬೀಡಾಗಿದೆ. ಇಲ್ಲಿ ನಡೆಯುವಂತಹ ಕಾರ್ಯಕ್ರಮಗಳು ಭಕ್ತಿ-ಭಾವಗಳ ಸಂಗಮವಾಗಿವೆ. ಸುತ್ತೂರು ಶ್ರೀಮಠವು ತ್ರಿವಿಧ ದಾಸೋಹದಿಂದ ಕೂಡಿದ ಪರಂಪರೆಯ ಮಠವಾಗಿದೆ. ಶಿವದೀಪೋತ್ಸವದ ಅಂಗವಾಗಿ ದೇವಾಲಯಗಳಿಗೆ ಮಾಡಿದ್ದ ವಿಶೇಷ ದೀಪಾಲಂಕಾರ ನೆರೆದಿದ್ದ ಸಹಸ್ರಾರು ಭಕ್ತಾದಿಗಳ ಕಣ್ಣು ಮತ್ತು ಮನಕ್ಕೆ ಮುದ ನೀಡಿದರೆ, ಬಾಣ ಬಿರುಸುಗಳು ಆಕಾಶದೆತ್ತರಕ್ಕೆ ಹಾರಿ ಚಿತ್ತಾಕರ್ಷಣೆ ಮೂಡಿಸಿ ನೆರೆದಿದ್ದ ಸಹಸ್ರಾರು ಭಕ್ತಾದಿಗಳಿಗೆ ಹರ್ಷೋದ್ಘಾರವನ್ನುಂಟು ಮಾಡಿತು. ಚಿಕ್ಕತುಪ್ಪೂರು, ಚುಂಚನಹಳ್ಳಿ, ನವಿಲೂರು, ಮಾದಾಪುರ, ಹೊನ್ನಲಗೆರೆ, ಹಂಗಳ, ಮುಡುಕನಪುರ, ಸೋಸಲೆ, ಕಳ್ಳಿಪುರ, ಮಡಿವಾಳಸ್ವಾಮಿ, ದಂಡಿಕೆರೆ, ತೊರೆನೂರು, ನೀಲಕಂಠಸ್ವಾಮಿಮಠ, ರಾಮಾಪುರ, ಬರಡನಪುರ ಮೊದಲಾದ ಮಠಗಳ ಪೂಜ್ಯರು, ಹರಗುರು ಚರಮೂರ್ತಿಗಳು, ಹನೂರಿನ ಶಾಸಕರಾದ ಎಂ.ಆರ್. ಮಂಜುನಾಥ್, ಜೆಎಸ್‌ಎಸ್ ಮಹಾವಿದ್ಯಾಪೀಠದ ಅಧಿಕಾರಿಗಳಾದ ಎಸ್.ಪಿ. ಮಂಜುನಾಥ್, ಎಸ್. ಶಿವಕುಮಾರಸ್ವಾಮಿ, ಎಸ್.ಪಿ.ಉದಯಶಂಕರ್, ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಭಕ್ತಾದಿಗಳು ಭಾಗವಹಿಸಿದ್ದರು.