ಸಾರಾಂಶ
ಚಿಕ್ಕಮಗಳೂರಿನಲ್ಲಿ ಮಡಿವಾಳ ಮಾಚಿದೇವ ಜಯಂತಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಶಿವ ಶರಣರು, ವಚನಕಾರರು, ಸಮಾಜದ ಶಾಶ್ವತ ಆಸ್ತಿ, ಸಾಮಾಜಿಕ ಅಸಮಾನತೆ ಹೋಗಲಾಡಿಸುವ ಜೊತೆಗೆ ಜ್ಞಾನ ವಿಸ್ತರಣೆಗೆ ಅವರು ನೀಡಿದ ಕೊಡುಗೆ ಮಹತ್ತರವಾದುದ್ದು ಎಂದು ಸಾಹಿತಿ ಸಂಗಮೇಶ್ವರ ಹೇಳಿದರು.ಜಿಲ್ಲಾಡಳಿತದಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಡಿವಾಳ ಮಾಚಿದೇವ ಜಯಂತಿಯಲ್ಲಿ ಉಪನ್ಯಾಸ ನೀಡಿದರು.
ಕಾಯಕ ನಿಷ್ಠೆ, ದಾಸೋಹದಂತಹ ಮೌಲ್ಯಯುತವಾದ ಕಾಣಿಕೆ ನೀಡಿದ್ದು 12ನೇ ಶತಮಾನದ ಕಾಲದಲ್ಲಿ. ಇಂತಹ ಶರಣರು ಮಹಾಪುರುಷರು ಹಾಕಿಕೊಟ್ಟ ಮಾರ್ಗದರ್ಶನ ಹಾಗೂ ಸಂದೇಶಗಳು ಇಂದಿನ ಸಮಾಜಕ್ಕೆ ಪ್ರೇರಣೆ. ಪ್ರತಿಯೊಬ್ಬರು ಜೀವನದಲ್ಲಿ ಆಳವಡಿಸಿಕೊಂಡು ಮುನ್ನಡೆ ಯಬೇಕು ಎಂದರು.ಮಡಿವಾಳ ಮಾಚಿದೇವರು ಬದುಕಿನ ಸಾತ್ವಿಕತೆ ನೀಡಿ ಸತ್ಯ, ಶುದ್ಧ ಕಾಯಕ ಕೊಟ್ಟಿದ್ದಾರೆ. ಸಮಾಜದಲ್ಲಿ ಜಾತಿ ಮುಖ್ಯವಲ್ಲ, ಜೀವನ ಮುಖ್ಯ ಎಂದು ತೋರಿಸಿ ಕೊಟ್ಟಿದ್ದಾರೆ. ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಕಾಯಕ ಮಹತ್ವದ್ದು, ದೇಶದ ನಾನಾ ಭಾಗಗಳಿಂದ ಕಲ್ಯಾಣಕ್ಕೆ ಬರುವವರಿಗೆ ಪರೀಕ್ಷಿಸಿ ಮಡಿ ಹಾಸಿ ಸ್ವಾಗತಿಸುವ ಕೆಲಸ ಅವರದ್ದಾಗಿತ್ತು. ಮಾಚಿದೇವರ ಪರೀಕ್ಷೆಗೊಳಪಡದ ಹೊರತು ಕಲ್ಯಾಣ ಪುರ ಪ್ರವೇಶದ ಪ್ರಮಾಣ ಪತ್ರ ಹೊರಗಿನಿಂದ ಬರುವವರಿಗೆ ಸಿಗುತ್ತಿರಲಿಲ್ಲ ಎಂದ ಅವರು, ಕಲ್ಯಾಣ ಕ್ರಾಂತಿ ಸಂದರ್ಭದಲ್ಲಿ ಮಾಚಿದೇವರು ರಕ್ಷಣೆ, ವಚನ ಸಾಹಿತ್ಯದ ದಂಡ ನಾಯಕತ್ವದ ಜವಾಬ್ದಾರಿ ಹೊತ್ತು ಬಸವಣ್ಣ, ಅಕ್ಕನಾಗಮ್ಮ, ಕಿನ್ನರಿ ಬೊಮ್ಮಣ್ಣ ಮೊದಲಾದವರೊಂದಿಗೆ ಮಾಚಿದೇವ ಶರಣ ಸಮೂಹದ ಭೀಮ ರಕ್ಷೆಯಾಗಿ ನಿಂತಿತ್ತು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎಚ್.ಡಿ. ತಮ್ಮಯ್ಯ, ತಮ್ಮ ಕಾಯಕದ ಮೂಲಕ ಸಮಾಜದಲ್ಲಿರುವ ಅಧರ್ಮ, ಅಸಂಸ್ಕೃತಿ ಕೊಳಕನ್ನು ಹೋಗಲಾಡಿಸಿದ ಕಾಯಕ ಯೋಗಿ ಮಡಿವಾಳ ಮಾಚಿದೇವರು. ಅವರ ಆದರ್ಶಗಳು ಇಂದಿನ ಸಮಾಜದ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗಿವೆ ಎಂದು ತಿಳಿಸಿದರು.12 ನೇಯ ಶತಮಾನದಲ್ಲಿ ದುರ್ಬಲರ ಶೋಷಣೆ , ಜಾತೀಯತೆ, ಮೇಲು ಕೀಳು, ತಾರತಮ್ಯ, ಅಸ್ಪೃಶ್ಯತೆ, ಮೂಢ ನಂಬಿಕೆಗಳ ಸೃಷ್ಟಿ , ಶಿಕ್ಷಣ ದಲ್ಲಿ ಅವಕಾಶ ವಂಚನೆ ಹೀಗೆ ಅನೇಕ ಸಾಮಾಜಿಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದರು. ಇವುಗಳೆಲ್ಲವುಗಳಿಂದ ಮಹಿಳೆ ಯರು, ವೃತ್ತಿ ನಿರತ ಶ್ರಮಜೀವಿಗಳು , ಬಡವರು, ದೀನ ದಲಿತರು ನಿರಾಶೆ ಹತಾಶೆಗೊಂಡು ಅಸಹನೀಯ ಬದುಕಿಗೆ ತುತ್ತಾಗಿದ್ದರು. ಸರ್ವರಿಗೂ ಸಮಪಾಲು ಸಮಬಾಳು ಒದಗಿಸಲು ಬಸವ ಮಾಚಿದೇವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು. ಶರಣರ ಅಗ್ರ ಗಣ್ಯ ಬಳಗದಲ್ಲಿ ಮಡಿವಾಳ ಮಾಚಿದೇವ ಅತ್ಯಂತ ಪ್ರಕಾಶಮಾನವಾಗಿ ಕಂಡು ಬರುವರು ಎಂದು ಹೇಳಿದರು.
ಹಿಂದುಳಿದ ವರ್ಗಗಳ ಒಕ್ಕೂಟದ ರಾಷ್ಟ್ರೀಯ ಉಪಾಧ್ಯಕ್ಷ ಜೆ.ಕೆ. ಲೋಕೇಶಪ್ಪ ಮಾತನಾಡಿ, ಮಡಿವಾಳ ಮಾಚಿದೇವರ ಜಯಂತಿಯನ್ನು ಸರ್ಕಾರದಿಂದ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲೂ ಆಚರಿಸುವಂತೆ ಮನವಿ ಮಾಡಿದರು.ಹಿಂದುಳಿದ ವರ್ಗಗಳು ಅಭಿವೃದ್ಧಿ ಹೊಂದಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕಾದರೆ ಆ ಸಮುದಾಯದ ಜನ ಶಿಕ್ಷಣವಂತರಾಗಬೇಕು. ಒಳ ಪಂಗಡಗಳ ಆಂತರಿಕ ವೈರುಧ್ಯಗಳನ್ನು ಬದಿಗೊತ್ತಿ ಸಂಘಟಿತರಾಗಬೇಕು ಎಂದು ಸಲಹೆ ಮಾಡಿದರು.
ಚಿಕ್ಕಮಗಳೂರು ತಾಲೂಕು ಉಪ ತಹಸೀಲ್ದಾರ್ ರಾಮ್ ರಾವ್ ದೇಸಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಡಿವಾಳ ಸಂಘದ ಜಿಲ್ಲಾಧ್ಯಕ್ಷ ಇ.ಎಚ್. ಲಕ್ಷ್ಮಣ್, ಕಾರ್ಯದರ್ಶಿ ರಾಮಚಂದ್ರ, ಕರ್ನಾಟಕ ರಾಜ್ಯ ಮಡಿವಾಳ ಸಂಘದ ಅಧ್ಯಕ್ಷ ಸಿ.ಎಂ. ವೇಣು, ಉಪಾಧ್ಯಕ್ಷ ಕೆ.ಎಂ. ಬಸವರಾಜು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ರಮೇಶ್ ಸ್ವಾಗತಿಸಿದರು.2 ಕೆಸಿಕೆಎಂ 1ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಡಿವಾಳ ಮಾಚಿದೇವ ಜಯಂತಿಯನ್ನು ಶಾಸಕ ಎಚ್.ಡಿ. ತಮ್ಮಯ್ಯ ಅವರು ಉದ್ಘಾಟಿಸಿದರು. ಸಾಹಿತಿ ಸಂಗಮೇಶ್ವರ, ರಾಮ್ ರಾವ್ ದೇಸಾಯಿ, ಡಾ. ರಮೇಶ್, ಸಿ.ಎಂ. ವೇಣು ಇದ್ದರು.