ಸಾರಾಂಶ
ಚಳ್ಳಕೆರೆ ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿಯಲ್ಲಿ ಮೂರು ದಿನ ಶಿವರಾತ್ರಿ ಉತ್ಸವ
----ಕನ್ನಡಪ್ರಭವಾರ್ತೆ ಚಳ್ಳಕೆರೆ
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿ.ವಿ ಮೂರು ದಿನ ಶಿವರಾತ್ರಿ ಉತ್ಸವವನ್ನು ಭಕ್ತಿ, ಶ್ರದ್ಧೆಯಿಂದ ವಿವಿಧ ಹಂತದಲ್ಲಿ ಆಚರಿಸಲು ನಿರ್ಧರಿಸಿದ್ದು, ಶಿವಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ಶಿವನ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಸಂಚಾಲಕಿ ಬಿ.ಕೆ.ವಿಮಲಕ್ಕ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವರಾತ್ರಿ ಹಬ್ಬಕ್ಕೆ ತನ್ನದೇಯಾದ ವಿಶೇಷತೆ, ವೈವಿಧ್ಯತೆ ಇದೆ. ದೇಶದ ಶಿವಭಕ್ತರು ಮಾತ್ರ ಶಿವನನ್ನು ಆರಾಧಿಸುತ್ತಿದ್ದರು. ಆದರೆ, ಈಗ ಶಿವರಾತ್ರಿ ಹಬ್ಬ ಅಂತರಾಷ್ಟ್ರೀಯ ಮಾನ್ಯತೆ ಪಡೆದಿದ್ದು, ಅಮೇರಿಕ, ದಕ್ಷಿಣ ಅಮೇರಿಕ, ಇರಾನ್, ಆಸ್ಟ್ರೀಯಾ, ಈಜಿಪ್ತ್, ಫ್ರಾನ್ಸ್, ಚೀನಾ, ಗ್ರೀಕ್, ಯುರೋಪ್ ನಂತರ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಶಿವನ ಆರಾಧನೆ ನಡೆಯುತ್ತಿದೆ.
ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಆವರಣದಲ್ಲಿ ಮಂಗಳವಾರ ಸಂಜೆ ೬ಕ್ಕೆ ಶಿವರಾತ್ರಿ ಮಹೋತ್ಸವವನ್ನು ರೈತ ಸಶಕ್ತಿಕರಣ ಉತ್ಸವವಾಗಿ ಆಚರಣೆ ಮಾಡುತ್ತಿದ್ದು, ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ಕಾರ್ಯಕ್ರಮ ಉದ್ಘಾಟಿಸುವರು, ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ, ತಹಶೀಲ್ದಾರ್ ರೇಹಾನ್‌ಪಾಷ, ತೋಟಗಾರಿಕೆ ಅಧಿಕಾರಿ ವಿರೂಪಾಕ್ಷಪ್ಪ, ಸಹಾಯಕ ಕೃಷಿ ಅಧಿಕಾರಿ ಜೆ.ಅಶೋಕ್, ಪೌರಾಯುಕ್ತ ಎಚ್.ಜಿ.ಜಗರೆಡ್ಡಿ, ರೇಷ್ಮೆ ವಿಸ್ತರಣಾಧಿಕಾರಿ ಉಮಾಪತಿ ಕಾರ್ಯಕ್ರಮದಲ್ಲಿ ಭಾಗವಹಿಸುವರು.ಪ್ರತಿವರ್ಷದಂತೆ ಈ ವರ್ಷವೂ ಸಹ ಪ್ರದಕ್ಷಣೆಯ ಲಿಂಗದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪ್ರತಿದಿನ ಸಂಜೆ೬ ರಿಂದ ೧೦ತನಕ ಭಕ್ತಾಧಿಗಳು ಲಿಂಗದರ್ಶನಕ್ಕೆ ಅವಕಾಶವಿದೆ. ಜ್ಯೋರ್ಲಿಂಗದರ್ಶನ, ಸ್ವಪರಿವರ್ತನೆಯ ಮಂಟಪ, ಪರಮಾತ್ಮನು ಸರ್ವವ್ಯಾಪಿಯೇ, ಆಧ್ಯಾತ್ಮಿಕ ಜಾದು ಪ್ರದರ್ಶನ, ಶಿವನೊಂದಿಗೆ ಸೆಲ್ಫಿ ಪಾಯಿಂಟ್ ವ್ಯವಸ್ಥೆ ಕಲ್ಪಿಸಿದೆ.
೨೬ರಂದು ಬುಧವಾರ ಸಂಜೆ ೬ಕ್ಕೆ ಆಧ್ಯಾತ್ಮಿಕ ಸಂಸ್ಕೃತಿ ಉತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿವಿಧ ಶಾಲಾ ಮಕ್ಕಳಿಂದ ದೇವರ ನಾಮಸ್ಮರಣೆ, ಗೀತೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ೨೭ಗುರುವಾರ ಈಶ್ವರಿ ಅಭಿನಂದನಾ ಉತ್ಸವ ಹಾಗೂ ಮುಕ್ತಿ, ಜೀವನ್ಮುಕ್ತಿ ಪ್ರಾಪ್ತಿ ವಿಷಯ ಕುರಿತು ವಿಶೇಷ ಕಾರ್ಯಗಾರ ಹಾಗೂ ವಿವಿಧ ದೇವಸ್ಥಾನಗಳ ಪುರೋಹಿತರು, ಪೂಜಾರಿಗಳು, ಜೋಯಿಷರಿಗೆ ಈಶ್ವರಿಯ ಸನ್ಮಾನ, ಭಾರತೀಯ ಪರಂಪರೆಯನ್ನು ರಕ್ಷಿಸುತ್ತಿರುವ ಭಕ್ತಪರಂಪರೆಗೆ ಗೌರವ ಅರ್ಪಣೆ ಕಾರ್ಯಕ್ರಮವಿರಲಿದೆ. ಇಒ ಎಚ್.ಶಶಿಧರ, ತಳಕು ವೃತ್ತನಿರೀಕ್ಷೆ ಹನುಮಂತಪ್ಪ ಶಿರೇಹಳ್ಳಿ, ಎಸ್‌ಬಿಐ ಮುಖ್ಯ ವ್ಯವಸ್ಥಾಪಕ ಎಂ.ನರೇಶ್‌ರೆಡ್ಡಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸುವರು.ಪತ್ರಿಕಾಗೋಷ್ಠಿಯಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಮುಖಂಡರಾದ ಎಂ.ಎಸ್.ರಾಧ, ಓಂಕಾರಮ್ಮ, ಲಲಿತಮ್ಮ, ಚೂಡಾಮಣಿ ಮುಂತಾದವರು ಇದ್ದರು.
-----ಪೋಟೋ: ಚಳ್ಳಕೆರೆ ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಚಾಲಕಿ ವಿಮಲಕ್ಕ ಮಾಹಿತಿ ನೀಡಿದರು.
೨೩ಸಿಎಲ್‌ಕೆ೧