ಸಾರಾಂಶ
ಹೊಳೆನರಸೀಪುರ ಪಟ್ಟಣದ ಶ್ರೀ ನೀಲಕಂಠೇಶ್ವರಸ್ವಾಮಿ, ಮೈಲಾರಲಿಂಗೇಶ್ವರಸ್ವಾಮಿ, ಓಂಕಾರೇಶ್ವರಸ್ವಾಮಿ, ಶ್ರೀ ಲಕ್ಷ್ಮಣೇಶ್ವರಸ್ವಾಮಿ, ಏಕಾಂತ ರಾಮೇಶ್ವರಸ್ವಾಮಿ ಹಾಗೂ ತಾಲೂಕಿನ ವಿವಿಧ ಈಶ್ವರ ದೇವಾಲಯಗಳಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಬುಧವಾರ ವಿಶೇಷ ಪೂಜಾ ಕೈಂಕರ್ಯ ವೈಭವದಿಂದ ನಡೆಯಿತು. ಮೈಲಾರಲಿಂಗೇಶ್ವರ, ಎಳ್ಳೇಶಪುರದ ಎಳ್ಳುಲಿಂಗೇಶ್ವರ, ಬಾಗಿವಾಳುವಿನ ಶ್ರೀ ವೀರಭದ್ರೇಶ್ವರ ಹಾಗೂ ಶ್ರೀ ರಾಮೇಶ್ವರ, ಹರದನಹಳ್ಳಿಯ ಈಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಪಟ್ಟಣದ ಶ್ರೀ ನೀಲಕಂಠೇಶ್ವರಸ್ವಾಮಿ, ಮೈಲಾರಲಿಂಗೇಶ್ವರಸ್ವಾಮಿ, ಓಂಕಾರೇಶ್ವರಸ್ವಾಮಿ, ಶ್ರೀ ಲಕ್ಷ್ಮಣೇಶ್ವರಸ್ವಾಮಿ, ಏಕಾಂತ ರಾಮೇಶ್ವರಸ್ವಾಮಿ ಹಾಗೂ ತಾಲೂಕಿನ ವಿವಿಧ ಈಶ್ವರ ದೇವಾಲಯಗಳಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಬುಧವಾರ ವಿಶೇಷ ಪೂಜಾ ಕೈಂಕರ್ಯ ವೈಭವದಿಂದ ನಡೆಯಿತು. ದೇವಾಲಯಗಳಲ್ಲಿ ಮುಂಜಾನೆ ಬ್ರಾಹ್ಮಿ ಮಹೂರ್ತದಲ್ಲಿ ಹಾಗೂ ರಾತ್ರಿ ನಾಲ್ಕೂ ಯಾಮಗಳಲ್ಲಿ ಪಂಚಾಮೃತಾಭಿಷೇಕ, ರುದ್ರಾಭಿಷೇಕ, ಅಲಂಕಾರ ಹಾಗೂ ವಿಶೇಷ ಪೂಜಾ ಕಾರ್ಯಗಳನ್ನು ನೆರವೇರಿಸಿ, ಸಹಸ್ರ ಭಿಲ್ವಾರ್ಚನೆ, ಮಹಾಮಂಗಳಾರತಿ ನಂತರ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.
ದೇವಾಲಯಗಳ ಹಿರಿಯ ಅರ್ಚಕರಾದ ಸುಕುಮಾರ್, ರಾಮಚಂದ್ರ ಭಟ್ಟರು ಹಾಗೂ ಸುಬ್ರಮಣ್ಯ ಮತ್ತು ಆಗಮಿಕರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ತಾಲೂಕಿನ ಗುಂಜೇವು ಗ್ರಾಮದ ಮೈಲಾರಲಿಂಗೇಶ್ವರ, ಎಳ್ಳೇಶಪುರದ ಎಳ್ಳುಲಿಂಗೇಶ್ವರ, ಬಾಗಿವಾಳುವಿನ ಶ್ರೀ ವೀರಭದ್ರೇಶ್ವರ ಹಾಗೂ ಶ್ರೀ ರಾಮೇಶ್ವರ, ಹರದನಹಳ್ಳಿಯ ಈಶ್ವರ ದೇವಾಲಯ, ಉಣ್ಣೇನಹಳ್ಳಿ ಕೊಪ್ಪಲಿನ ಪ್ರಸನ್ನೇಶ್ವರ, ಬಿಚೇನಹಳ್ಳಿಯ ಚಂದ್ರಮೌಳೇಶ್ವರ, ಭೈರವೇಶ್ವರ ಹಾಗೂ ಬಸವೇಶ್ವರ, ಹಳ್ಳಿಮೈಸೂರಿನ ಬಸವೇಶ್ವರ, ನಾಗಲಾಪುರದ ಅಂಕನಾಥೇಶ್ವರ, ಐಚನಹಳ್ಳಿಯ ಬಸವೇಶ್ವರ, ಹಿರೆಬೆಳಗುಲಿಯ ಬಸವೇಶ್ವರ ಹಾಗೂ ಮಲ್ಲೇಶ್ವರ ದೇವಾಲಯ, ಎಸ್.ಅಂಕನಹಳ್ಳಿ, ಮಲ್ಲಪ್ಪನಹಳ್ಳಿ, ಹಾವಿನಮಾರನಹಳ್ಳಿ ಹಾಗೂ ಜವರೀಕೊಪ್ಪಲಿನ ಬೀರಲಿಂಗೇಶ್ವರ ದೇವಾಲಯ ಮತ್ತು ಬಂಡಿಶೆಟ್ಟಿಹಳ್ಳಿಯ ಶ್ರೀ ಶಿವಶರಣ ಹರಳಯ್ಯನವರ ಶ್ರೀ ಕ್ಷೇತ್ರ ಕೊಡುಗಲ್ಲು ಮಠದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.ದೇವಾಲಯಗಳನ್ನು ತಳಿರು-ತೋರಣಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು ಹಾಗೂ ಸುಮಂಗಲಿಯರು ರಂಗೋಲಿಯನ್ನು ಬಿಡಿಸಿ ದೇವಾಲಯಗಳಿಗೆ ವಿಶೇಷ ಮೆರುಗನ್ನು ನೀಡಿದರು.