ಶಿವ ನಿಷ್ಕಲ್ಮಶ ಮನಸ್ಸುಗಳ ಪ್ರತೀಕ: ಹೊನ್ಕಲ್

| Published : Mar 12 2024, 02:09 AM IST

ಸಾರಾಂಶ

ಶಹಾಪುರದ ಲಕ್ಷ್ಮಿ ನಗರದ ಆಂಜನೇಯ ದೇವಾಲಯದ ಆವರಣದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಶಹಾಪುರ

ಶಿವ ಪ್ರಾಮಾಣಿಕ ಮತ್ತು ನಿಷ್ಕಲ್ಮಶ ಮನಸ್ಸುಗಳ ಪ್ರತೀಕ. ಶಿವ ಭಕ್ತರಿಂದ ಬಯಸುವುದು ಪ್ರಾಮಾಣಿಕ ಮತ್ತು ನಿಷ್ಕಲ್ಮಶ ಭಕ್ತಿ ಮಾತ್ರ. ಶಿವನಾಮ ಸ್ಮರಣೆಯಿಂದ ನೆಮ್ಮದಿ ಬದುಕು ಸಾಧ್ಯ ಎಂದು ಹಿರಿಯ ಸಾಹಿತಿ ಸಿದ್ಧರಾಮ ಹೊನ್ಕಲ್ ತಿಳಿಸಿದರು.

ಇಲ್ಲಿನ ಲಕ್ಷ್ಮೀ ನಗರದ ಆಂಜನೇಯ ದೇವಸ್ಥಾನ ಆವರಣದಲ್ಲಿ ಶಿವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಶಿವ ಸ್ಮರಣೆ ಸಂಗೀತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕತ್ತಲೆಂಬ ಅಜ್ಞಾನ ತೊರೆದು ಬೆಳಕಿನ ಸುಜ್ಞಾನದಡೆಗೆ ನಡೆಯ ಮಾರ್ಗ ಕಂಡುಕೊಳ್ಳುವದೇ ಶಿವರಾತ್ರಿ. ತೋರಿಕೆ ಮತ್ತು ಆಡಂಬರದ ಪೂಜೆಯನ್ನು ಯಾವುದೇ ದೇವರು ಬಯಸುವುದಿಲ್ಲ. ಆಡಂಬರಗಳಿಂದ ಮುಕ್ತರಾಗಿ ಸರಳತೆಯಿಂದ ಪರಶಿವನ ಧ್ಯಾನಿಸಿದರೆ ಸಾಕು. ಕಾಯಕ ದಾಸೋಹಿ ಪರಿಕಲ್ಪನೆ ನೀಡಿ ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸಿ ಸಮಾನತೆ ಭ್ರಾತೃತ್ವ ಭಾವನೆ ನೀಡಿ ಇವನಾರವ ಎನ್ನದೆ ಎಲ್ಲರೂ ನಮ್ಮವರೇ ಎಂದು ಸಾರಿದ ಬಸವಣ್ಣನ ಭಕ್ತಿಯೂ ಅದೇ ಸರಳತೆಯಿಂದ ಕೂಡಿತ್ತು. ಆ ಕಾರಣಕ್ಕೆ ಆತನನ್ನು ಭಕ್ತಿ ಭಂಡಾರಿ ಬಸವಣ್ಣ ಎಂದು ಸಂಬೋಧಿಸಲಾಯಿತು ಎಂದರು.

ಪ್ರಸ್ತುತ ಅಣ್ಣ ಬಸವಣ್ಣನವರನ್ನು ಈ ನಾಡಿನ ಸಾಂಸ್ಕೃತಿಕ ನಾಯಕವೆಂದು ಘೋಷಿಸಿರುವುದು ಸಂತಸ ಸಂಗತಿಯಾಗಿದೆ. ಸರ್ವರ ಏಳಿಗೆ ಬಯಸಿದ ಶರಣ ಸಂಕುಲದಂತೆ ನಾವೆಲ್ಲ ಒಂದಾಗಿ ನಡೆಯಬೇಕಿದೆ. ಲಕ್ಷ್ಮೀ ನಗರದಲ್ಲಿ ಸರ್ವರೂ ಜನಾಂಗದವರು ಕೂಡಿ ಸಾಹಿತ್ಯ, ಸಂಗೀತ, ಯೋಗ, ಸಾಮಾಜಿಕ ಪ್ರಮುಖರನ್ನು ಕರೆಯಿಸಿ ಉತ್ತಮ ಕಾರ್ಯಕ್ರಮ ಏರ್ಪಡಿಸಿದ್ದ ಸಂಘಟಕರಿಗೆ ಅನಂತ ಧನ್ಯವಾದಗಳು ಎಂದು ಪ್ರೇರಣಾತ್ಮಕ ನುಡಿಗಳನ್ನಾಡಿದರು.

ಪತ್ರಕರ್ತ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದನೂರ ಮತ್ತು ಯೋಗ ಗುರುಗಳಾದ ನರಸಿಂಹ ವೈದ್ಯ ಮಾತನಾಡಿ, ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಕ್ಕಳಿಗೆ ಸಂಸ್ಕಾರ ನೀಡುವ ಜತೆಗೆ ಮಾನವೀಯ ಮೌಲ್ಯಗಳನ್ನು ಬಿತ್ತುವಲ್ಲಿ ಸಹಕಾರವಾಗಲಿದೆ ಎಂದರು.

ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ, ಬಡವಾಣೆಯ ಹಿರಿಯ ಕೆಂಚಪ್ಪ ನಗನೂರ, ಜೇವರ್ಗಿ ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಮಾತನಾಡಿದರು.

ಪ್ರಮುಖರಾದ ಶಂಕರಗೌಡ, ಸೋಮನಗೌಡ, ಸಂಗೀತ ಶಿಕ್ಷಕ ಚಂದ್ರು ಗೋಗಿ, ಗುರು ಶೆಟ್ಟಿ, ಕಾವೇರಿ ಪತ್ತಾರ ಇತರರಿದ್ದರು. ಶಿವ ತಾಂಡವ ನೃತ್ಯವನ್ನು ಬಾಲಕಿ ಸೃಷ್ಟಿ ಹೂಗಾರ ಪ್ರದರ್ಶಿಸಿದರು. ಗಾಯಕರಾದ ಚಂದ್ರಕಲಾ ಜಮಖಂಡಿ, ಮಲ್ಲಯ್ಯ ಸ್ವಾಮಿ, ಗಣೇಶ ಪತ್ತಾರ, ಗಣೇಶ ಪೋಲಿಸ್, ಸಂಗಿತ ಶಿಕ್ಷಕಿ ಕಾವೇರಿ, ಲಿಂಗಣ್ಣಗೌಡ, ಅಶೋಕ ಇಟಗಿ ಇತರರು ಶಿವನ ಸ್ತುತಿ ಮತ್ತು ಶಿವನ ಸ್ಮರಣಾರ್ಥ ಹಾಡುಗಳನ್ನು ಹಾಡುವ ಮೂಲಕ ಬೆಳಗಿನಜಾವದವರೆಗೂ ಜಾಗರಣೆ ಮಾಡಿದರು.

ಕಾರ್ಯಕ್ರಮ ಸಂಘಟಕ ಸಂಗನಗೌಡ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಕುಮಾರ ಕರದಳ್ಳಿ ಸ್ವಾಗತಿಸಿದರು. ಲಕ್ಷ್ಮಣ ಲಾಳಸಗೇರಿ ನಿರೂಪಿಸಿದರು. ಚಂದ್ರು ಜೀನಕೇರಿ ವಂದಿಸಿದರು.