ದೇಶಪ್ರೇಮ, ಸಾಹಸಕ್ಕೆ ಮತ್ತೊಂದು ಹೆಸರೇ ಶಿವಾಜಿ

| Published : Feb 20 2025, 12:50 AM IST

ಸಾರಾಂಶ

ಚಾಮರಾಜನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಛತ್ರಪತಿ ಶಿವಾಜಿ ಜಯಂತಿಯನ್ನು ಬುಧವಾರ ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಛತ್ರಪತಿ ಶಿವಾಜಿ ಜಯಂತಿ ಆಚರಣೆ ಬುಧವಾರ ನಗರದಲ್ಲಿ ಅರ್ಥಪೂರ್ಣವಾಗಿ ನಡೆಯಿತು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ ಉದ್ಘಾಟಿಸಿ ಶಿವಾಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ನಂತರ ಮಾತನಾಡಿದ ಮಹಮ್ಮದ್ ಅಸ್ಗರ್ ಮುನ್ನಾ, ಶಿವಾಜಿ ದೇಶ ಕಂಡ ಮಹಾನ್ ಹೋರಾಟಗಾರರು. ಶಿವಾಜಿ ಅವರ ಕೊಡುಗೆ ಅಪಾರವಾಗಿದೆ. ಶೌರ್ಯದಿಂದ ಸೇನೆಯನ್ನು ಮುನ್ನಡೆಸಿ ದೇಶಕ್ಕಾಗಿ ಹೋರಾಟ ನಡೆಸಿದ್ದಾರೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಮಾತನಾಡಿ, ದೇಶಪ್ರೇಮ, ಸಾಹಸಕ್ಕೆ ಮತ್ತೊಂದು ಹೆಸರೇ ಶಿವಾಜಿ. ಶಿವಾಜಿ ೧೫ನೇ ವಯಸ್ಸಿನಲ್ಲೇ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಬ್ರಿಟಿಷರು ಆಳ್ವಿಕೆ ನಡೆಸುತ್ತಿದ್ದ ಸಂಧರ್ಭದಲ್ಲಿ ಶಿವಾಜಿಯು ತಮ್ಮ ಕಡಿಮೆ ಸೈನ್ಯದಿಂದ ವೀರಸೇನೆ ಕಟ್ಟಿದರು. ಶಿವಾಜಿಯ ಯುದ್ಧ ತಂತ್ರಗಾರಿಕೆ, ಸ್ವಾಭಿಮಾನ, ದೇಶಭಕ್ತಿ, ಕೌಶಲ್ಯದಿಂದ ಹೆಸರಾಗಿದ್ದಾರೆ. ಅವರ ಸಾಹಸ ಎಲ್ಲರಿಗೂ ಪ್ರೇರಣೆಯಾಗಿದೆ. ಶಿವಾಜಿ ಸಾಮ್ರಾಜ್ಯ ಕಟ್ಟಲು ಅವರ ತಾಯಿ ಪ್ರೇರಣೆಯಾಗಿದ್ದರು. ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ದೇಶಭಕ್ತಿ, ಸ್ವಾಭಿಮಾನ, ರಾಷ್ಟ್ರಪ್ರೇಮವನ್ನು ಬೆಳಸಬೇಕಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉದಯ್ ಕುಮಾರ್, ಸಮುದಾಯ ಮುಖಂಡರು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.