ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಚಿಕ್ಕ ವಯಸ್ಸಿನಲ್ಲಿಯೇ ರಾಜ್ಯಬಾರ ವಹಿಸಿಕೊಂಡು ವೀರ, ಶೂರ, ತ್ಯಾಗಿಯಾಗಿ ವೈರಿಯ ಎದುರು ಶರಣಾಗದ ಸ್ವಾಭಿಮಾನಿಯಾದವರು ಛತ್ರಪತಿ ಶಿವಾಜಿ ಮಹಾರಾಜ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.ನವನಗರದ ಡಾ.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಾಲ್ಯದಲ್ಲಿಯೇ ತಾಯಿ ಜೀಜಾಬಾಯಿ ಮಹಾಭಾರತ, ರಾಮಾಯಣಗಳಂತಹ ನೈತಿಕ ಶೌರ್ಯದ ಕಥೆಗಳು, ದಾದಾಜೀ ಕೊಂಡದೇವ ಗುರುವಿನಿಂದ ಕುದುರೆ ಸವಾರಿ ಸೇರಿದಂತೆ ರಣನೀತಿ ಕಲಿತ ಶಿವಾಜಿ, ಆಧ್ಯಾತ್ಮಿಕವಾಗಿ ಸಂತ ರಾಮದಾಸರನ್ನು ಗುರುವಾಗಿ ಮಾಡಿಕೊಂಡಿದ್ದರು ಎಂದರು.
ಆಳ್ವಿಕೆಯ ಪ್ರಥಮದಲ್ಲಿಯೇ ಸ್ಥಳೀಯ ಮಾವಳಿ ಸೈನ್ಯ ಕಟ್ಟಿಕೊಂಡು ತಮಗೆ ಎದುರಾದ ಆದಿಲಶಾಯಿ, ಕುತುಬಶಾಯಿ, ಡಚ್ಚರು ಮತ್ತು ಪೋರ್ಚುಗೀಸ್‌ರನ್ನು ಏಕಕಾಲಕ್ಕೆ ಎದುರಿಸಿ ವಿಜಯ ಸಾಧಿಸಿದರು. ಆದಿಲಶಾಯಿಗೆ ಶರಣಾಗುವ ಪ್ರಸಂಗ ಬಂದಾಗ ತನ್ನ ಸ್ವಾಭಿಮಾನದಿಂದ ಶರಣಾಗದೇ ಮಣಿಸಿದರು. ಪಾಲಕರಾದವರು, ತಾಯಂದಿರು ತಮ್ಮ ಮಕ್ಕಳಿಗೆ ಜೀಜಾಬಾಯಿಯಂತೆ ವೀರ ಶೂರರ ಕಥೆಗಳನ್ನು ಹೇಳಿ ಶಿಕ್ಷಣವಂತರನ್ನಾಗಿ ಮಾಡಬೇಕೆಂದರು.ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಶಾಸಕ ಎಚ್.ವೈ.ಮೇಟಿ ಮಾತನಾಡಿ, ಶಿವಾಜಿ ಚಿಕ್ಕವನಾಗಿದ್ದಾಗ ಸ್ವಪ್ನದಲ್ಲಿ ಹೆದರಿ ಕೊಂಡಿದ್ದರ ಬಗ್ಗೆ ತಾಯಿಯ ಎದುರು ಹೇಳಿಕೊಂಡಿದ್ದರು, ತಾನಿಲ್ಲದ ಸಮಯದಲ್ಲಿ ಸೇವಕಿಯೊಬ್ಬಳು ಒಂದು ದಿನ ಹಾಲು ಕುಡಿಸಿದ ಪರಿಣಾಮ ನೀನು ಹೆದರಿದ್ದಿ. ಆದರೆ ನನ್ನ ಹಾಲು ಕುಡಿದ ನೀನು ಎಂದು ಭಯ ಪಡಬೇಡ ಎಂದು ಹೇಳಿದನ್ನು ಕೇಳಿದ್ದೇವೆ. ವೀರ ಶೂರನಾದವರಿಗೆ ಇಂತಹ ತಾಯಿ ಮಾದರಿಯಾಗಿದ್ದಾರೆ ಎಂದರು.
ನಗರಸಭೆ ಅಧ್ಯಕ್ಷೆ ಸವಿತಾ ಲೇಂಕನ್ನವರ ಮಾತನಾಡಿ, ಜೀಜಾಬಾಯಿ ಗರ್ಭಾವತಿಯಾದ ಸಂದರ್ಭದಲ್ಲಿ ಅನೇಕ ವೀರ ಶೂರರ ಚರಿತ್ರೆ ಕೇಳುತ್ತಾ ಆಧ್ಯಾತ್ಮಿಕ ಚಿಂತನೆ ಮಾಡಿದ್ದರ ಫಲವಾಗಿ ಶಿವಾಜಿ ಹುಟ್ಟಿನಿಂದಲೇ ಶೂರ, ಧೀರ ಹಾಗೂ ಮಾನವೀಯತೆ ಮೌಲ್ಯವುಳ್ಳವನಾಗಿದ್ದನು ಎಂದರು.ಉಪನ್ಯಾಸಕರಾಗಿ ಆಗಮಿಸಿದ್ದ ಶಿರೂರ ಸಿದ್ದೇಶ್ವರ ಪ್ರೌಢಶಾಲೆಯ ಸಹ ಶಿಕ್ಷಕ ಸಂಜಯ ನಡುವಿನಮನಿ, ಶಿವಾಜಿ ಮಹಾರಾಜರ ಜೀವನ ಚರಿತ್ರೆ ಹಾಗೂ ರಣರೋಚಕ ಪ್ರಸಂಗ ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ಗ್ರೇಡ್-2 ತಹಸೀಲ್ದಾರ್ ಬಿರಾದಾರ ಸೇರಿ ಸಮುದಾಯ ಮುಖಂಡರಾದ ಡಾ.ಶೇಖರ ಮಾನೆ, ಶ್ರೀಕಾಂತ ಪಾಟೀಲ, ಆರ್.ಆರ್. ಸೂರ್ಯವಂಶಿ, ವಾಸುದೇವ ಜಾಧವ, ಕಲ್ಪನಾ ಸಾವಂತ ಹಾಗೂ ಇತರರಿದ್ದರು. ಕಾರ್ಯಕ್ರಮದ ಪೂರ್ವದಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು.