ಸಾರಾಂಶ
ಕನ್ನಡಪ್ರಭ ವಾರ್ತೆ, ಬಸವಕಲ್ಯಾಣ
ಛತ್ರಪತಿ ಶಿವಾಜಿ ಮಹಾರಾಜರದ್ದು ನ್ಯಾಯದ ಹೋರಾಟವಾಗಿತ್ತು. ಯಾವುದೇ ಜಾತಿ, ಧರ್ಮದ ವಿರುದ್ಧ ಬೇಕೆಂತಲೇ ಅವರು ಜಗಳ ತೆಗೆಯಲಿಲ್ಲ ಎಂದು ಸಂಸದ ಸಾಗರ್ ಖಂಡ್ರೆ ಹೇಳಿದ್ದರು.ತಾಲೂಕಿನ ಉಜಳಂಬ ಗ್ರಾಮದಲ್ಲಿ ನಡೆದ ಶಿವಾಜಿ ಮಹಾರಾಜರ ಅಶ್ವಾರೂಢ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿವಾಜಿಯ ಧೈರ್ಯ ಮೆಚ್ಚುವಂಥದ್ದು. ಏನಾಗುತ್ತದೋ ಎಂಬ ಹತಾಶೆಯ ಭಾವನೆ ಇರಲಿಲ್ಲವಾದ್ದರಿಂದ ಯಶಸ್ಸು ಕಂಡರು. ಮುಸ್ಲಿಂ ಅರಸರ ಅನ್ಯಾಯ, ದಬ್ಬಾಳಿಕೆಯ ವಿರುದ್ಧ ಯುದ್ಧ ಮಾಡಿದರು.
ಕೆಲ ತಿಂಗಳುಗಳ ಹಿಂದೆ ಆಯೋಜಿಸಿದ್ದ ಇಲ್ಲಿನ ಪುತ್ಥಳಿ ಅನಾವರಣ ಕಟ್ಟೆಯ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರು 50 ಲಕ್ಷ ನೀಡುವ ಭರವಸೆ ನೀಡಿದ್ದರು. ಈಗ ಮತ್ತೆ 1 ಲಕ್ಷ ಕೊಟ್ಟಿದಾರೆ. ಶಿವಾಜಿ ವೃತ್ತದಲ್ಲಿ ಹೈಮಾಸ್ಟ್ ದೀಪ ಅಳವಡಿಸುವ ಕೆಲಸ ಪೂರ್ಣಗೊಳಿಸಿದ್ದಾರೆ. ನಾನು ಸಹ ಎಲ್ಲ ರೀತಿಯಿಂದಲೂ ಸಹಕರಿಸುತ್ತೇನೆ ಎಂದರು.ಶಾಸಕ ಶರಣು ಸಲಗರ ಮಾತನಾಡಿ, ಶಿವಾಜಿ ಮಹಾರಾಜರು ಹಿಂದೂ ಧರ್ಮ ರಕ್ಷಕರು. ಅವರಿರದಿದ್ದರೆ ಕಾಶಿ ಮಥುರಾ ಇರುತ್ತಿರಲಿಲ್ಲ ಎಂದು ಅಂದಿನ ಅವರ ಆಸ್ಥಾನದ ಕವಿ ಭೂಷಣರು ಬರೆದಿಟ್ಟಿದ್ದಾರೆ. ಯುವಕರು ಅಂಥ ಮಹಾಪುರುಷರ ಆದರ್ಶ ಪಾಲಿಸಬೇಕು. ದುಶ್ಚಟ ಮತ್ತು ದುರ್ಗು ಣಗಳನ್ನು ಕಲಿಯಬಾರದು. ಇಂಥದನ್ನು ಧಿಕ್ಕರಿಸುವುದಾಗಿ ಇಂದಿನಿಂದಲೇ ಪಣ ತೊಟ್ಟರೆ ಗ್ರಾಮಗಳು ಮಾದರಿ ಗ್ರಾಮ ಆಗಬಲ್ಲದು ಎಂದರು.
ಮಹಾರಾಷ್ಟ್ರದ ಉಮರ್ಗಾದ ಮುಖಂಡ ಕಿರಣ ಗಾಯಕವಾಡ ಮಾತನಾಡಿ, ಶಿವಾಜಿ ಮಹಾರಾಜರು ಸುಖ ಶಾಂತಿ ಸ್ವರಾಜ್ಯದ ಕನಸು ಕಂಡು ಅದನ್ನು ನನಸು ಮಾಡಿದರು. ಅವರನ್ನು ರೈತರ ರಾಜ ಎನ್ನಲಾಗುತ್ತದೆ ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ ಎಂದು ಹೇಳಿದರು.ಅಚಲಬೇಟ್ ಸಂಸ್ಥಾನದ ಶ್ರೀಹರಿ ಲವಟೆ ಗುರೂಜಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ, ಸಿಪಿಐ ಕೃಷ್ಣಕುಮಾರ ಪಾಟೀಲ, ಜಿ.ಪಂ ಮಾಜಿ ಅಧ್ಯಕ್ಷ ಅನಿಲ ಭೂಸಾರೆ, ಗ್ರಾ.ಪಂ ಅಧ್ಯಕ್ಷೆ ಪಾರ್ವತಿ ಡೋಲೆ, ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ನೀಲಕಂಠ ರಾಠೋಡ, ಪ್ರಮುಖರಾದ ಶಶಿಕಾಂತ ನಿತೀನ್ ಜಾಧವ, ಮಹೇಶ ಪಾಟೀಲ, ಕಾಳಿದಾಸ ಜಾಧವ, ಚಂದ್ರಕಾಂತ ಜಾಧವ, ಬಾಬುರಾವ್ ವಿ.ಟಿ.ಶಿಂಧೆ, ಸೂರಜ್ ಪಾಟೀಲ, ವೆಂಕಟ ಮಾನೆ, ಸಂತೋಷ ಪಾಟೀಲ, ಜಗನ್ನಾಥ ಡೋಲೆ, ಕಿಶೋರ ಪಾಟೀಲ, ಬಲವಾನ ಭೋಸೆ, ವಿಷ್ಣು ಪಾಟೀಲ ಉಪಸ್ಥಿತರಿದ್ದರು.