ಸಾರಾಂಶ
ಧಾರವಾಡ: ಛತ್ರಪತಿ ಶಿವಾಜಿ ಮಹಾರಾಜರು ಎಲ್ಲ ಭಾರತೀಯರಿಗೂ ಆದರ್ಶ ಮತ್ತು ಪ್ರೇರಣೆಯಾದವರು. ಅವರಲ್ಲಿನ ರಾಷ್ಟ್ರ ಪ್ರೇಮ, ದೇಶ ಭಕ್ತಿ ಮತ್ತು ಸ್ವಾಭಿಮಾನ, ಧೈರ್ಯದ ಗುಣ ನಮ್ಮ ಮಕ್ಕಳಲ್ಲಿಯೂ ಅಳವಡಿಸಿ, ಬೆಳೆಸಬೇಕೆಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹೇಳಿದರು.
ಮರಾಠ ವಿದ್ಯಾಪ್ರಸಾರಕ ಮಂಡಳದ ಭಾರತ ಪ್ರೌಢಶಾಲೆ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉದ್ಘಾಟಿಸಿ ಮಾತನಾಡಿ, ಶಿವಾಜಿ ಮಹಾರಾಜರು ಕನ್ನಡ ಮತ್ತು ಕರ್ನಾಟಕದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಅವರು ಯುದ್ಧ ಸಂದರ್ಭದಲ್ಲಿ ಜಿಲ್ಲೆಯ ಯಾದವಾಡ ಗ್ರಾಮದವರೆಗೆ ಬಂದಿರುವ ಬಗ್ಗೆ ಇತಿಹಾಸದ ಪುರಾವೆಗಳಿವೆ. ಇಡೀ ಭಾರತದಲ್ಲಿ ಶಿವಾಜಿ ಮಹಾರಾಜರ ಮೊದಲ ಕಲ್ಲಿನ ಪ್ರತಿಮೆ ಜಿಲ್ಲೆಯ ಯಾದವಾಡದಲ್ಲಿ ಸಂಶೋಧಿಸಲಾಗಿದೆ ಎಂದರು.ಶಿವಾಜಿ ಮಹಾರಾಜರ ಜೀವನ ಚರಿತ್ರೆ ಅವಲೋಕಿಸಿದಾಗ ಕರ್ನಾಟಕದೊಂದಿಗೆ ತಾಯಿ ಮಕ್ಕಳ ಸಂಬಂಧದಂತೆ ಕಾಣುತ್ತದೆ. ಕರ್ನಾಟಕದ ಮೇಲೆ ಶಿವಾಜಿ ಮಹಾರಾಜರ ಪ್ರಭಾವ ಎದ್ದು ಕಾಣುತ್ತದೆ ಎಂದರು.
ಮಹಾನಗರ ಪಾಲಿಕೆಯ ಸದಸ್ಯ ಶಂಕರ ಶಳಕೆ ಮಾತನಾಡಿ, ಭಾರತದ ರಕ್ಷಣೆಯಾಗಿ, ಹಿಂದೂ ಧರ್ಮದ ಏಕತೆಗಾಗಿ ಶಿವಾಜಿ ಮಹಾರಾಜರು ಮುಖ್ಯ ಕಾರಣರಾಗಿದ್ದಾರೆ. ನಾಡಿಗೆ ಮತ್ತು ರಾಷ್ಟ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.ಪಾಲಿಕೆ ಇನ್ನೋರ್ವ ಸದಸ್ಯ ಡಾ.ಮಯೂರ ಮೋರೆ ಮಾತನಾಡಿ, ಶಿವಾಜಿ ಮಹಾರಾಜರು ಬರೀ ಮರಾಠಾ ಜನಾಂಗಕ್ಕೆ ಸೀಮಿತವಾಗದೇ ದೇಶಕ್ಕೆ ಸೀಮಿತ. ಯಾವುದೋ ಒಂದು ರಾಜ್ಯ ವಂಶಸ್ಥರಿಂದ ಬಂದು ರಾಜ್ಯವನ್ನು ಆಳಿದವರಲ್ಲ. ಸಾಮಾನ್ಯ ಮನುಷ್ಯನ ಹಾಗೇ ಈ ದೇಶ ಆಳಿ ದೇಶ ಸಂರಕ್ಷಣೆ ಮಾಡಿದವರು ಎಂದರು.
ಸಿವಿಲ್ ಎಂಜಿನೀಯರ್ ಗಿರೀಶ ಪವಾರ ಅವರು ಛತ್ರಪತಿ ಶಿವಾಜಿ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ನೀಡಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ರವಿ ಕುಲಕರ್ಣಿ ನಿರೂಪಿಸಿದರು. ಮರಾಠ ವಿದ್ಯಾ ಪ್ರಸಾರಕ ಮಂಡಳ ಅಧ್ಯಕ್ಷ ಮನೋಹರ ಎನ್. ಮೊರೆ, ಕಾರ್ಯಾಧ್ಯಕ್ಷ ಸುಭಾಸ ಸಿಂಧೆ, ಉಪಾಧ್ಯಕ್ಷ ಯಲ್ಲಪ್ಪ ಚವ್ಹಾಣ, ಕಾರ್ಯದರ್ಶಿ ರಾಜು ಬೀರಜೆನವರ, ಮಲ್ಲೇಶಪ್ಪ ಶಿಂಧೆ, ಭೀಮಪ್ಪ ಖಸಾಯಿ ವೇದಿಕೆ ಮೇಲಿದ್ದರು.
;Resize=(128,128))
;Resize=(128,128))