ರೋಣ ತಾಲೂಕು ಜೆಡಿಎಸ್ ಅಧ್ಯಕ್ಷರಾಗಿ ಶಿವಕುಮಾರ ನೇಮಕ

| Published : Mar 26 2024, 01:06 AM IST

ಸಾರಾಂಶ

ರೋಣ ತಾಲೂಕಿಗೆ ನೇಮಕಗೊಂಡಿರುವ ಎಲ್ಲ ಪದಾಧಿಕಾರಿಗಳು ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತನ್ನು ನೀಡಿ ಬಲಪಡಿಸಬೇಕು ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ವೈ. ಮುಧೋಳ ತಿಳಿಸಿದರು.

ಕನ್ನಡಪ್ರಭ ವಾರ್ತೆ ನರೇಗಲ್ಲ

ರೋಣ ತಾಲೂಕಿನ ಜೆಡಿಎಸ್ ಅಧ್ಯಕ್ಷರಾಗಿ ಶಿವಕುಮಾರ ಶಿರಹಟ್ಟಿ ನೇಮಕಗೊಂಡಿದ್ದಾರೆ. ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ವೈ. ಮುಧೋಳ ಈ ನೇಮಕಾತಿಯನ್ನು ಮಾಡಿದ್ದು, ಸೋಮವಾರ ಸಮೀಪದ ಕೋಡಿಕೊಪ್ಪದ ಜೆಡಿಎಸ್ ಕಚೇರಿಯಲ್ಲಿ ನೇಮಕಾತಿ ಪತ್ರಗಳನ್ನು ಸಂಬಂಧಿಸಿದವರಿಗೆ ವಿತರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮುಧೋಳ ಮಾತನಾಡಿ, ಜೆಡಿಎಸ್‌ ಯಾವಾಗಲೂ ಬಡವರ ಹಿತವನ್ನು ಕಾಯುತ್ತಲೇ ಬಂದಿದೆ. ಈ ಪಕ್ಷದಲ್ಲಿ ಯುವಕರಿಗೆ ಒಳ್ಳೆಯ ಭವಿಷ್ಯವಿದೆ. ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಎಂದಿಗೂ ಯುವಕರನ್ನು ಪ್ರೋತ್ಸಾಹಿಸುತ್ತಲೆ ಬಂದಿದ್ದಾರೆ. ರೋಣ ತಾಲೂಕಿಗೆ ನೇಮಕಗೊಂಡಿರುವ ಎಲ್ಲ ಪದಾಧಿಕಾರಿಗಳು ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತನ್ನು ನೀಡಿ ಬಲಪಡಿಸಬೇಕು ಎಂದು ತಿಳಿಸಿದರು.

ವರಿಷ್ಠ ಮಂಡಳಿಯ ಆದೇಶದ ಮೇರೆಗೆ ನಾವುಗಳು ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಮತ್ತು ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಪಿ.ಸಿ.ಗದ್ದಿಗೌಡರ ಅವರನ್ನು ಗೆಲ್ಲಿಸಲೇ ಬೇಕಾದ ಕಾರ್ಯ ವಹಿಸಿದ್ದಾರೆ. ಈ ದಿಶೆಯಲ್ಲಿಯೂ ನಿಮ್ಮ ಕಾರ್ಯ ಚುರುಕಿನಿಂದ ಸಾಗಬೇಕಿದ್ದು, ಬಿಜೆಪಿ ಕಾರ್ಯಕರ್ತರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅಭ್ಯರ್ಥಿಗಳ ಜಯಕ್ಕೆ ಕಾರಣರಾಗಬೇಕು ಎಂದು ತಿಳಿಸಿದರು.

ತಾಲೂಕಾಧ್ಯಕ್ಷ ಶಿವಕುಮಾರ ಶಿರಹಟ್ಟಿ ಮಾತನಾಡಿ, ನಿಮ್ಮ ಮಾರ್ಗದರ್ಶನದಲ್ಲಿ ತಾಲೂಕಿನಲ್ಲಿ ಪಕ್ಷವನ್ನು ಸಂಘಟಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇವೆ. ಯುವಕರನ್ನು ಕರೆ ತಂದು ಪಕ್ಷಕ್ಕೆ ಬಲ ತುಂಬುತ್ತೇವೆ ಎಂದರು.

ಈ ವೇಳೆ ಉಪಾಧ್ಯಕ್ಷ ಶಂಕರಗೌಡ ಪಾಟೀಲ, ಎಸ್.ಸಿ. ಘಟಕದ ಅಧ್ಯಕ್ಷ ರಘು ಕಟ್ಟಿಮನಿ, ಸಂಘಟನಾ ಕಾರ್ಯದರ್ಶಿ ಪರಶುರಾಮ ವಾಲ್ಮೀಕಿ, ತಾಲೂಕು ಯುವ ಘಟಕದ ಅಧ್ಯಕ್ಷ ವೀರೇಶ ಆರಾಧ್ಯಮಠ ಮಾತನಾಡಿ, ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರ ಮಾರ್ಗದರ್ಶನದಲ್ಲಿ ನಾವು ಖಂಡಿತವಾಗಿಯೂ ಜೆಡಿಎಸ್ ಅನ್ನು ತಾಲೂಕಿನಲ್ಲಿ ಬಲಿಷ್ಠವಾಗಿ ಕಟ್ಟುತ್ತೇವೆ ಎಂದರು.

ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ವೀರಪ್ಪ ಜಿರ್ಲ, ಗಜೇಂದ್ರಗಡ ತಾಲೂಕು ಉಪಾಧ್ಯಕ್ಷ ರಕ್ಷಿತಗೌಡ ಪಾಟೀಲ, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಬಾದಶಹಾ ಬಾಗವಾನ, ಕೊಚಲಾಪುರ ಗ್ರಾಮ ಅಧ್ಯಕ್ಷ ಬುಡ್ಡಾಸಾಹೇಬ ಚಕೇರಿ, ನರೇಗಲ್ಲ ಹೋಬಳಿ ಅಧ್ಯಕ್ಷ ಯಲ್ಲಪ್ಪ ಹೊಸಮನಿ, ಕಾರ್ಯಾಧ್ಯಕ್ಷ ಅಶೋಕ ಬೆಟಗೇರಿ, ರೋಣ ತಾಲೂಕು ಸಂಘಟನಾ ಕಾರ್ಯದರ್ಶಿ ಹಾಲಪ್ಪ ಮರಲಿಂಗಣ್ಣವರ ಇನ್ನೂ ಮುಂತಾದವರು ಉಪಸ್ಥಿತರಿದ್ದರು.