ಮಠದ ಪರಂಪರೆಗೆ ಚೈತನ್ಯ ಬಿತ್ತಿದ ಶಿವಕುಮಾರ ಶ್ರೀ

| Published : Apr 29 2024, 01:34 AM IST / Updated: Apr 29 2024, 01:35 AM IST

ಮಠದ ಪರಂಪರೆಗೆ ಚೈತನ್ಯ ಬಿತ್ತಿದ ಶಿವಕುಮಾರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಮಠದ ಪರಂಪರೆಗೆ ಹೊಸ ಚೈತನ್ಯವನ್ನು ಬಿತ್ತಿದವರು ಲಿ.ಶಿವಕುಮಾರ ಶ್ರೀಗಳು ಎಂದು ಸಾಣೆಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಬಣ್ಣಿಸಿದರು.

ಹೊಸದುರ್ಗ: ಮಠದ ಪರಂಪರೆಗೆ ಹೊಸ ಚೈತನ್ಯವನ್ನು ಬಿತ್ತಿದವರು ಲಿ.ಶಿವಕುಮಾರ ಶ್ರೀಗಳು ಎಂದು ಸಾಣೆಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಬಣ್ಣಿಸಿದರು.

ತಾಲೂಕಿನ ಸಾಣೆಹಳ್ಳಿಯ ಎಸ್ಎಸ್ ರಂಗಮಂದಿರದಲ್ಲಿ ಭಾನುವಾರ ಸಂಜೆ ಆಯೋಜಿಸಲಾಗಿದ್ದ ಶಿವಕುಮಾರ ಸ್ವಾಮೀಜಿಗಳ 110ನೇ ಜಯಂತಿ ಮಹೋತ್ಸವದ ಸಾನಿಧ್ಯವಹಿಸಿ ಮಾತನಾಡಿದರು.ಸಾಹಿತ್ಯ, ಸಂಗೀತ, ನಾಟಕದ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುತ್ತಿದ್ದ ಸ್ವಾಮೀಜಿಗಳನ್ನು ಕ್ರಾಂತಿಕಾರಿ ಸ್ವಾಮೀಜಿ ಎಂದೇ ಕರೆಯಲಾಗುತ್ತಿತ್ತು. ಆನೆ ನಡೆದದ್ದೇ ಹಾದಿ ಎನ್ನುವ ಹಾಗೆ ಗುರುಗಳು ಎಲ್ಲೆಲ್ಲಿ ಹೋದರೋ ಅಲ್ಲೆಲ್ಲ ಮಾರ್ಗಗಳಾದವು. ಸಿರಿಗೆರೆ ದುಗ್ಗಾಣಿ ಮಠವನ್ನು ದುಡಿಯುವ ಮಠವನ್ನಾಗಿ ಮಾಡಿದರು ಎಂದರು.

ಕಾಯಕವೇ ಕೈಲಾಸ ತತ್ವದ ಮೇಲೆ ನಂಬಿಕೆಯಿಟ್ಟಿದ್ದ ಶ್ರೀಗಳು ಭಕ್ತರಿಗೆ ದುಡಿಯುವ ಮಾರ್ಗವನ್ನು ಕಲಿಸಿದರು. ಟೀಕೆ ಮಾಡುವಂಥವರ ಎದುರು ತಲೆಯೆತ್ತಿ ಬಾಳುವಂತಾಗಬೇಕು. ಹಣದಿಂದ ಶ್ರೀಮಂತಿಕೆ ಅಳೆಯದೇ ಭಕ್ತರ ಶ್ರೀಮಂತಿಕೆಯಿಂದ ಅಳೆಯಬೇಕು ಎಂದು ಹೇಳುತ್ತಿದ್ದ ಶಿವಕುಮಾರ ಸ್ವಾಮೀಗಳ ಕಾಲದಲ್ಲಿ ಸಿರಿಗೆರೆ ಜಾತ್ಯತೀತ ಮಠ ಎನ್ನುವ ಖ್ಯಾತಿ ಪಡೆದುಕೊಂಡಿತು. ಬಸವತತ್ವ ವಚನಗಳನ್ನು, ಸರ್ವಶರಣ ಸಮ್ಮೇಳನಗಳನ್ನು, ನಾಟಕಗಳನ್ನಾಡಿಸುವ ಮೂಲಕ ಹಳ್ಳಿಯಿಂದ ದಿಲ್ಲಿಯವರೆಗೂ ಬಿತ್ತುವ ಕೆಲಸ ಮಾಡಿದರು. ಶಿವಕುಮಾರ ಶ್ರೀಗಳವರು ರಂಗಭೂಮಿಗೆ ವಿಶೇಷವಾದ ಮಹತ್ವವನ್ನು ಕೊಟ್ಟಿದ್ದರು. ಸ್ವತಃ ಮರಣವೇ ಮಹಾನವಮಿ, ಶರಣಸತಿ ಲಿಂಗಪತಿ, ಶಿವಕುಲ, ವಿಶ್ವಬಂಧು ಮರುಳಸಿದ್ದ ನಾಟಕಗಳನ್ನು ರಚಿಸಿ ನಿರ್ದೇಶಿಸಿದರು ಎಂದರು.

ಹೊಳಲ್ಕೆರೆ ಮಾಜಿ ಶಾಸಕ ಶಿವಪುರದ ಪಿ.ರಮೇಶ್ ಮಾತನಾಡಿ, ಭಕ್ತರ ಬದುಕನ್ನು ಸದೃಢಗೊಳಿಸಿ ಕಲೆ, ಸಾಹಿತ್ಯ, ಸಂಸ್ಕೃತಿ ಬೆಳೆಸಿದಂಥವರು ಶಿವಕುಮಾರ ಸ್ವಾಮಿಗಳು. ಅವರ ಬದುಕಿನೊಂದಿಗೆ ಜನರ ಬದುಕಿನ ಬಗ್ಗೆ ಸದಾ ಆಲೋಚನೆ ಮಾಡಿದರು. ಶಿವಕುಮಾರ ಸ್ವಾಮಿಗಳವರು ಸಮಾಜದ ಜನರ ಹೃದಯದಲ್ಲಿ ಇವತ್ತಿಗೂ ನೆಲೆಸಿದ್ದಾರೆ ಎಂದರು.

ಎಸ್.ಆರ್.ಚಂದ್ರಶೇಖರಯ್ಯ ಮಾತನಾಡಿ, ತರಳಬಾಳು ಜಗದ್ಗುರು ಶಿವಕುಮಾರ ಸ್ವಾಮಿಗಳು ಜನರಿಗೆ ಅರಿವನ್ನು ಮೂಡಿಸುವ ಜೊತೆಗೆ ಹಳ್ಳಿಗಳಲ್ಲಿ ಪ್ರೌಢಶಾಲೆಗಳನ್ನು ಸ್ಥಾಪಿಸಿದರು. ದಿಟ್ಟತನಕ್ಕೆ ಹೆಸರಾದವರು. ಅವರ ಕಾಲದಲ್ಲಿ ಶಿಷ್ಯ ಮತ್ತು ಮಠಗಳ ಸಂಬಂಧ ಉತ್ತಮವಾಗಿತ್ತು. ಇವತ್ತಿಗೂ ಎಲ್ಲರ ಮನೆಗಳಲ್ಲಿ ಶಿವಕುಮಾರ ಶ್ರೀಗಳ ಭಾವಚಿತ್ರವನ್ನಿಟ್ಟುಕೊಂಡು ಪೂಜಿಸುತ್ತಾರೆ ಎಂದರು.

ಶಿವಸಂಚಾರದ ಕಲಾವಿದರಾದ ದಾಕ್ಷಾಯಿಣಿ, ನಾಗರಾಜ್, ಶರಣ್ ಹಾಗೂ ಪುನೀತ್ ವಚನಗೀತೆಗಳನ್ನು ಹಾಡಿದರು. ಗಾನ ಸಿದ್ಧಗಂಗಾ ಸಂಗೀತ ವಿದ್ಯಾಲಯ ಬೆಂಗಳೂರಿನ ಗೀತ ಭತ್ತದ್ ಮತ್ತು ತಂಡದವರಿಂದ ಸಂಗೀತ ಸುಧೆ ಕಾರ್ಯಕ್ರಮ ನಡೆಯಿತು. ವಿ.ಬಿ.ಚಳಗೇರಿ ಸ್ವಾಗತಿಸಿದರೆ ಶಿಕ್ಷಕಿ ಶೋಭ ನಿರೂಪಿಸಿ ವಂದಿಸಿದರು. ಶಿವಕುಮಾರ ಕಲಾಸಂಘದ ಕಲಾವಿದರ ಮರಣವೇ ಮಹಾನವಮಿ ನಾಟಕ ಪ್ರದರ್ಶನ ಮಾಡಿದರು.