ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಸಂಸ್ಕ್ರತ, ಕನ್ನಡ, ಹಿಂದಿ, ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸುಲಲಿತವಾಗಿ ಪ್ರವಚನ ನೀಡುವ ಮತ್ತು ಅದರಂತೆ ಬದುಕುತ್ತಿರುವ ಡಾ.ಶಿವಕುಮಾರ ಶ್ರೀಗಳ ಬದುಕು ಅನೇಕರಿಗೆ ಪ್ರೇರಣದಾಯಿಯಾಗಿದೆ ಎಂದು ಕಾಶಿಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರು ಹೇಳಿದರು.ನಗರದ ಚಿದಂಬರಾಶ್ರಮದಲ್ಲಿ ಡಾ.ಶಿವಕುಮಾರ ಮಹಾಸ್ವಾಮಿಗಳ 80ನೇ ಜಯಂತ್ಯುತ್ಸವದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನ ಆರೋಗ್ಯ ಚೆನ್ನಾಗಿರಬೇಕಾದರೆ ಗುರು ಹಿರಿಯರ ಆಶೀರ್ವಾದವು ಅಷ್ಟೇ ಅವಶ್ಯಕವಾಗಿದೆ. ದೈಹಿಕವಾಗಿ ಮಾನಸಿಕವಾಗಿ ಮತ್ತು ಬೌದ್ಧಿಕವಾಗಿಯು ಬೆಳವಣಿಗೆ ಹೊಂದಿ ಸಮಯೋಚಿತ್ತವಾದ ಮತ್ತು ಮಾದರಿಯ ಬದುಕು ಬದುಕಬೇಕು, ಪರಸ್ಪರ ಗೌರವಿಸುವುದರ ಜೊತೆಗೆ ಗುರು ಹಿರಿಯರನ್ನು ಗೌರವಿಸಬೇಕು ಆಗ ಒಳ್ಳೆಯದಾಗುತ್ತದೆ ಎಂದರು.
ಕಳೆದ 54 ವರ್ಷಗಳಿಂದ ಶಿವಕುಮಾರ ಶ್ರೀಗಳ ಜೊತೆ ಸ್ನೇಹವಿದೆ. ಕಾಶಿಯ ಮಠದಲ್ಲಿ ಒಟ್ಟಿಗೆ ಜೊತೆಯಿದ್ದೆವು. ಅಂದಿನಿಂದ ಇಂದಿನವರೆಗೆ ಹಾಗೆ ಇದ್ದೇವೆ. ಇದಕ್ಕೆ ಕಾರಣ ಶಿವಕುಮಾರ ಶ್ರೀಗಳ ಸರಳತೆ, ಸದಾಕಾಲ ಅಧ್ಯಯನಶೀಲರು ಅಗಾಧ ಪಾಂಡಿತ್ಯರಾಗಿದ್ದಾರೆ. ತಾನು ಸರಿಯಾಗಿ ಅರ್ಥ ಮಾಡಿಕೊಂಡು ಬೇರೆಯವರಿಗೆ ಸರಿಯಾದ ಸನ್ಮಾರ್ಗ ತೋರಿಸಬೇಕು. ಜ್ಞಾನದ ಪ್ರಭಾವದ ಮೂಲಕ ಭಕ್ತರನ್ನ ಸೆಳೆಯಬೇಕು. ಈ ನಿಟ್ಟಿನಲ್ಲಿ ಶಿವಕುಮಾರ ಶ್ರೀಗಳು ಕ್ರಿಯಾಶೀಲರಾಗಿದ್ದು, ಅವರು 120 ವರ್ಷಗಳ ಕಾಲ ಬಾಳಿ ಬದುಕಿ ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯಬೇಕೆಂದು ಶುಭ ಹಾರೈಸಿದರು.ಹುಕ್ಕೇರಿಯ ಗುರುಶಾಂತೇಶ್ವರ ಮಠದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ಇಡಿ ಭಾರತವೇ ಇಲ್ಲಿದೆ, ಜಾತಿ ಮತ ಭೇದ ಎನ್ನದೆ ಎಲ್ಲರು ಒಂದಾಗಿ ಇರಬೇಕು. ಜೊತೆಗೆ ದೇಶ, ಭಾಷಾಭಿಮಾನ ಇರಬೇಕು. ಈ ನಿಟ್ಟಿನಲ್ಲಿ ಶ್ರೀಗಳ ಸೇವೆ ಸಾರ್ಥಕವಾದದ್ದು. ಇವರ ಸೇವೆ ಹೀಗೆ ಮುಂದುವರಿಯಲಿ ಒಳ್ಳೆಯ ಕೆಲಸಗಳಿಗೆ ಎಲ್ಲರು ಸಹಕರಿಸಬೇಕು ಎಂದರು.
ಡಾ.ಶಿವಕುಮಾರ ಶ್ರೀಗಳು ಮಾತನಾಡಿ, ಈ ಸಮಾಜ ಶರಣರು, ಮಹಾತ್ಮರು ಬಾಳಿಹೋದದ್ದು, ಎಲ್ಲರ ಒಳಿತನ್ನೆ ಬಯಸುವ ಜನ ಇಲ್ಲಿದ್ದಾರೆ. ಈ ಮಠಕ್ಕೆ ದೇಶದ ವಿವಿಧೆಡೆಯಿಂದ ಅನೇಕ ಸಂತರು ಬಂದಿರುವುದು ಸೌಭಾಗ್ಯವೆ ಎಂದರು.ಈ ಸಂದರ್ಭದಲ್ಲಿ ಇಂಚಲದ ಡಾ.ಶಿವಾನಂದ ಭಾರತಿ ಮಹಾಸ್ವಾಮೀಜಿ, ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ಜ್ಯೋತಿರ್ಮಯಾನಂದ ಸ್ವಾಮೀಜಿ, ಹುಕ್ಕೆರಿಯ ಚಂದ್ರಶೇಖರ ಶಿವಾಚಾರ್ಯ, ಬೆಂಗಳೂರಿನ ಮಂಜುನಾಥ ಭಾರತಿ ಮಹಾಸ್ವಾಮಿಗಳು, ಮುಚಳಂಬ ಪ್ರಣವಾನಂದ ಮಹಾಸ್ವಾಮೀಜಿ, ಹಲಬರ್ಗಾ ಹಾವಗಿಲಿಂಗೇಶ್ವರ ಸ್ವಾಮೀಜಿ, ತ್ರೀಪುರಾಂತದ ಘನಲಿಂಗ ರುದ್ರಮುನಿ ಶಿವಾಚಾರ್ಯ, ಮಾಜಿ ಶಾಸಕರಾದ ಸುಭಾಷ ಕಲ್ಲೂರ, ಡಿ.ಆರ್ ಪಾಟೀಲ ಪ್ರಮುಖರಾದ ಬಸವರಾಜ ಜಾಬಶೆಟ್ಟಿ, ಬಿ.ಜಿ ಶೆಟಕಾರ, ಗುರುನಾಥ ಕೊಳ್ಳುರ, ಸೋಮನಾಥ ಪಾಟೀಲ ಹುಡಗಿ, ಬಾಬು ವಾಲಿ, ಬಿ.ಎಸ್ ಕುದರೆ, ಶಶಿಧರ ಹೊಸಳ್ಳಿ, ಪ್ರಭುಶೆಟ್ಟಿ ಮುದ್ದಾ, ಸೋಮಶೇಖರ ಪಾಟೀಲ ಗಾದಗಿ, ವಿರುಪಾಕ್ಷ ಗಾದಗಿ, ಬಾಬುರಾವ ದಾನಿ, ಗುರುನಾಥ ರಾಜಗೀರಾ, ಸಹಜಾನಂದ ಕಂದಗೂಳೆ, ಡಾ.ಹಾವಗಿರಾವ ಮೈಲಾರೆ, ನಾಗಭೂಷಣ ಕಮಠಾಣೆ ಸೇರಿದಂತೆ ಇತರರಿದ್ದರು.