ತಾಲೂಕಿನ ಸಾಣೇಹಳ್ಳಿಯ ಶ್ರೀ ತರಳಬಾಳು ಜಗದ್ಗುರು ಶಾಖಾ ಮಠದಲ್ಲಿ ಏ.28 ರಂದು ಬಸವ ಜಯಂತಿ ಹಾಗೂ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ 20ನೆಯ ಪೀಠಾಧ್ಯಕ್ಷರಾಗಿದ್ದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ 112ನೇ ಜಯಂತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಹೊಸದುರ್ಗ

ತಾಲೂಕಿನ ಸಾಣೇಹಳ್ಳಿಯ ಶ್ರೀ ತರಳಬಾಳು ಜಗದ್ಗುರು ಶಾಖಾ ಮಠದಲ್ಲಿ ಏ.28 ರಂದು ಬಸವ ಜಯಂತಿ ಹಾಗೂ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ 20ನೆಯ ಪೀಠಾಧ್ಯಕ್ಷರಾಗಿದ್ದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ 112ನೇ ಜಯಂತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಈ ಸಂದರ್ಭದಲ್ಲಿ ಶಿವಕುಮಾರ ಸ್ವಾಮೀಜಿ ಭವ್ಯ ರಥೋತ್ಸವವು ನೆರವೇರಲಿದೆ. ವಿಶ್ವಬಂಧು ಮರುಳಸಿದ್ದರಿಂದ ಸ್ಥಾಪಿತವಾದ ಈ ಸದ್ಧರ್ಮ ಪೀಠದಲ್ಲಿ ಇದುವರೆಗೆ 21 ಜನ ಪೀಠಾಧ್ಯಕ್ಷರು ಸಮಾಜದ ಪ್ರಗತಿಗೆ ಶ್ರಮಿಸಿದ್ದಾರೆ. 20ನೆಯ ಪೀಠಾಧ್ಯಕ್ಷರಾಗಿದ್ದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಕಾಶಿಯಲ್ಲಿ ಸಂಸ್ಕೃತ ಅಧ್ಯಯನ ಮಾಡಿ, 40 ವರ್ಷಗಳ ಕಾಲ ಧಾರ್ಮಿಕ, ಸಾಹಿತ್ಯಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದ್ದಾರೆ.

ಅವರು ಪಟ್ಟಾಧಿಕಾರ ವಹಿಸಿಕೊಂಡಾಗ ದುಗ್ಗಾಣಿ ಮಠ ಎಂದು ಕರೆಯಲ್ಪಡುತ್ತಿದ್ದ ಸಿರಿಗೆರೆ ಮಠವನ್ನು ತಮ್ಮ ಕಠಿಣ ಪರಿಶ್ರಮದಿಂದ ದುಡಿಯುವ ಮಠ ವನ್ನಾಗಿ ಪರಿವರ್ತಿಸಿದರು. ಬಸವ ತತ್ವವನ್ನೇ ಉಸಿರಾಗಿಸಿಕೊಂಡಿದ್ದ ಅವರು ಜಾತಿ, ಲಿಂಗ, ಭಾಷೆಯ ಭೇದವಿಲ್ಲದೆ ಶಿಷ್ಯ ಸಮೂಹವನ್ನು ಹರಸಿದ್ದರು. ಅವರ ಸ್ಮರಣಾರ್ಥವಾಗಿ ಇಂದಿನ ಪೀಳಿಗೆಗೆ ಅವರ ಸೇವಾಕಾರ್ಯಗಳ ಪರಿಚಯ ಮಾಡಿಕೊಡುವ ಉದ್ದೇಶದಿಂದ ಪ್ರತಿ ವರ್ಷ ಏ.28 ರಂದು ರಥೋತ್ಸವವನ್ನು ಆಯೋಜಿಸಲಾಗುತ್ತಿದೆ.

ಅಂದು ಸಂಜೆ 4.30ಕ್ಕೆ ಸಾಣೇಹಳ್ಳಿ ಗ್ರಾಮಸ್ಥರ ನಿರ್ವಹಣೆಯಲ್ಲಿ ಶಿವಕುಮಾರ ಸ್ವಾಮೀಜಿ ರಥೋತ್ಸವವು ಜರುಗಲಿದೆ. ತದ ನಂತರ ಸಂಜೆ 5:30ಕ್ಕೆ ಸಾಣೇಹಳ್ಳಿಯ ಎಸ್ ಎಸ್‌ ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವಹಿಸಲಿದ್ದಾರೆ.

ದಾವಣಗೆರೆಯ ವಿಶ್ರಾಂತ ಪ್ರಾಚಾರ್ಯ ಡಾ.ನಾ.ಲೋಕೇಶ್ ಒಡೆಯರ್ ಶಿವಕುಮಾರ ಸ್ವಾಮೀಜಿ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಹೊಳಲ್ಕೆರೆಯ ಚಂದ್ರಶೇಖರ ತಾಳ್ಯ ಅವರನ್ನು ಅಭಿನಂದಿಸಲಾಗುವುದು.

ಶಿವಸಂಚಾರ ಕಲಾತಂಡದಿಂದ ವಚನಗೀತೆಗಳ ಗಾಯನ ಮತ್ತು ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ವಿದ್ಯಾರ್ಥಿಗಳಿಂದ ವಚನ ನೃತ್ಯ ಪ್ರದರ್ಶನ ಏರ್ಪಡಿಸಲಾಗಿದೆ. ಡಾ. ರಾಜಶೇಖರ ಹನುಮಲಿ ಅವರ ರಚನೆ ಹಾಗೂ ವೈ ಡಿ ಬದಾಮಿ ಅವರ ನಿರ್ದೇಶನದಲ್ಲಿ, ಲಕ್ಕಮುತ್ತೇನಹಳ್ಳಿಯ ರಾಜು ಬಿ ಅವರಿಂದ ಶಿವಕುಮಾರ ಸ್ವಾಮೀಜಿ ಜೀವನಾಧಾರಿತ ಮಹಾಬೆಳಕು ಏಕವ್ಯಕ್ತಿ ನಾಟಕ ಪ್ರದರ್ಶನಗೊಳ್ಳಲಿದೆ.

ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಭಕ್ತಾದಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ರಥೋತ್ಸವ ಸಮಿತಿ ವಿನಂತಿಸಿದೆ.