ಶಿವಕುಮಾರ ಸ್ವಾಮೀಜಿ ಆದರ್ಶಎಲ್ಲರಿಗೂ ಮಾದರಿ

| Published : Apr 02 2025, 01:00 AM IST

ಸಾರಾಂಶ

ಮಾಗಡಿ: ಮಠದ ಸ್ವಾಮೀಜಿಗಳು ಹೇಗೆ ಸಮಾಜದಲ್ಲಿ ನಡೆದುಕೊಳ್ಳಬೇಕು ಎಂಬುದಕ್ಕೆ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಮಾದರಿಯಾಗಿದ್ದಾರೆ ಎಂದು ಜಗದೇವರ ಮಠದ ಇಮ್ಮಡಿ ಬಸವರಾಜ ಸ್ವಾಮೀಜಿ ಹೇಳಿದರು.

ಮಾಗಡಿ: ಮಠದ ಸ್ವಾಮೀಜಿಗಳು ಹೇಗೆ ಸಮಾಜದಲ್ಲಿ ನಡೆದುಕೊಳ್ಳಬೇಕು ಎಂಬುದಕ್ಕೆ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಮಾದರಿಯಾಗಿದ್ದಾರೆ ಎಂದು ಜಗದೇವರ ಮಠದ ಇಮ್ಮಡಿ ಬಸವರಾಜ ಸ್ವಾಮೀಜಿ ಹೇಳಿದರು.

ಪಟ್ಟಣದ ಡೂಮ್ ಲೈಟ್ ವೃತ್ತದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ರಾಮನಗರ ಜಿಲ್ಲಾಘಟಕ ಹಾಗೂ ಮಾಗಡಿ ತಾಲೂಕು ಘಟಕಗಳ ಸಹಯೋಗದಲ್ಲಿ ಮಾಗಡಿ ತ್ರಿವಿಧ ದಾಸೋಹಿ ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳ 118ನೇ ಜಯಂತ್ಯುತ್ಸವದಲ್ಲಿ ದಾಸೋಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಿವಕುಮಾರ ಸ್ವಾಮೀಜಿ ತ್ರಿವಿಧ ದಾಸೋಹಗಳಾಗಿ ಅನ್ನದಾನ, ವಿದ್ಯಾದಾನ, ವಸತಿ ನೀಡುವ ಮೂಲಕ ಮಠಗಳು ಸಮಾಜಕ್ಕೆ ಯಾವ ರೀತಿ ಕೊಡುಗೆ ಕೊಡಬೇಕು ಎಂಬುದಕ್ಕೆ ಮಾದರಿಯಾಗಿದ್ದಾರೆಂದು ಹೇಳಿದರು.ಲಕ್ಷಾಂತರ ವಿದ್ಯಾರ್ಥಿಗಳಿಗೆ ನೆರವಾಗಿ ಸಮಾಜಕ್ಕೆ ಉತ್ತಮ ಯುವಕರನ್ನು ಕೊಡಗೆ ಕೊಟ್ಟಕೀರ್ತಿ ಸಿದ್ದಗಂಗಾ ಮಠಕ್ಕೆ ಸಲ್ಲುತ್ತದೆ. ಅವರ ಜಯಂತ್ಯುತ್ಸವವನ್ನು ಬಡವರಿಗೆ ಅನ್ನ ಸಂತರ್ಪಣೆ ಮಾಡುವ ಮೂಲಕ ಅವರಿಗೆ ಗೌರವ ಕೊಡುತ್ತಿದ್ದೇವೆ. ಎಲ್ಲಾ ಮಠಗಳು ವಿದ್ಯಾದಾನ, ಅನ್ನದಾನ, ವಸತಿ ನೀಡಬೇಕು. ಸರ್ಕಾರ ಮಾಡಬೇಕಾದ ಕೆಲಸವನ್ನು ಮಠಗಳೇ ಮಾದರಿಯಾಗಿ ಮಾಡಿ ಸಮಾಜಕ್ಕೆಕೊಡುಗೆಯಾಗಿ ನೀಡಲಾಗಿದೆ ಎಂದು ತಿಳಿಸಿದರು.

ಮಹಾಸಭಾ ಉಪಾಧ್ಯಕ್ಷ ಈಶ ಸಿದ್ದಲಿಂಗಪ್ಪ ಬಿ.ಆರ್. ಮಾತನಾಡಿ, ಡಾ ಶಿವಕುಮಾರ ಸ್ವಾಮೀಜಿ ನಮ್ಮ ತಾಲೂಕಿನವರು ಎಂದು ಹೇಳುವುದೇ ಹೆಮ್ಮೆಯ ವಿಚಾರವಾಗಿದ್ದು, ಅವರ ಆದರ್ಶವನ್ನು ಪ್ರತಿಯೊಬ್ಬ ಮಠಾಧೀಶರು ಪಾಲನೆ ಮಾಡಿದರೆ ಬಡವರಿಗೆ ಸಾಕಷ್ಟು ಅನುಕೂಲವಾಗಲಿದೆ. ಅವರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಸ್ವಾಮೀಜಿಗಳ ಸಮ್ಮುಖದಲ್ಲಿ ಆಚರಿಸುತ್ತಿರುವುದು ಸಂತೋಷದ ವಿಚಾರ ಎಂದು ತಿಳಿಸಿದರು.

ಮಹಾಸಭಾ ಕಾರ್ಯದರ್ಶಿ ಚಕ್ರಬಾವಿ ಜಗದೀಶ್ ಮಾತನಾಡಿ, ಡಾ. ಶಿವಕುಮಾರ ಸ್ವಾಮೀಜಿ ಹುಟ್ಟೂರಾದ ವೀರಪುರದಲ್ಲಿ 111 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಕಾಮಗಾರಿ ವಿಳಂಬವಾಗುತ್ತಿದೆ. ಸರ್ಕಾರ ಮುಂದಿನ ವರ್ಷವಾದರೂ ಪೂರ್ಣಗೊಳಿಸಿ ಪ್ರವಾಸಿ ತಾಣವಾಗಿ ಮಾಡಿ ಅವರ ಆದರ್ಶಗಳನ್ನು ಪ್ರತಿಯೊಬ್ಬರಿಗೂ ತಿಳಿಸಬೇಕಿದೆ ಎಂದು ಹೇಳಿದರು.

ಜಯಂತ್ಯುತ್ಸವದ ಅಂಗವಾಗಿ ಡಾ.ಶಿವಕುಮಾರ ಸ್ವಾಮೀಜಿಗಳ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ, ಕೋಸಂಬರಿ, ಅನ್ನ ಸಂತರ್ಪಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಹಾಸಭಾ ಜಿಲ್ಲಾ ನಿರ್ದೇಶಕ ರೋಹಿತ್, ತಾಲೂಕು ಘಟಕದ ಕಾರ್ಯದರ್ಶಿ ಚಿರಂತ್, ನಿರ್ದೇಶಕರಾದ ರಾಜವರ್ಮ, ಪೊಲೀಸ್ ವಿಜಯ್‌ಕುಮಾರ್, ದೊಡ್ಡಿ ಅಂಬರೀಶ್, ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಂ.ಬಿ.ಮಹೇಶ್, ವೀರಶೈವ ಲಿಂಗಾಯತ ಸಮುದಾಯದ ಮುಖಂಡರಾದ ಹೊಸಹಳ್ಳಿ ನಾಗರಾಜ್, ಕಿರಣ್‌ ಕುಮಾರ್ ಕೆ.ಎಸ್, ಚಂದ್ರಶೇಖರ್ ಎಂ.ಆರ್, ದ್ವಾರಕರಾಧ್ಯ, ಅನಿಲ್, ಕುಮಾರ್‌, ಮಧು, ಎಂ.ಆರ್.ಶಿವಕುಮಾರ್, ಕೆಂಚನಹಳ್ಳಿ ಯತೀಶ್, ಅಣ್ಣಪ್ಪ ತಟವಾಳ್ ಉಮಾಶಂಕರ್ ಇತರರು ಭಾಗವಹಿಸಿದ್ದರು. 1ಮಾಗಡಿ1:

ಮಾಗಡಿಯ ಡೂಮ್ ಲೈಟ್ ವೃತ್ತದಲ್ಲಿ ಡಾ.ಶಿವಕುಮಾರ ಸ್ವಾಮೀಜಿ 118ನೇ ಜಯಂತ್ಯುತ್ಸವಕ್ಕೆ ಪ್ರಯುಕ್ತ ಜಡೆದೇವರ ಮಠಾಧ್ಯಕ್ಷ ಇಮ್ಮಡಿ ಬಸವರಾಜ ಸ್ವಾಮೀಜಿ ಚಾಲನೆ ನೀಡಿದರು.