ಏ. 19ರಿಂದ ಕಬ್ಬಿಣಕಂತಿ ಮಠದ ಶಿವಲಿಂಗ ಸ್ವಾಮೀಜಿ ಷಷ್ಟ್ಯಬ್ದ

| Published : Apr 19 2025, 12:38 AM IST

ಸಾರಾಂಶ

ರಟ್ಟೀಹಳ್ಳಿ ತಾಲೂಕಿನ ಕಬ್ಬಿಣಕಂತಿ ಮಠದ ಆವರಣದಲ್ಲಿ ಶ್ರೀ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಷಷ್ಟ್ಯಬ್ದ ಸಮಾರಂಭ, ಲಿಂ. ಜಯಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆ, ಧರ್ಮ ಜಾಗೃತಿ ಸಮಾರಂಭ, ಮಹಿಳಾ ಜಾಗೃತಿ ಹಾಗೂ ಸರಳ ಸಮೂಹಿಕ ವಿವಾಹ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಏ. 19ರಿಂದ 21ರ ವರೆಗೆ ಜರುಗಲಿದೆ.

ರಟ್ಟೀಹಳ್ಳಿ: ಸ್ಥಳೀಯ ಕಬ್ಬಿಣಕಂತಿ ಮಠದ ಆವರಣದಲ್ಲಿ ಶ್ರೀ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಷಷ್ಟ್ಯಬ್ದ ಸಮಾರಂಭ, ಲಿಂ. ಜಯಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆ, ಧರ್ಮ ಜಾಗೃತಿ ಸಮಾರಂಭ, ಮಹಿಳಾ ಜಾಗೃತಿ ಹಾಗೂ ಸರಳ ಸಾಮೂಹಿಕ ವಿವಾಹ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಏ. 19ರಿಂದ 21ರ ವರೆಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು, ಉಜ್ಜಯನಿ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ಜರುಗಲಿದೆ.

19ರಂದು ಬ್ರಾಹ್ಮಿ ಮೂಹೂರ್ತದಲ್ಲಿ ಕಳಸ ಪೂಜೆಯೊಂದಿಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಮಹಾಮೃತ್ಯುಂಜಯ ಹೋಮ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಕಬ್ಬಿಣಕಂತಿ ಮಠದ ವಟುಗಳು ಹಾಗೂ ಪುರೋಹಿತ ಬಳಗದವರಿಂದ ಆರಂಭಗೊಳ್ಳಲಿದೆ. ಬೆಳಗ್ಗೆ 8.30ಕ್ಕೆ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಿಂದ ಪೂರ್ಣಕುಂಭ, ಡೊಳ್ಳು ಸಮಾಳ, ಮಂಗಳ ವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಿವಾಚಾರ್ಯರತ್ನ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳ ಭವ್ಯ ಸಾರೋಟದೊಂದಿಗೆ ಮೆರವಣಿಗೆ ಜರುಗುವುದು.

ಬೆಳಗ್ಗೆ 11 ಗಂಟೆಗೆ ಷಷ್ಟ್ಯಬ್ದ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಜರುಗಲಿದೆ. ಡಾ. ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ನೇತೃತ್ವ ವಹಿಸುವರು. ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಸಮ್ಮುಖದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಸಮಾರಂಭ ಉದ್ಘಾಟಿಸಲಿದ್ದಾರೆ.

ಕಬ್ಬಿಣ ಕಂತಿಮಠದ ಪರಂಪರೆ ಪರಿಚಯದ ಗ್ರಂಥವನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಬಿಡುಗಡೆ ಮಾಡಲಿದ್ದಾರೆ. ಶಾಸಕ ಯು.ಬಿ. ಬಣಕಾರ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಬಿ.ಸಿ. ಪಾಟೀಲ್, ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ಡಿ.ಎಂ. ಸಾಲಿ ಉಪಸ್ಥಿತಿ ವಹಿಸುವರು.

ಸಂಜೆ 6.30ಕ್ಕೆ ನಡೆಯಲಿರುವ ಧರ್ಮಜಾಗೃತಿ ಸಮ್ಮೇಳನದಲ್ಲಿ ಬೆಂಗಳೂರಿನ ಮಹಾಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಸಮಾರಂಭ ಉದ್ಘಾಟಿಸುವರು.

ಏ. 20ಕ್ಕೆ ಗ್ರಾಮಗಳಿಂದ ಆಗಮಿಸಿದ ದೇವರಿಗೆ ರುದ್ರಾಭಿಷೇಕ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಮಂಟಪ ಪೂಜಾ ಸಮಾರಂಭ ನಡೆಯಲಿದೆ. ಸಂಜೆ 6.30ಕ್ಕೆ ಭಾವೈಕ್ಯ ಸಮಾವೇಶವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಉದ್ಘಾಟಿಸುವರು, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್, ಕೃಷಿ ಸಚಿವ ಚಲುವರಾಯಸ್ವಾಮಿ ಇತರರು ಉಪಸ್ಥಿತರಿರುವರು.

ಏ. 21ರಂದು ಬೆಳಗ್ಗೆ 10.30ಕ್ಕೆ ಲಿಂ. ಶ್ರೀ ಜಯಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳ 34ನೇ ಪುಣ್ಯಾರಾಧನೆ ನಿಮಿತ್ತ ವಟುಗಳಿಗೆ ದೀಕ್ಷಾ ಕಾರ್ಯಕ್ರಮ, ಸರಳ ಸಾಮೂಹಿಕ ವಿವಾಹ, ಮಹಿಳಾ ಜಾಗೃತಿ ಸಮ್ಮೇಳನ ಮತ್ತು ಶ್ರೀಗಳ ಷಷ್ಟ್ಯಬ್ದ ಕಾರ್ಯಕ್ರಮದ ಸಮಾರೋಪ ಸಮಾರಂಭ ಜರುಗಲಿದೆ. ಕೂಡಲಸಂಗಮದ ಜಗದ್ಗುರು ಶ್ರೀ ಬಸವಜಯ ಮೃತ್ಯಂಜಯ ಸ್ವಾಮೀಜಿ ಮತ್ತು ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಉದ್ಘಾಟಿಸಲಿದ್ದಾರೆ ಎಂದು ಶ್ರೀ ಮಠ ಪ್ರಕಟಣೆಯಲ್ಲಿ ತಿಳಿಸಿದೆ.