ಸಾರಾಂಶ
ಸಂಘದ ಸದಸ್ಯರಿಗೆ ಚುನಾವಣೆ ನೋಟಿಸ್ ನೀಡದೆ ಆಡಳಿತ ಮಂಡಳಿ ಚುನಾವಣೆ ವೇಳಾಪಟ್ಟಿ ಪ್ರಕಟಿಸಲಾಗಿದೆ. ನಿಯಮ ಉಲ್ಲಂಘಿಸಿ ಚುನಾವಣೆ ಪ್ರಕ್ರಿಯೆ ನಡೆಸಲಾಗುತ್ತಿದೆ.
ಧಾರವಾಡ: ಸಹಕಾರ ಸಂಘದ ನಿಯಮಾವಳಿ ಮೀರಿ ತಾಲೂಕಿನ ಶಿವಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ ನಡೆಸಲಾಗುತ್ತಿದೆ ಎಂದು ಸಂಘದ ಸದಸ್ಯರು ಆರೋಪಿಸಿದ್ದಾರೆ.
ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘದ ಸದಸ್ಯರಾದ ಶಿವಾನಂದ ಮುದ್ದಿ, ಅಣ್ಣಪ್ಪಗೌಡ ಚಿನಗುಡಿ, ಬಸವರಾಜ ಹುಬ್ಬಳ್ಳಿ, ವಿಜಯಮಹಾಂತೇಶ ವಸ್ತ್ರದ ಮತ್ತಿತರರು, ಸಂಘದ ಸದಸ್ಯರಿಗೆ ಚುನಾವಣೆ ನೋಟಿಸ್ ನೀಡದೆ ಆಡಳಿತ ಮಂಡಳಿ ಚುನಾವಣೆ ವೇಳಾಪಟ್ಟಿ ಪ್ರಕಟಿಸಲಾಗಿದೆ. ನಿಯಮ ಉಲ್ಲಂಘಿಸಿ ಚುನಾವಣೆ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.ಲೆಕ್ಕ ಪರಿಶೋಧನೆ ಮತ್ತು ಶುಲ್ಕ ಬಾಕಿ ನಿಟ್ಟಿನಲ್ಲಿ 2025ರ ಜ. 5ರಂದು ಸೂಪರ್‌ಸೀಡ್ ಮಾಡಿ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸಲಾಗಿತ್ತು. ಇದೀಗ ಮೇ 15ರಂದು ದಿಢೀರಾಗಿ ಚುನಾವಣೆ ಘೋಷಿಸಲಾಗಿದೆ. 16ರಿಂದ ನಾಮಪತ್ರ ಸಲ್ಲಿಕೆ ಶುರುವಾಗಿದೆ. ಸಂಘದ ಆಡಳಿತಾಧಿಕಾರಿಯನ್ನೇ ಚುನಾವಣಾಧಿಕಾರಿ ನೇಮಿಸಲಾಗಿದ್ದು ತಪ್ಪು. ಸೂಪರ್ ಸೀಡ್ ಆಗಿದ್ದರಿಂದ ಹಿಂದಿನ ಆಡಳಿತ ಮಂಡಳಿಯವರು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಇಲ್ಲ. ಆದರೆ, ಹಿಂದಿನ ಆಡಳಿತ ಮಂಡಳಿಯ ಶಂಕರಪ್ಪ ಮುಗದ ಸಹಿತ ಹಲವರು ನಾಮಪತ್ರ ಸಲ್ಲಿಸಿದ್ಧಾರೆ. ಈ ನಾಮಪತ್ರಗಳನ್ನು ತಿರಸ್ಕರಿಸಬೇಕು ಮತ್ತು ಚುನಾವಣಾಧಿಕಾರಿಯ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಚುನಾವಣೆ ಪ್ರಕ್ರಿಯೆ ಹಿಂದೆ ಕೆಲವರು ಕೈವಾಡ ಇದೆ. ಅಧಿಕಾರಿಗಳು ಅವರು ಹೇಳಿದಂತೆ ಕೇಳುತ್ತಿದ್ದಾರೆ. ಸಹಕಾರ ಸಂಘಗಳ ನಿಯಮ ಪಾಲಿಸುತ್ತಿಲ್ಲ. ಸಹಕಾರ ಇಲಾಖೆ ಉಪನಿಬಂಧಕರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಈಶ್ವರ ಶಿವಳ್ಳಿ, ಪರಮೇಶ್ವರ ಕಾಳೆ, ಶೇಖಪ್ಪ ಕದಂ, ಮೂಗಪ್ಪ ಬಿಲ್ಲಿಂಗನವರ್, ಸಂತೋಷ ನೀರಲಕಟ್ಟಿ ಸೇರಿದಂತೆ ಹಲವರಿದ್ದರು.