ಮೈಸೂರು ದಸರಾ ಮಾದರಿಯಲ್ಲೇ ಜಿಲ್ಲೆಯ ಪಾರಂಪರಿಕ, ಸಾಂಸ್ಕೃತಿಕ ಹಾಗೂ ವೈವಿಧ್ಯಮಯ ಪರಂಪರೆ ಪ್ರತಿಬಿಂಬಿಸುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ಒಳಗೊಂಡು 11 ದಿನಗಳ ಕಾಲ ನಡೆಯುವ ಶಿವಮೊಗ್ಗ ದಸರಾವನ್ನು ಬರದ ನಡುವೆಯೂ ಅದ್ಧೂರಿಯಾಗಿ ಆಚರಿಸಲು ಪಾಲಿಕೆ ಆಡಳಿತ ಸಜ್ಜಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮೈಸೂರು ದಸರಾ ಮಾದರಿಯಲ್ಲೇ ಜಿಲ್ಲೆಯ ಪಾರಂಪರಿಕ, ಸಾಂಸ್ಕೃತಿಕ ಹಾಗೂ ವೈವಿಧ್ಯಮಯ ಪರಂಪರೆ ಪ್ರತಿಬಿಂಬಿಸುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ಒಳಗೊಂಡು 11 ದಿನಗಳ ಕಾಲ ನಡೆಯುವ ಶಿವಮೊಗ್ಗ ದಸರಾವನ್ನು ಬರದ ನಡುವೆಯೂ ಅದ್ಧೂರಿಯಾಗಿ ಆಚರಿಸಲು ಪಾಲಿಕೆ ಆಡಳಿತ ಸಜ್ಜಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ ಎರಡು ತಿಂಗಳಿನಿಂದ ದಸರಾ ಆಚರಣೆಗೆ ಪೂರ್ವಭಾವಿ ಸಿದ್ಧತೆ ನಡೆಸಲಾಗಿದ್ದು, ಜಿಲ್ಲೆಯ ಪಾರಂಪರಿಕ, ಸಾಂಸ್ಕೃತಿಕ ಹಾಗೂ ವೈವಿಧ್ಯಮಯ ಪರಂಪರೆ ಪ್ರತಿಬಿಂಬಿಸುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಅ.11 ರಿಂದ 21ರವರೆಗೆ ನಾಡಹಬ್ಬವನ್ನು ಈ ಬಾರಿ ಮತ್ತಷ್ಟು ವೈಭವ ಹಾಗೂ ವಿಭಿನ್ನ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತಿದ್ದು, ಅ.11ರಂದು ಹಿರಿಯ ನಟ ಶ್ರೀನಾಥ್ ಶಿವಮೊಗ್ಗ ದಸರಾ ಉದ್ಘಾಟಿಸಲಿದ್ದು, ಖ್ಯಾತ ನಟರಾದ ರವಿಚಂದ್ರನ್‌, ಸಾಧು ಕೋಕಿಲ,ಪದ್ಮಾ ವಾಸಂತಿ ಸೇರಿದಂತೆ ತಾರ ಬಳಗ ಈ ಬಾರಿಯ ದಸರಾ ಮೆರುಗನ್ನು ಹೆಚ್ಚಿಸಲಿದೆ ಎಂದು ತಿಳಿಸಿದರು.

ಅ.11ರಂದು ದಸರಾ ಉದ್ಘಾಟನೆ ಬಳಿಕ ಶಿವಮೊಗ್ಗ ಮಹಾನಗರ ಪಾಲಿಕೆ ಆವರಣದಿಂದ ತಾಯಿ ಶ್ರೀ ಚಾಮುಂಡೇಶ್ವರಿಯ ಭವ್ಯ ಮೆರವಣಿಗೆ ನಡೆಯಲಿದೆ. ಮೆರವಣಿಗೆಯು ನಗರದ ಪ್ರಮುಖ ಮಾರ್ಗಗಳ ಮೂಲಕ ಕೋಟೆ ಚಂಡಿಕಾ ಪರಮೇಶ್ವರಿ ದೇವಸ್ಥಾನ ತಲುಪಲಿದೆ. ಇದೇ ಸಂದರ್ಭದಲ್ಲಿ ದೇವಿಯ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಗುವುದು. ಅಂದಿನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.

ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಬೆಳ್ಳಿ ಮಂಟಪದಲ್ಲಿ ಚಾಮುಂಡೇಶ್ವರಿಯನ್ನು ಪ್ರತಿಷ್ಠಾಪಿಸಿ ಭವ್ಯ ಮೆರವಣಿಗೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಾರಿ ದೇವಿಯ ಮುಖವನ್ನು ಚಿನ್ನದಿಂದ ಅಲಂಕರಿಸುವ ವಿಶೇಷ ಯೋಜನೆ ರೂಪಿಸಲಾಗಿದ್ದು, ಚಾಮುಂಡೇಶ್ವರಿಯ ಮೆರವಣಿಗೆಯು ದಸರಾ ಸಂಭ್ರಮದ ಪ್ರಮುಖ ಆಕರ್ಷಣೆಯಾಗಲಿದೆ ಎಂದು ಮಾಹಿತಿ ನೀಡಿದರು.

ಮೆರವಣಿಗೆಗೆ ಗಜವೈಭವ:

ಪ್ರತಿ ವರ್ಷದಂತೆ ಈ ಬಾರಿಯೂ ದಸರಾ ಮೆರವಣಿಗೆಯಲ್ಲಿ ಸಕ್ರೆಬೈಲು ಆನೆಗಳು ಸಾಥ್‌ ನೀಡುತ್ತಿದ್ದು, ಈ ಬಾರಿ ಅಂಬಾರಿ ಹೊತ್ತು ಸಾಗುವ ಸಾಗರ್‌ ಜೊತೆ ಬಹದ್ದೂರ್, ಸೋಮಣ್ಣ ಆನೆಗಳು ಹೆಜ್ಜೆ ಹಾಕಲಿವೆ. ಮೂರು ಆನೆಗಳ ಗಜವೈಭವ ದಸರಾ ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಲಿದೆ ಎಂದರು.

ಶಿವಮೊಗ್ಗ ದಸರಾ ಈ ಬಾರಿ 11 ದಿನಗಳ ಕಾಲ ನಡೆಯಲಿದೆ. ಸಾಮಾನ್ಯವಾಗಿ 10 ದಿನಗಳ ಕಾಲ ನಡೆಯುತ್ತಿದ್ದ ನವರಾತ್ರಿ ಹಾಗೂ ವಿಜಯದಶಮಿ ಉತ್ಸವವನ್ನು ಒಂದು ದಿನ ವಿಸ್ತರಿಸಲಾಗಿದ್ದು, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಿದೆ. ನಗರದಾದ್ಯಂತ ದಸರಾ ಸಂಭ್ರಮವನ್ನು ಮತ್ತಷ್ಟು ವೈಭವಯುತವಾಗಿ ಆಚರಿಸಲು ಸಿದ್ಧತೆ ನಡೆದಿದೆ ಎಂದರು.

ದಸರಾ ಅಂಗವಾಗಿ ಶಿವಪ್ಪನಾಯಕ ಅರಮನೆಯಿಂದ ಸಕಲ ದೇವಾನುದೇವತೆಗಳ ಭವ್ಯ ಮೆರವಣಿಗೆ ನಡೆಯಲಿದೆ. ವಿವಿಧ ದೇವಾಲಯಗಳ ದೇವರುಗಳ ಉತ್ಸವ ಮೂರ್ತಿಗಳು ಮೆರವಣಿಗೆಯಲ್ಲಿ ಭಾಗವಹಿಸಲಿದ್ದು, ದಸರಾ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲಿವೆ. ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.

ವಿಜಯದಶಮಿ ಸಂಭ್ರಮಕ್ಕೆ ಜನಸಾಗರದ ನಿರೀಕ್ಷೆ:

ಶಿವಮೊಗ್ಗದಲ್ಲಿ ನಡೆಯಲಿರುವ ವಿಜಯದಶಮಿ ಹಾಗೂ ಬನ್ನಿ ಮುಡಿಯುವ ಸಂಭ್ರಮಕ್ಕೆ ಲಕ್ಷಾಂತರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ದಸರಾ ಮೆರವಣಿಗೆ ಹಾಗೂ ವಿವಿಧ ಕಾರ್ಯಕ್ರಮಗಳೊಂದಿಗೆ ವಿಜಯದಶಮಿ ಉತ್ಸವ ನಡೆಯಲಿದ್ದು, ನಗರದಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದಸರಾ ಸಂಭ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಶಿವಮೊಗ್ಗ ದಸರಾ ಅಂಗವಾಗಿ ವೀರಶೈವ ಕಲ್ಯಾಣ ಮಂದಿರದಲ್ಲಿ ನಾಣ್ಯ ಸಂಗ್ರಹ ಪ್ರದರ್ಶನ ಆಯೋಜಿಸಲಾಗಿದೆ. ಪುರಾತನ ನಾಣ್ಯ ಸಂಗ್ರಹದಲ್ಲಿ ಆಸಕ್ತಿ ಹೊಂದಿರುವವರನ್ನು ಗುರುತಿಸಿ, ಅವರ ಅಪರೂಪದ ಹಾಗೂ ವೈವಿಧ್ಯಮಯ ನಾಣ್ಯ ಸಂಗ್ರಹವನ್ನು ಸಾರ್ವಜನಿಕರಿಗೆ ಪರಿಚಯಿಸುವ ಉದ್ದೇಶ ಹೊಂದಲಾಗಿದೆ. ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಉದ್ಘಾಟಿಸಲಿದ್ದಾರೆ. ದಸರಾ ಕಾರ್ಯಕ್ರಮಗಳಲ್ಲಿನ ಈ ವಿಶೇಷ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯಲಿದೆ ಎಂದರು.

ಗೋಷ್ಟಿಯಲ್ಲಿ ಪಾಲಿಕೆ ಆಯುಕ್ತರಾದ ಕೆ.ಮಾಯಣ್ಣಗೌಡ, ಅಧಿಕಾರಿಗಳಾದ ಪುಷ್ಪಾವತಿ ಹೆಚ್,ಎಸ್,ಸಂತೋಷ್ ರಾಥೋಡ್,ಹರೀಶ್,ಅನುಪಮ ಟಿ.ಆರ್,ಸಿದ್ದಪ್ಪ ಸಿ.ಆರ್,ಶಿವಕುಮಾರ,ತ್ರಿವೇಣಿ ಬಿ.ಜಿ,ವಿಕಾಸ್ ಆರ್ ಸೇರಿದಂತೆ ಹಲವರಿದ್ದರು.

------------------

ಬಾಕ್ಸ್‌...

ಅ.20ಕ್ಕೆ ನಟ ರವಿಚಂದ್ರನ್‌ರಿಂದ ಸಾಂಸ್ಕೃತಿಕ ಸಂಭ್ರಮ

ಶಿವಮೊಗ್ಗ ದಸರಾ ಅಂಗವಾಗಿ ಅ.20 ರಂದು ಯುವ ದಸರಾ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ನಡೆಯಲಿದ್ದು, ಅಂದು ಸಂಜೆ 5 ಗಂಟೆಗೆ ಖ್ಯಾತ ನಟ ರವಿಚಂದ್ರನ್ ಅವರು ಭಾಗವಹಿಸಲಿದ್ದಾರೆ. ಯುವ ದಸರಾದಲ್ಲಿ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ರವಿಚಂದ್ರನ್ ಅವರ ಉಪಸ್ಥಿತಿಯಲ್ಲಿ ಮತ್ತಷ್ಟು ಮೆರುಗು ತರಲಿದೆ. ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಶಾಸಕ ಚನ್ನಬಸಪ್ಪ ತಿಳಿಸಿದರು.

---------------

ಬಾಕ್ಸ್‌...

ಪಾಲಿಕೆ ಕಟ್ಟಡಕ್ಕೆ ವಿಶೇಷ ಅಲಂಕಾರ

ಶಿವಮೊಗ್ಗ ದಸರಾ ಅಂಗವಾಗಿ ಮಹಾನಗರ ಪಾಲಿಕೆ ಕಟ್ಟಡಕ್ಕೆ ಹಾಗೂ ಆವರಣದಲ್ಲಿ ವಿಶೇಷ ಅಲಂಕಾರ ಮಾಡಲಾಗುತ್ತಿದೆ. ನಗರದ ಪ್ರಮುಖ ಸ್ಥಳಗಳಲ್ಲಿಯೂ ದಸರಾ ಸಂಭ್ರಮವನ್ನು ಬಿಂಬಿಸುವ ಅಲಂಕಾರಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಶಾಸಕ ಚನ್ನಬಸಪ್ಪ ಹೇಳಿದರು.

ಒಟ್ಟಾರೆ, ಈ ಬಾರಿ ಶಿವಮೊಗ್ಗ ದಸರಾವನ್ನು ಸಾಂಸ್ಕೃತಿಕ ವೈಭವ, ಧಾರ್ಮಿಕ ಆಚರಣೆ, ಮನರಂಜನೆ ಹಾಗೂ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ಆಚರಿಸಲು ಮಹಾನಗರ ಪಾಲಿಕೆ ಸಜ್ಜಾಗಿದೆ ಎಂದರು.

---------------------

ಕೋಟ್‌...

ಸುಮಾರು 2.10 ಕೋಟಿ ರು. ವೆಚ್ಚದಲ್ಲಿ ಒಟ್ಟು 11 ದಿನಗಳ ಕಾಲ ಶಿವಮೊಗ್ಗ ದಸರಾ ನಡೆಯಲಿದೆ. ರಾಜ್ಯ ಸರ್ಕಾರದಿಂದ 2 ಕೋಟಿ ರು. ಅನುದಾನ ಕೇಳಲಾಗಿತ್ತು. ಆದರೆ, ಸರ್ಕಾರದಿಂದ 50 ಲಕ್ಷ ರು. ಹಣ ಬಿಡುಗಡೆಯಾಗುತ್ತಿದೆ. ಉಳಿದ 1.60 ಕೋಟಿ ರು. ಮಹಾನಗರ ಪಾಲಿಕೆಯಿಂದಲೇ ಭರಿಸುವಂತೆ ತೀರ್ಮಾನಿಸಲಾಗಿದೆ. ಇದಲ್ಲದೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಶಾಸಕ ಎಸ್‌.ಎನ್‌.ಚನ್ನಬಸಪ್ಪ ಅವರು ಸರ್ಕಾರದಿಂದ ಹೆಚ್ಚುವರಿ ಅನುದಾನವನ್ನು ಕೊಡಿಸುವ ಭರವಸೆ ನೀಡಿದ್ದು, ಹೆಚ್ಚುವರಿ ಅನುದಾನ ಬಂದರೆ ಪಾಲಿಕೆಗೆ ಹೊರೆ ಕಡಿಮೆಯಾಗಲಿದೆ.

-ಮಾಯಣ್ಣಗೌಡ, ಮಹಾನಗರ ಪಾಲಿಕೆ ಆಯುಕ್ತ.

----------------------

ಪೊಟೋ: 06ಎಸ್ಎಂಜಿಕೆಪಿ05

ಶಿವಮೊಗ್ಗದ ಮಹಾನಗರ ಪಾಲಿಕೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿದರು.