ಸಾರಾಂಶ
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋ ಕಾಸ್ಟ್ ಸಭಾಂಗಣದಲ್ಲಿ ಆಯೋಜಿಸಿದ್ದ ರೈಸಿಂಗ್ ಶಿವಮೊಗ್ಗ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಕೃತಿಗೆ ಹಾನಿಯಾಗದ ರೀತಿ ಜಿಲ್ಲೆಯನ್ನು ಅಭಿವೃದ್ಧಿ ಮಾಡಬೇಕಾಗಿದೆ. ಜಿಲ್ಲೆಯಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಕೈಗಾರಿಕಾ ಭೂಮಿ ಕೊರತೆ ಇದೆ. ಇದನ್ನು ನಿರ್ಮಿಸುವುದಕ್ಕೆ ಜಿಲ್ಲಾ ಆಡಳಿತವು ಕೆಐಎಡಿಬಿ ಮತ್ತು ಸರ್ಕಾರ ಕೈಜೋಡಿಸಿದೆ ಎಂದು ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ಸಾರ್ವಜನಿಕರ ಭದ್ರತೆ ಮತ್ತು ಸುರಕ್ಷತೆ ವಿಚಾರದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಮಿತಿಮೀರಿರುವ ಡ್ರಗ್ಸ್ ಹಾವಳಿ ತಡೆಯಲು ಪೊಲೀಸ್ ಇಲಾಖೆಯು ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು.ನಗರದ ಬಡಾವಣೆಗಳಲ್ಲಿರುವ ಸಮಾಜಘಾತಕ ಶಕ್ತಿಗಳ ನಿಗ್ರಹಕ್ಕೆ ಇಲಾಖೆ ಶ್ರಮಿಸುತ್ತಿದೆ. ಸೈಬರ್ ಕ್ರೈಂನಲ್ಲಿ ವಿದ್ಯಾವಂತರು ಅತಿ ಹೆಚ್ಚು ಹಣ ಕಳೆದುಕೊಳ್ಳುತ್ತಿದ್ದು, ಜಾಗೃತಿ ವಹಿಸಬೇಕು. 1930 ಸಹಾಯವಾಣಿಗೆ ಕರೆ ಮಾಡಬೇಕು ಎಂದು ತಿಳಿಸಿದರು.ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಜಿಲ್ಲಾ ಕೈಗಾರಿಕಾ ಅಭಿವೃದ್ಧಿಯಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪಾತ್ರ ಗಣನೀಯವಾಗಿದೆ. ಶಿವಮೊಗ್ಗದಲ್ಲಿ ರಫ್ತು ಆಧಾರಿತ ಕೈಗಾರಿಕಾ ಉತ್ಪನ್ನದ ಅನೇಕ ಕೈಗಾರಿಕೆಗಳಿದ್ದು, ಕೈಗಾರಿಕಾ ವಸಾಹತು ಪ್ರದೇಶಗಳಿಗೆ ಮೂಲಸೌಕರ್ಯವನ್ನು ಹೆಚ್ಚಿಸಲು ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಶೀಘ್ರ ಪುನರಾರಂಭಿಸಬೇಕು. ಸಕ್ಕರೆ ಕಾರ್ಖಾನೆ, ಪಾಮ್ ಆಯಿಲ್ ಕಾರ್ಖಾನೆ ಮತ್ತು ಮೈಸೂರು ಮಹಾರಾಜರು ಹಿಂದೆ ಪ್ರಾರಂಭಿಸಿದ್ದ ಅನೇಕ ಕೈಗಾರಿಕೆಗಳನ್ನು ಹೊಸದಾಗಿ ಬಂಡವಾಳ ಹೂಡುವುದರ ಮೂಲಕ ಅವುಗಳ ಪುನರಾರಂಭಕ್ಕೆ ಸರ್ಕಾರ ಪ್ರಯತ್ನಿಸಬೇಕು ಎಂದರು.ಶಿವಮೊಗ್ಗ ತುಮಕೂರು ರಸ್ತೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಕೈಗಾರಿಕಾ ಅಭಿವೃದ್ಧಿಗಾಗಿ ಪ್ರಮುಖವಾಗಿ ಲ್ಯಾಂಡ್ ಸಮಸ್ಯೆ ಇದ್ದು, ಕೆಐಎಡಿಬಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಬೇಕು. ದೇವಕಾತಿ ಕೈಗಾರಿಕಾ ವಸಹಾತು ಪ್ರದೇಶದ ಸಮಸ್ಯೆಯನ್ನು ಬಗೆಹರಿಸಬೇಕು. ಬ್ರ್ಯಾಂಡ್ ಶಿವಮೊಗ್ಗವಾಗಿ ರೂಪುಗೊಳ್ಳಲು ಎಲ್ಲರೂ ಸಹ ಜಿಲ್ಲಾಡಳಿತದ ಜೊತೆಗೆ ಸಹಕರಿಸಬೇಕು ಎಂದು ಕೋರಿದರು.ಪರಿಸರವಾದಿ ಅಖಿಲೇಶ್ ಚಿಪ್ಲಿ, ಆರ್‌ಟಿಒ ಕಚೇರಿಯ ಅಧೀಕ್ಷಕ ರಾಮಚಂದ್ರಪ್ಪ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಖಜಾಂಚಿ ಆರ್.ಮನೋಹರ, ನಿರ್ದೇಶಕರಾದ ಗಣೇಶ್ ಅಂಗಡಿ, ಪ್ರದೀಪ್ ಎಲಿ, ವಿ.ಕೆ.ಜೈನ್, ಎಸ್.ಪಿ.ಶಂಕರ್, ಲಕ್ಷ್ಮೀದೇವಿ ಗೋಪಿನಾಥ್, ಮಾಜಿ ಅಧ್ಯಕ್ಷ ಡಿ.ಎಂ.ಶಂಕರಪ್ಪ, ಕೆ.ವಿ.ವಸಂತ್ ಕುಮಾರ್, ಅಶ್ವಥ್ ನಾರಾಯಣ್ ಶೆಟ್ಟಿ, ಸಾರ್ವಜನಿಕರು, ವಿವಿಧ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರುಗಳು, ವಾಣಿಜ್ಯ ಮತ್ತು ಕೈಗಾರಿಕಾ ಉದ್ಯಮಿಗಳು ಇದ್ದರು.