ಸಾರಾಂಶ
ನಾನು ಸಚಿವ ಮಧು ಬಂಗಾರಪ್ಪ ಅವರ ಆಪ್ತ ಸಹಾಯಕ. ನಿಮಗೆ ವರ್ಗಾವಣೆ ಮಾಡಿಸಿಕೊಡುತ್ತೇನೆ ಎಂದು ಸರ್ಕಾರಿ ಅಧಿಕಾರಿಗಳನ್ನೇ ನಂಬಿಸಿ ಅವರಿಂದ ಹಣ ಪಡೆದು ವಂಚಿಸುತ್ತಿದ್ದ ವ್ಯಕ್ತಿ ಶಿವಮೊಗ್ಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಶಿವಮೊಗ್ಗ: ನಾನು ಸಚಿವ ಮಧು ಬಂಗಾರಪ್ಪ ಅವರ ಆಪ್ತ ಸಹಾಯಕ. ನಿಮಗೆ ವರ್ಗಾವಣೆ ಮಾಡಿಸಿಕೊಡುತ್ತೇನೆ ಎಂದು ಸರ್ಕಾರಿ ಅಧಿಕಾರಿಗಳನ್ನೇ ನಂಬಿಸಿ ಅವರಿಂದ ಹಣ ಪಡೆದು ವಂಚಿಸುತ್ತಿದ್ದ ವ್ಯಕ್ತಿ ಶಿವಮೊಗ್ಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಬೆಂಗಳೂರಿನಲ್ಲಿ ವಾಸವಾಗಿರುವ ಮೂಲತಃ ಮೈಸೂರಿನ ನಿವೃತ್ತ ತಹಸೀಲ್ದಾರ್ ಒಬ್ಬರ ಪುತ್ರ ರಘುನಾಥ್ ಎಂಬಾತ ರಾಜ್ಯ ಸರ್ಕಾರಿ ನೌಕರರನ್ನು ಟಾರ್ಗೆಟ್ ಮಾಡುತ್ತಿದ್ದ ಖತರ್ನಾಕ್ ಅಸಾಮಿ.ಈತನ ವಂಚನೆಗೆ ಒಳಗಾದವರು ರಾಜ್ಯದ ವಿವಿಧಡೆ ಇದ್ದಾರೆ. ಬೆಂಗಳೂರಿನಲ್ಲಿ ನಾಲ್ಕು, ಶಿರಸಿ ಹಾಗೂ ಶಿವಮೊಗ್ಗದಲ್ಲಿ ತಲಾ ಒಂದು ವಂಚನೆ ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ.
ಶಿವಮೊಗ್ಗದಲ್ಲಿ ಸಚಿವ ಮಧು ಬಂಗಾರಪ್ಪನವರ ಆಪ್ತ ಸಹಾಯಕ ಎಂದು ಹೇಳಿಕೊಂಡಿದ್ದ ರಘುನಾಥ್ ವಂಚನೆಗೆ ಮುಂದಾಗಿದ್ದ. ವರ್ಗಾವಣೆ ಮಾಡಿಸಿಕೊಡುವುದಾಗಿ ನಂಬಿಸಿ ಸರ್ಕಾರಿ ಅಧಿಕಾರಿಗಳಿಂದ ವಸೂಲಿ ಕೂಡ ಮಾಡಿದ್ದ. ಇನ್ನೇನು ಬಾರಿ ಮೊತ್ತದ ಹಣವನ್ನು ಈತನಿಗೆ ಕೊಡಬೇಕು ಎನ್ನುವಷ್ಟರಲ್ಲಿ ಅಧಿಕಾರಿಗಳಿಗೂ ಡೌಟ್ ಶುರುವಾಗಿದೆ. ತಕ್ಷಣವೇ ಸ್ಥಳೀಯ ಕಾಂಗ್ರೆಸ್ ಮುಖಂಡರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ.ಸಚಿವರ ಹೆಸರಿನಲ್ಲಿ ವಂಚಕನ ಈ ನವರಂಗಿ ಆಟ ತಿಳಿದ ಕೂಡಲೇ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಯುವ ಘಟಕದ ಗಿರೀಶ್ ಎಂಬುವರು ನೀಡಿದ ದೂರಿನ ಹಿನ್ನೆಲೆ ಈತನ ವಂಚನೆ ಜಾಲ ಬಯಲಾಗಿದೆ. ಸಚಿವ ಮಧು ಬಂಗಾರಪ್ಪ ಹೆಸರಿನಲ್ಲಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಜಯನಗರ ಠಾಣೆ ಪೊಲೀಸರು ಈತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಈತ ಮೊದಲು ಸರ್ಕಾರದ ವಿವಿಧ ಇಲಾಖೆಗಳಿಲ್ಲ ಖಾಲಿ ಇರುವ ಹುದ್ದೆಗಳು, ಯಾರು ಎಲ್ಲಿಗೆ ವರ್ಗಾವಣೆ ಬಯಸುತ್ತಿದ್ದಾರೆ ಎಂಬುವುದರ ಮಾಹಿತಿ ಪಡೆಯುತ್ತಿದ್ದ. ಬಳಿಕ ಅವರಿಗೆ ಫೋನ್ ಮಾಡಿ ನಿಮ್ಮನ್ನು ವರ್ಗಾವಣೆ ಮಾಡಿಸುತ್ತೇನೆ ಎಂದು ರೇಟ್ ಫಿಕ್ಸ್ ಮಾಡುತ್ತಿದ್ದ. ಡಿಜಿಟಲ್ ವ್ಯವಹಾರದ ಮೂಲಕ ಒಂದಷ್ಟು ಹಣ ಪಡೆಯುತ್ತಿದ್ದ. ಹಣ ಕೊಟ್ಟವರು ವರ್ಗಾವಣೆ ಮಾಡುವಂತೆ ಒತ್ತಡ ಹೇರಿದ ಬಳಿಕ ಫೋನ್ ನಂಬರ್ ಬದಲಾಯಿಸುತ್ತಿದ್ದ. ವಂಚಕ ರಘುನಾಥ್ ವಿವಿಧ ಇಲಾಖೆಯ ಸರ್ಕಾರಿ ನೌಕರರಿಗೆ ವಂಚನೆ ಮಾಡಿರುವ ಸಾಧ್ಯತೆಗಳಿವೆ. ಹೀಗಾಗಿ ಈತನನ್ನು ತನಿಖೆ ಒಳಪಡಿಸಿ ಮಾಹಿತಿ ಪಡೆಯಲಾಗುತ್ತಿದೆ. ಆತನಿಂದ ವಂಚನೆಗೊಳಗಾದವರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.