ಎಲ್ಲೆಲ್ಲೂ ಶಿವನಾಮ ಸ್ಮರಣೆ; ಶ್ರದ್ಧಾಭಕ್ತಿಯ ಮಹಾಶಿವರಾತ್ರಿ ಆಚರಣೆ

| Published : Feb 27 2025, 12:33 AM IST

ಸಾರಾಂಶ

ಶಿವಭಕ್ತರಿಗೆ ಅತ್ಯಂತ ಪ್ರಿಯವಾದ ದಿನವೆನಿಸಿದ ಮಹಾಶಿವರಾತ್ರಿಯನ್ನು ಜಿಲ್ಲಾದ್ಯಂತ ಶ್ರದ್ಧಾಭಕ್ತಿಯಿಂದ ಬುಧವಾರ ಆಚರಿಸಲಾಯಿತು.

ಶಿವಪೂಜೆ, ಶಿವಭಜನೆ, ಶಿವಕೀರ್ತನೆ, ಶಿವಧ್ಯಾನ । ದೇವಾಲಯಗಳಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ, ವಿಶೇಷ ಪೂಜೆ

ಕನ್ನಡಪ್ರಭವಾರ್ತೆ ಬಳ್ಳಾರಿ

ಶಿವಭಕ್ತರಿಗೆ ಅತ್ಯಂತ ಪ್ರಿಯವಾದ ದಿನವೆನಿಸಿದ ಮಹಾಶಿವರಾತ್ರಿಯನ್ನು ಜಿಲ್ಲಾದ್ಯಂತ ಶ್ರದ್ಧಾಭಕ್ತಿಯಿಂದ ಬುಧವಾರ ಆಚರಿಸಲಾಯಿತು.

ಶಿವರಾತ್ರಿ ಹಿನ್ನೆಲೆ ದೇವಸ್ಥಾನಗಳಲ್ಲಿ ಶಿವನಾಮಸ್ಮರಣೆ ಮೊಳಗಿದರೆ, ಮನೆ ಮನೆಗಳಲ್ಲೂ ಶಿವನ ಪೂಜಾ ಕೈಂಕರ್ಯಗಳು ನಡೆದವು. ಶಿವಪೂಜೆ, ಶಿವಭಜನೆ, ಶಿವಕೀರ್ತನೆ, ಶಿವಧ್ಯಾನ, ಶಿವತತ್ವ ಆಚರಣೆಯ ಜೊತೆಗೆ ಓಂನಮಃಶಿವಾಯ ಎಂಬ ಶಿವಪಂಚಾಕ್ಷರಿ ಮಹಾಮಂತ್ರ ಪಠಣಗೊಂಡವು.

ಶಿವರಾತ್ರಿ ಹಿನ್ನೆಲೆ ನಗರದ ಪ್ರಮುಖ ಶಿವಾಲಯಗಳು ಭಕ್ತರಿಂದ ಭರ್ತಿಯಾಗಿದ್ದವು. ನಗರದ ಆರಾಧ್ಯದೈವ ಶ್ರೀಕೋಟೆ ಮಲ್ಲೇಶ್ವರಸ್ವಾಮಿ, ಪಾರ್ವತಿ ನಗರದ ಅನಾದಿಲಿಂಗೇಶ್ವರ, ಬೆಂಗಳೂರು ರಸ್ತೆಯಲ್ಲಿನ ನಗರೇಶ್ವರಸ್ವಾಮಿ, ತೇರುಬೀದಿಯ ಶ್ರೀನೀಲಕಂಠೇಶ್ವರಸ್ವಾಮಿ, ಕಪ್ಪಗಲ್ ರಸ್ತೆಯ ಶ್ರೀ ಮದ್ದಾನೇಶ್ವರ ಸ್ವಾಮಿ ಸೇರಿದಂತೆ ವಿವಿಧ ಶಿವನ ದೇವಾಲಯಗಳಲ್ಲಿ ಪೂಜಾ, ವಿಧಿವಿಧಾನಗಳು ಜರುಗಿದವು. ಮಹಿಳೆಯರು, ಮಕ್ಕಳು, ವೃದ್ಧರು ಶಿವಪಂಚಾಕ್ಷರಿ ಮಂತ್ರ ಪಠಿಸುತ್ತಾ ಉಪವಾಸ ಜಾಗರಣೆ ಮಾಡಿದರು.

ಬೆಳಗಿನ ಜಾವದಿಂದಲೇ ಶಿವನಿಗೆ ವಿಶೇಷ ಪೂಜೆ:

ಬೆಳಿಗ್ಗೆಯಿಂದಲೇ ಭಕ್ತರು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುವ ದೃಶ್ಯಗಳು ಕಂಡು ಬಂದವಾದರೂ ಸಂಜೆ ವೇಳೆಗೆ ಹೆಚ್ಚಿನ ಸಂಖ್ಯೆಯಲ್ಲಿ ಶಿವಭಕ್ತರು ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆದರು.

ಶಿವರಾತ್ರಿ ಹಬ್ಬಕ್ಕೆಂದೇ ವಿಶೇಷವಾಗಿ ಸಜ್ಜುಗೊಂಡಿದ್ದ ದೇವಾಲಯಗಳಲ್ಲಿ ಬೆಳಗಿನ ಜಾವದಿಂದಲೇ ವಿಶೇಷ ಪೂಜೆ ಶುರುಗೊಂಡವು. ಶಿವನಲಿಂಗಕ್ಕೆ ರುದ್ರಾಭಿಷೇಕ, ಬಿಲ್ವಾರ್ಚನೆ ಮತ್ತಿತರ ಪೂಜಾ ವಿಧಾನಗಳು ನಡೆದವು. ಶಿವನಿಗೆ ಪ್ರಿಯವಾದ ಡಮರುಗ, ಜಾಗಟೆಗಳ ಸದ್ದು ದೇವಸ್ಥಾನಗಳಲ್ಲಿ ಮಾರ್ದನಿಸಿದವು.

ಗಣಿನಗರಿ ಬಳ್ಳಾರಿಯಲ್ಲಿ ಮಂಗಳವಾರ ಸಂಜೆಯಿಂದಲೇ ಹಬ್ಬದ ಸಡಗರ ಕಳೆಗಟ್ಟಿತ್ತು. ಬುಧವಾರ ಜರುಗುವ ಮಹಾಶಿವರಾತ್ರಿಗೆ ಅಗತ್ಯ ಸಿದ್ಧತೆಗಳಲ್ಲಿ ತೊಡಗಿಸಿಕೊಂಡದ್ದರು. ಪೂಜಾ ಸಾಮಗ್ರಿಗಳು, ಹೂವು, ಹಣ್ಣುಗಳ ಖರೀದಿ ಭರಾಟೆಯಿಂದಾಗಿ ನಗರದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು.

ಶಿವ ದೇವಾಲಯಗಳ ಬಳಿ ಭಕ್ತರ ದಂಡು:

ಇಲ್ಲಿನ ಕೋಟೆ ಶ್ರೀ ಮಲ್ಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಸಾವಿರಾರು ಭಕ್ತರು ತೆರಳಿ ದರ್ಶನ ಪಡೆದರು. ಭಕ್ತರ ನಿಯಂತ್ರಣಕ್ಕೆ ಹೆಚ್ಚಿನ ಪೊಲೀಸ್ ಬಂದೋಬಸ್ತ್‌ ಜೊತೆಗೆ ಬ್ಯಾರಿಕೇಡ್‌ಗಳ ಮೂಲಕ ಸಾಲಾಗಿ ಬಂದು ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿತ್ತು. ಭಕ್ತ ಸಮೂಹ ನಿಯಂತ್ರಿಸಲು ಪೊಲೀಸರು ಪರದಾಡಿದರು.

ಶಿವರಾತ್ರಿ ಅಂಗವಾಗಿ ಇಲ್ಲಿನ ಪಾರ್ವತಿ ನಗರದ ಅನಾದಿಲಿಂಗೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಕಲಬುರಗಿ ಶರಣಬಸವೇಶ್ವರರ ಪುರಾಣ ಬುಧವಾರ ಸಂಜೆ ಮಹಾಮಂಗಳಗೊಂಡಿತು. ಹಬ್ಬದ ಹಿನ್ನೆಲೆ ನಗರದ ಸಂಚಾರ ದಟ್ಟಣೆ ಇಳಿಮುಖಗೊಂಡಿತ್ತು. ಇಲ್ಲಿನ ವಾಣಿಜ್ಯ ಕೇಂದ್ರಗಳಾದ ಬೆಂಗಳೂರು ರಸ್ತೆ, ಬ್ರಾಹ್ಮಣಬೀದಿ, ತೇರುಬೀದಿ, ಗ್ಲಾಸ್ ಬಜಾರ್, ಟ್ಯಾಂಕ್‌ಬಂಡ್ ರಸ್ತೆ, ಇನ್‌ಫ್ಯಾಂಟ್ರಿ ರಸ್ತೆಗಳು ಜನರಿಲ್ಲದೆ ಬಿಕೋ ಎಂದವು. ಬಹುತೇಕರು ಹಬ್ಬದ ಆಚರಣೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಹೆಚ್ಚಿನ ವ್ಯಾಪಾರ ವಹಿವಾಟು ಕಂಡು ಬರಲಿಲ್ಲ. ಶಿವರಾತ್ರಿ ಹಿನ್ನೆಲೆ ಇಲ್ಲಿನ ಪಾರ್ವತಿನಗರದ ಈಶ್ವರೀಯ ವಿಶ್ವವಿದ್ಯಾಲಯದಿಂದ ಶಿವಲಿಂಗಗಳ ಮೆರವಣಿಗೆ ನಡೆಯಿತು. ವಿವಿಧ ಜಾನಪದ ಕಲಾ ತಂಡಗಳು ಹಾಗೂ ಮಂಗಳವಾದ್ಯಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಶಿವಘೋಷ, ಶಿವಸ್ಮರಣೆಯೊಂದಿಗೆ ಮೆರವಣಿಗೆ ಸಾಗಿಬಂತು. ವಿಶ್ವವಿದ್ಯಾಲಯದ ನೂರಾರು ಯೋಗ ಸಾಧಕರು ಪಾಲ್ಗೊಂಡಿದ್ದರು.

ನಗರದ ವಿವಿಧ ಸಂಘಟನೆಗಳು ಶಿವಸ್ಮರಣೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ್ದವು. ಇಡೀ ರಾತ್ರಿ ಶಿವನಿಗೆ ಸಂಬಂಧಿಸಿದ ಭಕ್ತಿಗೀತೆಗಳನ್ನು ಹಾಡಿ ಗಾಯಕರು ಮನರಂಜಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಶಿವರಾತ್ರಿ ಸಂಭ್ರಮ:

ಗ್ರಾಮೀಣ ಪ್ರದೇಶಗಳಲ್ಲೂ ಶಿವಸ್ಮರಣೆಯ ಶಿವರಾತ್ರಿ ಆಚರಣೆ ನಡೆದವು. ಈಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ಜರುಗಿದವು. ನಗರ ಹೊರ ವಲಯದ ಶ್ರೀಮಹಾದೇವತಾತಮಠ, ಮರಿಸ್ವಾಮಿಮಠ, ಚೇಳ್ಳಗುರ್ಕಿ ಎರ್ರಿಸ್ವಾಮಿ ಮಠ, ಸಿರುಗುಪ್ಪ ತಾಲೂಕಿನ ಹಳೆಕೋಟೆ ಹಾಗೂ ದರೂರು ವೀರಭದ್ರೇಶ್ವರ ದೇವಾಲಯಗಳು, ಸಂಡೂರಿನ ಶ್ರೀಕುಮಾರಸ್ವಾಮಿ, ಕುರುಗೋಡು ದೊಡ್ಡಬಸವೇಶ್ವರ, ಕಂಪ್ಲಿಯ ಬಸವೇಶ್ವರ ದೇವಸ್ಥಾನಗಳಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ಪೂಜಾ ವಿಧಿವಿಧಾನಗಳು ಜರುಗಿದವು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಶಿವಲಿಂಗ ದರ್ಶನ ಪಡೆದರು. ಕರ್ನಾಟಕಾಂಧ್ರ ಗಡಿಭಾಗದಲ್ಲಿರುವ ಹಿರೇಹಾಳು ಗವಿಸಿದ್ಧೇಶ್ವರಸ್ವಾಮಿ ದೇವಸ್ಥಾನಕ್ಕೆ ನಗರದಿಂದ ಸಾವಿರಾರು ಜನರು ತೆರಳಿ ಪೂಜೆ ಸಲ್ಲಿಸಿದರು. ಹಬ್ಬದ ಹಿನ್ನೆಲೆ ಆಂಧ್ರಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಂದ ನೂರಾರು ಜನರು ಪಾದಯಾತ್ರೆಯ ಮೂಲಕ ತೆರಳಿದ್ದು, ಬುಧವಾರ ಶ್ರೀಶೈಲ ತಲುಪಿ, ದೇವರ ದರ್ಶನ ಪಡೆದರು.