ಶಿವಾನಂದ ಕೌಜಲಗಿ 86ನೇ ಜನ್ಮದಿನಾಚರಣೆ ಸಂಭ್ರಮ

| Published : Oct 11 2025, 01:00 AM IST

ಸಾರಾಂಶ

ಮಾಜಿ ಸಂಸದರು, ಸಚಿವರು ಹಾಗೂ ಮುತ್ಸದ್ಧಿ ರಾಜಕಾರಣಿ ಶಿವಾನಂದ ಕೌಜಲಗಿಯವರ 86ನೇ ಜನ್ಮ ದಿನವನ್ನು ಅವರ ಅಭಿಮಾನಿ ಬಳಗ, ಕುಟುಂಬಸ್ಥರು ಮನೆಯಲ್ಲಿ ಸರಳವಾಗಿ ಆಚರಿಸಿ, ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಮಾಜಿ ಸಂಸದರು, ಸಚಿವರು ಹಾಗೂ ಮುತ್ಸದ್ಧಿ ರಾಜಕಾರಣಿ ಶಿವಾನಂದ ಕೌಜಲಗಿಯವರ 86ನೇ ಜನ್ಮ ದಿನವನ್ನು ಅವರ ಅಭಿಮಾನಿ ಬಳಗ, ಕುಟುಂಬಸ್ಥರು ಮನೆಯಲ್ಲಿ ಸರಳವಾಗಿ ಆಚರಿಸಿ, ಸಂಭ್ರಮಿಸಿದರು.

ಈ ವೇಳೆ ಮಾಜಿ ಸಚಿವ ಶಿವಾನಂದ ಕೌಜಲಗಿ ಮಾತನಾಡಿ, ನನ್ನ ಸಂಸದ, ಮುಖ್ಯ ಸಚೇತಕ ಅಧಿಕಾರ ಅವಧಿಯಲ್ಲಿ ಬೈಲಹೊಂಗಲ ನಾಡಿನ ಆರ್ಥಿಕ ಅಭಿವೃದ್ಧಿಗಾಗಿ ಹಾಗೂ ಈ ಭಾಗದ ಧಾರ್ಮಿಕ ಕ್ಷೇತ್ರಗಳಿಗೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡ ತೃಪ್ತಿ ನನಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಅಂದು ಪ್ರಧಾನಿ ಎಚ್.ಡಿ.ದೇವೆಗೌಡ ಅವರೊಂದಿಗೆ ಚರ್ಚಿಸಿ ಕನ್ನಡದಲ್ಲಿ ಕಲಾಪಗಳಲ್ಲಿ ಚರ್ಚೆ ಮಾಡಲು ನಿರ್ಣಯ ಕೈಗೊಂಡು ಅವಕಾಶ ಕಲ್ಪಿಸಿಕೊಟ್ಟಿದ್ದು ನನಗೆ ಸಂತಸ ನೀಡಿದೆ. ಕಾಯಕಯೋಗಿ ನಾಗನೂರು ಡಾ.ಶಿವಬಸವ ಮಹಾಸ್ವಾಮೀಜಿಗಳು ಧಾರ್ಮಿಕ, ಶೈಕ್ಷಣಿಕ ಸೇವೆಯನ್ನು ಯಾರೂ ಮಾಡದ ಸಂದರ್ಭದಲ್ಲಿ ಮಾಡಿದ್ದಾರೆ. ಅಂತಹ ಶ್ರೀಗಳಿಗೆ ಮರಣೋತ್ತರ ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ವಿನಂತಿಸಿದ್ದೇನೆ ಇದನ್ನು ಸಾಕಾರಗೊಳಿಸಬೇಕೆಂದರು.

₹149 ಕೋಟಿ ವೆಚ್ಚದಲ್ಲಿ ಕ್ಷೇತ್ರದ ಎಂಟು ಏತನೀರಾವರಿ ಯೋಜನೆ ಪುನಶ್ಚೇತನವಾದರೆ 83 ಹಳ್ಳಿಗಳ ಜಮೀನುಗಳಿಗೆ ಶೀಘ್ರ ನೀರಾವರಿ ಯೋಜನೆ ಪ್ರಾರಂಭವಾಗಲಿದೆ. ಅಲ್ಲದೆ ಮುಳುಗಡೆಯಾದ ಜಮೀನುಗಳ ಖಾಲಿ ಉಳಿದ ಈ ಪ್ರದೇಶದಲ್ಲಿ ಸೋಲಾರ್ ಪಾರ್ಕ್ ನಿರ್ಮಿಸುವ ಯೋಜನೆ ಜಾರಿಗೆ ಬರುವ ಸಾಧ್ಯತೆ ಇದೆ. ಬರುವ ಆದಾಯದಲ್ಲಿ ಯೋಜನೆ ಜಾರಿ ಮಾಡುವ ವ್ಯಕ್ತಿಗೆ ಅರ್ಧಭಾಗ ಹೋದರೆ, ಇನ್ನರ್ಧ ಜಮೀನು ಕಳೆದುಕೊಂಡ ರೈತ ಮತ್ತು ಸರ್ಕಾರ ಸಮನಾಗಿ ಹಂಚಿಕೊಳ್ಳುವ ವಿಶಿಷ್ಟ ಯೋಜನೆ ಇದಾಗಿದೆ ಎಂದರು. ನಾನು ಸಂಸದರಾಗಿದ್ದ ಅವಧಿಯಲ್ಲಿ ಅಂದಿನ ಪ್ರಧಾನಿ ಎಚ್.ಡಿ.ದೇವೆಗೌಡರಿಂದ ಕಿತ್ತೂರು-ಧಾರವಾಡ ವಾಯಾ ಬೈಲಹೊಂಗಲ, ಮುರಗೋಡ, ಶ್ರೀ ಕ್ಷೇತ್ರ ಸೊಗಲ, ಶ್ರೀ ಕ್ಷೇತ್ರ ಯಲ್ಲಮ್ಮನಗುಡ್ಡ ಈ ಹೊಸ ರೇಲ್ವೆ ಲೈನ್‌ಗೆ ಶಿಲಾನ್ಯಾಸ ನೆರವೇರಿಸಲಾಗಿತ್ತು. ಸರ್ವೇ ಕಾರ್ಯಕ್ಕೆ ಒಪ್ಪಿಗೆ ನೀಡಿದ್ದರು. ಇಂದು ಈ ಮಾರ್ಗ ಬದಲಿಸಿ ಬೆಳಗಾವಿ ಕಿತ್ತೂರು ಧಾರವಾಡ ಮಾರ್ಗ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಕೇಂದ್ರ ಸರ್ಕಾರ ಇದನ್ನು ಪುನರ ಪರಿಶೀಲಿಸಿ ಮಾಜಿ ಪ್ರಧಾನಿ ಅವರು ಶಿಲಾನ್ಯಾಸ ಕೈಕೊಂಡ ಕಾಮಗಾರಿಗೆ ಗೌರವ ನೀಡಿ ಪ್ರಾರಂಭಿಸಬೇಕು ಎಂದರು.

ಈ ವೇಳೆ ಮುಖಂಡರಾದ ಮಹೇಶ ಬೆಲ್ಲದ, ಮಹಾಂತೇಶ ಕಳ್ಳಿಬಡ್ಡಿ ಮಾತನಾಡಿ, ಕಳಂಕರಹಿತ, ಅಜಾತಶತ್ರು ರಾಜಕಾರಣದ ಮೂಲಕ ಜನಸೇವೆಯನ್ನು ಮಾಡುತ್ತಾ ಜನತೆಯ ಮನ ಗೆದ್ದಿರುವ ಕೌಜಲಗಿ ಕುಟುಂಬ ಇಂದಿನ ರಾಜಕಾರಣಕ್ಕೆ ಮಾದರಿಯಾಗಿದೆ. ಮಾಜಿ ಸಚಿವ ದಿ.ಹೇಮಪ್ಪ ಕೌಜಲಗಿ ಅವರ ಅಧಿಕಾರ ಅವಧಿಯಲ್ಲಿ ಕೈಕೊಂಡ ಮಲಪ್ರಭಾ ಯೋಜನೆಯ ನವಿಲುತೀರ್ಥ ಡ್ಯಾಂ ಕಾಮಗಾರಿ ಬೆಳಗಾವಿ, ಧಾರವಾಡ, ಬಾಗಲಕೋಟ ವಿಜಯಪೂರ ಜಿಲ್ಲೆಯ ರೈತರಿಗೆ ನೀರಾವರಿ ಮೂಲಕ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಆಸರೆಯಾಗಿದೆ. ಎಂಟು ಏತ ನೀರಾವರಿ ಯೋಜನೆಗಳು ರೈತರಿಗೆ ವರದಾನವಾಗಿ, ಕೌಜಲಗಿ ಕುಟುಂಬ ರೈತರ ಮನದಲ್ಲಿ ನೆಲೆಯೂರುವಂತೆ ಮಾಡಿದೆ ಎಂದರು.

ಶಿವಾನಂದ ಕೌಜಲಗಿ ಅವರು ಶಿಕ್ಷಣ, ಸಾಮಾಜಿಕ, ಧಾರ್ಮಿಕ, ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಯೊಂದಿಗೆ ಅನೇಕ ಮಠಮಾನ್ಯಗಳಿಗೆ ಅನುಪಮ ಸೇವೆ ಸಲ್ಲಿಸಿದ್ದಾರೆ. ಮತಕ್ಷೇತ್ರದಾದ್ಯಂತ ಪ್ರೌಢ ಶಾಲೆಗಳು, ಕಾಲೇಜುಗಳು ಸ್ಥಾಪಿಸಿದ್ದರಿಂದ ಶೈಕ್ಷಣಿಕ ಮೈಲಿಗಲ್ಲನ್ನು ಕ್ಷೇತ್ರ ಕಂಡಿದೆ. ಕೊಡುಗೆ ನೀಡಿ ಸರ್ವಧರ್ಮಿಯರ ಅಭಿವೃದ್ಧಿಗೆ ಶ್ರಮಿಸಿ ಶಿವಾನಂದ ಕೌಜಲಗಿ ಅವರು ಜನರ ಮನದಲ್ಲಿ ಅಚ್ಚಳಿಯದಂತೆ ಉಳಿದಿದ್ದಾರೆ. ಇಳಿ ವಯಸ್ಸಿನಲ್ಲೂ ಜನರ ಕಲ್ಯಾಣಕ್ಕೆ ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಮಾರ್ಗದರ್ಶನ ನೀಡುತ್ತಿರುವುದು ಅವರ ಜನಸೇವೆಯ ಪ್ರತೀಕವಾಗಿದೆ ಎಂದರು.

ಮಾಜಿ ಸಂಸದ ಶಿವಾನಂದ ಕೌಜಲಗಿ ಅವರ ಅಭಿಮಾನಿಗಳು ಹೂಮಾಲೆ, ಹೂಗೂಚ್ಛ ನೀಡಿ, ಶುಭ ಕೋರಿದರು. ಅಭಿಮಾನಿ ಬಳಗದವರು ಕೇಕ್ ಕತ್ತರಿಸಿ ಸಂಭ್ರಮಪಟ್ಟರು.

ಪಂಚಪೀಠಗಳ ಬಾಳೆಹೊನ್ನೂರು, ಉಜ್ಜನಿಯ, ಕೇದಾರ, ಶ್ರೀಶೈಲ, ಕಾಶಿ ಶ್ರೀಗಳು, ಮುರಗೋಡ, ಮಲ್ಲಾಪೂರ, ಸಂಗೊಳ್ಳಿ ಶ್ರೀಗಳು, ದೂರವಾಣಿ ಮೂಲಕ ಶುಭ ಕೋರಿ, ಆಶೀರ್ವದಿಸಿದರು. ರಾಜ್ಯ, ರಾಷ್ಟ್ರದ ಹಲವು ರಾಜಕೀಯ ನಾಯಕರು, ಅಧಿಕಾರಿಗಳು, ಮಠಾಧೀಶರು, ನೌಕರರು, ಆಪ್ತರು ಶುಭ ಹಾರೈಸಿದರು. ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾವಚಿತ್ರ ಹಾಕಿ ಶುಭಾಶಯ ಕೋರಿದರು. ಮತಕ್ಷೇತ್ರದ ವಿವಿಧ ಮಠಮಾನ್ಯಗಳಲ್ಲಿ, ದೇವಸ್ಥಾನಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸುವ ಮೂಲಕ ತಮ್ಮ ನೆಚ್ಚಿನ ನಾಯಕರಿಗೆ ದೇವರು ಆಯುಷ್ಯ, ಆರೋಗ್ಯ ಭಾಗ್ಯ ನೀಡಿ ಹಾರೈಸಲೆಂದು ಪ್ರಾರ್ಥಿಸಿದರು. ಕುಟುಂಬಸ್ಥರೊಂದಿಗೆ ಮನೆಗೆ ಬಂದ ಎಲ್ಲ ಅಭಿಮಾನಿಗಳು, ಕಾರ್ಯಕರ್ತರನ್ನು ಆತ್ಮೀಯವಾಗಿ ಬರಮಾಡಿಕೊಂಡು ಉಪಹಾರ ಬಡಿಸಿದರು. ಕೌಜಲಗಿ ಕುಟುಂಬದ ಮೇಲೆ ಪ್ರೀತಿ, ಗೌರವ, ಅಭಿಮಾನ ತೋರಿದ ಜನತೆಗೆ ಅವರು ಕೃತಜ್ಞತೆ ಸಲ್ಲಿಸಿದರು.ಶಿವಾನಂದ ಕೌಜಲಗಿ ಅವರ ಧರ್ಮಪತ್ನಿ ಸುಶೀಲಾ, ಪುತ್ರ ಬಸವರಾಜ ಕೌಜಲಗಿ, ಸೊಸೆಯಂದಿರು, ಮೊಮ್ಮಕ್ಕಳು, ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಹುಟ್ಟು ಹಬ್ಬದ ಸಂಭ್ರಮ ಸವಿದರು. ತಹಸೀಲ್ದಾರ್‌ ಹಣಮಂತ ಶಿರಹಟ್ಟಿ, ವೇ.ಮೂ.ಮಹಾಂತೇಶ ಆರಾದ್ರಿಮಠ, ಡಾ. ಪ್ರಭಾಕರ ಕೋರೆ ಪುತ್ರಿ ಡಾ. ಪ್ರೀತಿ ದೊಡವಾಡ, ಅನೀಲ ಇಂಚಲ, ಶಂಕರಗೌಡ ಪಾಟೀಲ ವಕೀಲರಾದ ಆರ್.ಎಸ್.ಮಮದಾಪೂರ, ಮಡಿವಾಳಪ್ಪ ಭಟ್ಟಿ, ಉಮೇಶ ಬೊಳತ್ತಿನ, ವೀರುಪಾಕ್ಷ ಕೌಜಲಗಿ, ಬಸವರಾಜ ಕನ್ನೂರ, ಶಿವು ಹಂಪನ್ನವರ, ಬಿ.ಎಂ. ಚಿಕ್ಕನಗೌಡರ, ಆಪ್ತ ಸಹಾಯಕರಾದ ಶಿವಲಿಂಗ ಪರಂಡಿ, ಶ್ರೀಧರ ಶೆಟ್ಟರ ಇತರರು ಇದ್ದರು.