ಇಂದಿನಿಂದ ಮಲೆ ಮಹದೇಶ್ವರಬೆಟ್ಟಕ್ಕೆ ಶಾಂತಿ ಸೌಹಾರ್ದ ಸದ್ಬಾವನಾ ಪಾದಯಾತ್ರೆ

| Published : Dec 30 2024, 01:01 AM IST

ಇಂದಿನಿಂದ ಮಲೆ ಮಹದೇಶ್ವರಬೆಟ್ಟಕ್ಕೆ ಶಾಂತಿ ಸೌಹಾರ್ದ ಸದ್ಬಾವನಾ ಪಾದಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಜಗತ್ತಿನ ಜೀವ ಸಂಕುಲಗಳಿಗೆ ಒಳಿತನ್ನು ಬಯಸಿ ಪಾದಯಾತ್ರೆ ನಡೆಸುತ್ತಿದ್ದು, ಈ ಸಂಧರ್ಭದಲ್ಲಿ ಸ್ವಚ್ಛತೆಯ ಬಗ್ಗೆ ಜನರಲ್ಲಿ ಸಾಮಾಜಿಕ ಪ್ರಜ್ಞೆ ಮೂಡಿಸಲಾಗುತ್ತದೆ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಹುಣಸೂರು ತಾಲೂಕು ಗಾವಡಗೆರೆ ಗುರುಲಿಂಗ ಜಂಗಮ ಮಠದಿಂದ ಮಲೆ ಮಹದೇಶ್ವರಬೆಟ್ಟಕ್ಕೆ ಸಾವಿರಾರು ಭಕ್ತಾದಿಗಳ ಜತೆಗೂಡಿ ಡಿ.30 ರಿಂದ ಜ. 5 ರವರೆಗೆ 9ನೇ ವರ್ಷದ ಶಾಂತಿ ಸೌಹಾರ್ದ ಮತ್ತು ಸದ್ಬಾವನಾ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಶ್ರೀ ನಟರಾಜ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಶಿವಾನುಭವ ಕಲ್ಯಾಣ ಮಂಟಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗತ್ತಿನ ಜೀವ ಸಂಕುಲಗಳಿಗೆ ಒಳಿತನ್ನು ಬಯಸಿ ಪಾದಯಾತ್ರೆ ನಡೆಸುತ್ತಿದ್ದು, ಈ ಸಂಧರ್ಭದಲ್ಲಿ ಸ್ವಚ್ಛತೆಯ ಬಗ್ಗೆ ಜನರಲ್ಲಿ ಸಾಮಾಜಿಕ ಪ್ರಜ್ಞೆ ಮೂಡಿಸಲಾಗುತ್ತದೆ ಎಂದರು.

ಡಿ.30 ರಂದು ಗಾವಡಗೆರೆ ಮಠದಲ್ಲಿ ಪೂಜಾ ಕೈಂಕರ್ಯಗಳನ್ನು ಮುಗಿಸಿ ಹೊರಡುವ ಸದ್ಬಾವನಾ ಪಾದಯಾತ್ರೆ ಮಧ್ಯಾಹ್ನ ಕೆ.ಆರ್. ನಗರ ಮಹದೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಆನಂತರ ರಾತ್ರಿ ಲಾಳಂದೇವನಹಳ್ಳಿಯಲ್ಲಿ ತಂಗಲಿದೆ ಎಂದು ಹೇಳಿದರು.

ಜ.31ರ ಬೆಳಗ್ಗೆ ಲಾಳಂದೇವನಹಳ್ಳಿಯಿಂದ ಹೊರಡಲಿರುವ ಯಾತ್ರೆ ಸಂಜೆ ಮೈಸೂರಿನ ಕನಕ ಭವನದಲ್ಲಿ ತಂಗಲಿದ್ದು, ಜ.1 ರಂದು ಮೈಸೂರಿನಿಂದ ಹೊರಟು ಸಂಜೆ ಟಿ. ನರಸೀಪುರ ತಲುಪಿ ಜೆಎಸ್ಎಸ್ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ ಹೂಡಲಿದೆ. ಜ.2 ರಂದು ಟಿ. ನರಸೀಪುರದಿಂದ ಹೊರಟು ರಾತ್ರಿ ಕೊಳ್ಳೇಗಾಲ ಪಟ್ಟಣದ ಜೆಎಸ್ಎಸ್ ವಿದ್ಯಾರ್ಥಿ ನಿಲಯದಲ್ಲಿ ಇರಲಿದ್ದು, ಜ.3 ರಂದು ಕೊಳ್ಳೇಗಾಲದಿಂದ ಹೊರಟು ಹನೂರಿನ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ ಮಾಡಲಿದೆ ಎಂದು ನುಡಿದರು.

ಜ.4 ರಂದು ಬೆಳಗ್ಗೆ ಹನೂರಿನಿಂದ ಹೊರಡಲಿರುವ ಯಾತ್ರೆಯು ರಾತ್ರಿ ತಾಳಬೆಟ್ಟದಲ್ಲಿ ತಂಗಲಿದ್ದು, ಜ.5 ರಂದು ತಾಳಬೆಟ್ಟದಿಂದ ನಿರ್ಗಮಿಸಿ 77 ಮಲೆಗಳನ್ನು ದಾಟಿ ಮಹದೇಶ್ವರಬೆಟ್ಟ ತಲುಪಿ ಮಹಾದ್ವಾರದ ಮೂಲಕ ಸ್ವಾಮಿಯವರ ದರ್ಶನ ಪಡೆಯಲಾಗುತ್ತದೆ ಎಂದು ವಿವರಿಸಿದರು.

ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಕೆಂಪರಾಜು, ಸಮಾಜ ಸೇವಕ ಚಿಕ್ಕವಡ್ಡರಗುಡಿ ಉಮಾಶಂಕರ್, ತಾಲೂಕು ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಶೇಖರ, ಪ್ರಧಾನ ಕಾರ್ಯದರ್ಶಿ ಕೆ.ಬಿ. ಚಂದ್ರಶೇಖರ್, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎನ್. ಪ್ರಭು, ತಾಲೂಕು ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಎಂ. ಗಂಗಾಧರ್, ಪುರಸಭೆ ಮಾಜಿ ಉಪಾಧ್ಯಕ್ಷೆ ನಾಗರತ್ನಮ್ಮ, ಎಪಿಎಂಸಿ ಮಾಜಿ ನಿರ್ದೇಶಕ ಎಲ್.ಪಿ. ರವಿಕುಮಾರ್, ಲಾಳನಹಳ್ಳಿ ಮಹೇಶ್, ಬೇರ್ಯ ಪ್ರಕಾಶ್ ಮೊದಲಾದವರು ಇದ್ದರು.