ಸಾರಾಂಶ
ಶಶಿಕಾಂತ ಮೆಂಡೆಗಾರ
ಕನ್ನಡಪ್ರಭ ವಾರ್ತೆ ವಿಜಯಪುರಸಾಧನೆಗೆ ವಯಸ್ಸಿನ ಭೇದವಿಲ್ಲ ಎಂಬಂತೆ ಕೇವಲ 8 ವರ್ಷದ ಬಸವನಾಡಿನ ಬಾಲಕಿಯೊಬ್ಬಳು 4 ಸಾವಿರ ಸಾಮಾನ್ಯಜ್ಞಾನ ಪ್ರಶ್ನೆಗಳಿಗೆ ಎಳ್ಳು ಹುರಿದಂತೆ ಸರಿಯಾಗಿ ಉತ್ತರಿಸಿ ಹಲವು ದಾಖಲೆಗಳನ್ನು ಮಾಡಿದ್ದಾಳೆ. ವಿಜಯಪುರ ಜಿಲ್ಲೆಯ ಸಿಂದಗಿಯ ಸರ್ಕಾರಿ ಆದರ್ಶ ವಿದ್ಯಾಲಯದ ಮುಖ್ಯೋಪಾಧ್ಯಾಯ ಶಿವಪ್ಪಗೌಡ ಬಿರಾದಾರ ಹಾಗೂ ಪತ್ನಿ ಗೀತಾ ಬಿರಾದಾರ ಅವರ 2ನೇ ಪುತ್ರಿ ಈ ಪುಟ್ಟ ಪುಟಾಣಿ ಶಿವಾನ್ಯಳ ಅಗಾಧವಾದ ಜ್ಞಾನ ನೋಡಿದವರೆಲ್ಲ ಇವಳ ತೆಲೆಯೇ ಒಂದು ನಿಘಂಟು ಇದ್ದಂತಿದೆ ಎಂದು ಬೆರಗಾಗುತ್ತಾರೆ. ಏಕೆಂದರೆ ಕೇವಲ 3ನೇ ತರಗತಿಯಲ್ಲೇ ಕಾಂಪಿಟೆಟಿವ್ ಎಕ್ಸಾಂ ಫೇಸ್ ಮಾಡುವಷ್ಟು ಅಕ್ಷರ ನಿಘಂಟು ಸಾಮಾನ್ಯ ಜ್ಞಾನ ಹಾಗೂ ಜ್ಞಾಪಕಶಕ್ತಿ ಇವಳ ಬಳಿ ಇದೆ.
ಶಿವಾನ್ಯಳ ಜ್ಞಾನಶಕ್ತಿ:ಯಾವುದೇ ಪ್ರಶ್ನೆಗೆ ಥಟ್ ಅಂತ ಉತ್ತರಿಸುವ ಪುಟಾಣಿ ಶಿವಾನ್ಯಳಿಗೆ 4 ಸಾವಿರ ಜನರಲ್ ನಾಲೆಡ್ಜ್ ಪ್ರಶ್ನೋತ್ತರಗಳು ಬಾಯಿಪಾಠವಾಗಿದ್ದು, ಈಕೆ ಈಗಾಗಲೇ ಹಲವು ಗಿನ್ನೆಸ್ ರೆಕಾರ್ಡ್ ಮಾಡಿದ್ದಾಳೆ. ರಾಮಾಯಣ, ಮಹಾಭಾರತದಲ್ಲಿನ ಘಟನೆಗಳು ಹಾಗೂ ಅವುಗಳಲ್ಲಿ ಬರುವ ಪಾತ್ರಗಳು, ಕನ್ನಡ, ಇತಿಹಾಸ, ವಿಜ್ಞಾನ ಸೇರಿದಂತೆ ಹಲವು ವಿಭಾಗಗಳಲ್ಲಿನ ಪ್ರಶ್ನೆಗಳಿಗೆ ಥಟ್ ಅಂತ ಉತ್ತರಿಸುತ್ತಾಳೆ.ಅಲ್ಲದೆ ಕನ್ನಡದ ಮಹಾನ್ ನಾಯಕರು, ಕವಿಗಳು, ಆವಿಷ್ಕಾರಗಳು, ಸಂಶೋಧಕರು, ಗ್ರಹಗಳು, ಉಪಗ್ರಹಗಳು ಸೇರಿದಂತೆ ಎಲ್ಲ ವಿಭಾಗದ ಕ್ವಿಜ್‌ಗಳಿಗೂ ಶಿವಾನ್ಯಳ ಬಳಿ ಕ್ಷಣಾರ್ಧದಲ್ಲಿ ಉತ್ತರ ಸಿಗುತ್ತವೆ. ಜಗತ್ತಿನಲ್ಲಿನ ಎಲ್ಲ ದೇಶಗಳ ಹೆಸರು ಹಾಗೂ ಅವುಗಳ ರಾಜಧಾನಿಗಳನ್ನೂ ಸಹ ಕ್ಷಣಮಾತ್ರದಲ್ಲಿ ಹೇಳಿಬಿಡುತ್ತಾಳೆ. ಕೇಳಿವವರಿಗೆ ಸುಸ್ತಾಗುವಂತೆ ಮಾಡುವ ಈಕೆಯ ಸ್ಮೃತಿಪಟಲದ ಜ್ಞಾಪಕಶಕ್ತಿ ಅಗಾಧವಾಗಿದೆ. ಅರಸಿಬಂದ ಅವಾರ್ಡ್‌ಗಳು:
ಶಿವಾನ್ಯಳ ಪ್ರತಿಭೆಯು ಎಲ್ಲೆಡೆ ಪಸರಿಸಿದ್ದು, ಆಕೆ ಹಲವು ದಾಖಲೆಗಳನ್ನು ಮಾಡಿದ್ದಾಳೆ. ಅದರಲ್ಲಿ ಪ್ರಮುಖವಾಗಿ 2021ರಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಅವಾರ್ಡ್ ಹಾಗೂ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ಅವಾರ್ಡ್ ಲಭಿಸಿವೆ. 2022ರಲ್ಲಿ ಗುಜರಾತ್ ಸ್ಟಾರ್ ಐಕಾನ್ ಕಿಡ್ಸ್ ಅಚೀವರ್ಸ್ ಅವಾರ್ಡ್ ಹಾಗೂ ವಂಡರ್ ಬುಡ್ಡೀಸ್ ಅವಾರ್ಡ್ ಲಭಿಸಿವೆ. ಇದರ ಜತೆಗೆ ನ್ಯಾಷನಲ್ ಲೆವೆಲ್ ಅಬ್ಯಾಕಸ್‌ನಲ್ಲಿ 2ನೇ ರ್‍ಯಾಂಕ್ ಪಡೆದಿದ್ದಾಳೆ.ತಂದೆ-ತಾಯಿಯ ಶ್ರಮ:ಮಕ್ಕಳಿಗೆ ಏನಾದ್ರೂ ಕಲಿಸಬೇಕು ಎಂದು ಪಣ ತೊಟ್ಟ ತಾಯಿ ಗೀತಾ ಹಾಗೂ ತಂದೆ ಶಿವಪ್ಪಗೌಡ ತಾವೇ ಮನೆಯಲ್ಲೇ ಶಿಕ್ಷಣದ ಬಗ್ಗೆ ತಿಳುವಳಿಕೆ ನೀಡಿದ್ರು. ತಂದೆ-ತಾಯಿ ಹೇಳಿಕೊಟ್ಟ ಪ್ರಶ್ನೋತ್ತರಗಳನ್ನು ನೆನಪಿನಲ್ಲಿಟ್ಟುಕೊಂಡು ಕಲಿಯುತ್ತ ಹೋದ ಇವಳು ಇಂದು 4ಸಾವಿರ ಪ್ರಶ್ನೆಗಳಿಗೆ ಉತ್ತರಿಸುತ್ತಾಳೆ. ಅಷ್ಟೆ ಅಲ್ಲದೆ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯನ್ನು ಓದುವುದು, ಬರೆಯುವುದು ಅತ್ಯಂತ ಸಲೀಸಾಗಿ ಮಾಡುತ್ತಾಳೆ.
ಸಹೋದರರು ಎತ್ತಿದ ಕೈ:
ಚಿಕ್ಕ ವಯಸ್ಸಿನಲ್ಲಿಯೇ ಸಾಧನೆ ಮಾಡಿ ದಾಖಲೆ ಪುಟ ಸೇರಿರುವ ಈ ಪುಟಾಣಿಯ ಅಣ್ಣ ಸಿದ್ಧಾಂತಗೌಡ ಹಾಗೂ ತಮ್ಮ ವೇದಾಂತ ಸಹ ಸಾವಿರಾರು ಪ್ರಶ್ನಾವಳಿಗಳಿಗೆ ಉತ್ತರಿಸುತ್ತಿದ್ದಾರೆ. ಈ ಮೂಲಕ ಹೆತ್ತವರಿಗೆ ಗಾಡ್ ಗಿಫ್ಟ್ ಎನ್ನುವಂತಿದ್ದಾರೆ ಇವರ ಮೂವರು ಮಕ್ಕಳು. ಇವರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಭಾರತದ ಕೀರ್ತಿ ಪತಾಕೆಯನ್ನು ಎಲ್ಲೆಡೆ ಹಾರಿಸಲಿ ಎಂದು ಹಾರೈಸೋಣ.