ಸಮ ಸಮಾಜದ ನಿರ್ಮಾಣಕ್ಕೆ ಹಗಲಿರುಳು ಶ್ರಮಿಸುತ್ತಿರುವ ಸುತ್ತೂರು ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಇಡೀ ಮನು ಕುಲಕ್ಕೆ ಮಾದರಿಯಾಗಿದ್ದಾರೆ ಎಂದು ಹರವೆ ವಿರಕ್ತ ಮಠದ ಸರ್ಪಭೂಷಣ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸಮ ಸಮಾಜದ ನಿರ್ಮಾಣಕ್ಕೆ ಹಗಲಿರುಳು ಶ್ರಮಿಸುತ್ತಿರುವ ಸುತ್ತೂರು ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಇಡೀ ಮನು ಕುಲಕ್ಕೆ ಮಾದರಿಯಾಗಿದ್ದಾರೆ ಎಂದು ಹರವೆ ವಿರಕ್ತ ಮಠದ ಸರ್ಪಭೂಷಣ ಸ್ವಾಮೀಜಿ ಅಭಿಪ್ರಾಯಪಟ್ಟರು.ತಾಲೂಕಿನ ಮೂಡ್ಲುಪುರ ಸಮೀಪದ ಆಶ್ರಯ ಸೇವಾ ಚಾರಿಟಬಲ್ ಟ್ರಸ್ಟ್‌ನ ನೆಮ್ಮದಿ ಕೇಂದ್ರದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ವರ್ದಂತ್ಯುತ್ಸವ ಸಮಿತಿ ವತಿಯಿಂದ ನಡೆದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯ ಜನ್ಮ ವರ್ದಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸುತ್ತೂರು ಶ್ರೀಗಳು ಜಾತಿ ಮತ ಬೇಧವಿಲ್ಲದೆ ಶಿಕ್ಷಣ ನೀಡುತ್ತಿದ್ದು ಯುವ ಪೀಳಿಗೆಯಲ್ಲಿ ಸಮಾಜ ಕಟ್ಟುವ ಮನೋಭಾವ ಜಾಗೃತಿಗೊಳಿಸುತಿದ್ದಾರೆ ಕೇವಲ ಮಠ ಕಟ್ಟಿ ಅನ್ನ ದಾಸೋಹ ನಡೆಸುವುದೇ ಮಠವಲ್ಲ ಜನ ಸಾಮಾನ್ಯರ ಬದುಕು ಬವಣೆಗಳಿಗೆ ಸ್ಪಂದಿಸಿವುದು ಮಠಗಳ ಕರ್ತವ್ಯ ಎಂಬ ಮನೋಭಾವ ಶ್ರೀಗಳದ್ದಾಗಿದೆ. ಜನರ ಗುರುಗಳಾಗಿರುವ ಸುತ್ತೂರು ಶ್ರೀಗಳ ಬದುಕು ಚಿಂತನೆ ನಮ್ಮೆಲ್ಲರಿಗೂ ಆದರ್ಶವಾಗಿದೆ ಎಂದರುಮುಖ್ಯ ಅತಿಥಿಗಳಾಗಿದ್ದ ನಗರದ ಅರೇಬಿಕ್ ಶಾಲೆಯ ಪ್ರಾಚಾರ್ಯ, ಮುಸ್ಲಿಂ ಧರ್ಮಗುರು ಸೈಯದ್ ಲತೀಫ್ ಉಲ್ಲಾ ರೆಹಮಾನ್ ಮಾತನಾಡಿ, ಸುತ್ತೂರು ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆಯಲು ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳವರ ದೂರ ದೃಷ್ಟಿ ಕಾರಣ ಎಂಬುದು ಸೂರ್ಯ ಚಂದ್ರರಸ್ಟೆ ಸತ್ಯವಾಗಿದೆ ಎಂದರು.
ಕೋಡಿ ಉಗನೆ ಗ್ರಾಮದ ಸಿಎಸ್‌ಐ ಚರ್ಚ್‌ನ ಪಾದ್ರಿ ಜಯರಾಜ್ ಮಾತನಾಡಿ, ಮಠಗಳು ಶಿಕ್ಷಣ ಸಂಸ್ಕೃತಿ ದಾಸೋಹ ಪರಂಪರೆಗೆ ಹೆಸರಾಗಿವೆ. ಅದರಲ್ಲೂ ಸುತ್ತೂರು ಮಠ ಸ್ವಾತಂತ್ರ್ಯ ಪೂರ್ವದಿಂದಲೂ ಸಮಾಜದ ಏಳಿಗೆಗೆ ದುಡಿಯುತ್ತಿದ್ದು ಆ ಪರಂಪರೆಯನ್ನು ಈಗಿನ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅಕ್ಷರಃ ಮುಂದುವರಿಸಿದ್ದು ನಮ್ಮಂತಹ ಧರ್ಮ ಗುರುಗಳಿಗೆ ಆದರ್ಶಪ್ರಾಯ ಎಂದರು.ಶ್ರೀಗಳ ವರ್ದಂತ್ಯುತ್ಸವ ಸಮಿತಿ ಅಧ್ಯಕ್ಷ ಬಿ.ಕೆ.ರವಿಕುಮಾರ್ ಮಾತನಾಡಿ, ಸುತ್ತೂರು ಮಠದ 23ನೆಯ ಜಗದ್ಗುರು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಈ ನಾಡು ಕಂಡ ಅಪರೂಪದ ದಣಿವರಿಯದ ಕಾಯಕ ಯೋಗಿಗಳಾಗಿದ್ದು ವಿದ್ಯಾರ್ಥಿಗಳು, ಯುವಕರು ರೈತರು ಮಹಿಳೆಯರ ಏಳಿಗೆಗೆ ತಮ್ಮನ್ನೇ ಅರ್ಪಿಸಿಕೊಂಡಿದ್ದು ಅವರ ಜನ್ಮ ವರ್ಧಂತಿ ಆಚರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಇದೇ ಸಂದರ್ಭದಲ್ಲಿ ವೃದ್ಧರಿಗೆ, ಅನಾಥರಿಗೆ ಸನ್ಮಾನಿಸಲಾಯಿತು. ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಅರ್ಥಪೂರ್ವವಾಗಿ ಸುತ್ತೂರು ಶ್ರೀಗಳ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.ಮುಸ್ಲಿಂ ಧರ್ಮಗುರು ಆಶ್ರಯ ಟ್ರಸ್ಟ್‌ನ ರಮೇಶ್, ನೆಮ್ಮದಿ ಕೇಂದ್ರದ ಗುರು ಗುರುಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ನಾಗೇಂದ್ರ, ಸದಸ್ಯರಾದ ಆಲೂರು ಪ್ರದೀಪ್, ವೀರಶೈವ ಮಹಾಸಭಾದ ಅಧ್ಯಕ್ಷ ಮೂಡ್ಲುಪುರ ನಂದೀಶ್, ಮಹಾ ಸಭಾದ ಮೂಡ್ಲುಪುರ ಮಂಜೇಶ್ ಇತರರು ಹಾಜರಿದ್ದರು.