ಸಾರಾಂಶ
ಗೋಕರ್ಣ: ಇಲ್ಲಿನ ಮಹಾಬಲೇಶ್ವರ ಮಂದಿರದಲ್ಲಿ ಮಹಾಶಿವರಾತ್ರಿಯ ಶಿವಯೋಗ ಮಹಾಪರ್ವ ದಿನವಾದ ಬುಧವಾರ ಸಹ್ರಾಸರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಆತ್ಮಲಿಂಗದ ದರ್ಶನ ಪಡೆದರು. ಶಿವಧ್ಯಾನ, ಶಿವ ಸ್ತುತಿ ಜೊತೆ ಎಲ್ಲೆಡೆ ಶಿವಮಯವಾಗಿತ್ತು.
ಬೆಳಗಿನಜಾವ ೨.೩೦ಕ್ಕೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು, ಮುಂಜಾನೆಯಿಂದಲೇ ಅಧಿಕ ಜನರು ನೆರೆದಿದ್ದು, ಸರತಿ ಸಾಲು ಮುಖ್ಯ ಕಡಲತೀರದವರೆಗೆ ವಿಸ್ತರಿಸಿತ್ತು. ಮಂದಿರದ ಆಡಳಿತವರು ಎಲ್ಲೆಡೆ ಪೆಂಡಾಲ್, ಕುಡಿಯುವ ನೀರು ಸೇರಿದಂತೆ ಭಕ್ತರಿಗೆ ಸಕಲ ವ್ಯವಸ್ಥೆ ಕಲ್ಪಿಸಿದ್ದರು.ನ್ಯಾಯಾಧೀಶರ ಭೇಟಿ:
ಮಂದಿರದ ಮೇಲುಸ್ತುವಾರಿ ಸಮಿತಿಯ ಉಪಾಧ್ಯಕ್ಷರಾದ ಜಿಲ್ಲಾ ನ್ಯಾಯಲಯದ ನ್ಯಾಯಾಧೀಶ ವಿಜಯಕುಮಾರ ಮಂದಿರಕ್ಕೆ ಭೇಟಿ ನೀಡಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದರು. ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯರಾದ ಸುಬ್ರಹ್ಮಣ್ಯ ರಮಣಿ ಪ್ರಸಾದ, ಮಹೇಶ ಹಿರೇಗಂಗೆ, ಸುಬ್ರಹ್ಮಣ್ಯ ಅಡಿ, ಮಂದಿರದ ವ್ಯವಸ್ಥಾಪಕ ಸುಬ್ರಹ್ಮಣ್ಯ ಹೆಗಡೆ ಉಪಸ್ಥಿತರಿದ್ದರು. ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗದವರು ಅಚ್ಚುಕಟ್ಟಿನ ವ್ಯವಸ್ಥೆ ಕಲ್ಪಿಸಿದ್ದರು.ವಿಶೇಷ ಉಪಹಾರ:
ನಿತ್ಯ ಭಕ್ತರಿಗೆ ಉಚಿತ ಪ್ರಸಾದ ಭೋಜನ ನೀಡುವ ಅಮೃತಾನ್ನ ಭೋಜನ ಶಾಲೆಯಲ್ಲಿ ಶಿವರಾತ್ರಿಯ ದಿನಕ್ಕಾಗಿ ಉಪಹಾರ ವ್ಯವಸ್ಥೆ ಕಲ್ಪಿಸಲಾಗಿತ್ತು.ಮಹಾರಾಷ್ಟ್ರದಿಂದ ಹೆಚ್ಚಿನ ಜನರು ಆಗಮಿಸುವುದರಿಂದ ಇವರಿಗಾಗಿಯೇ ಸಾಬುದಾನಿ ಕಿಚಡಿ ವಿಶೇಷ ಉಪಹಾರ ಮಾಡಲಾಯಿತು. 30 ಸಾವಿರಕ್ಕೂ ಅಧಿಕ ಸಂಖ್ಯೆಯ ಭಕ್ತರು ಉಪಾಹಾರ ಸ್ವೀಕರಿಸಿದರು.
ಮಹಾರಾಷ್ಟ್ರ, ಗೋವಾ ಸೇರಿದಂತೆ ವಿವಿಧ ಹೊರ ರಾಜ್ಯ, ರಾಜ್ಯದ ಹಲವು ಭಾಗಳಿಂದ ಆಗಮಿಸಿದ ಭಕ್ತರು ಸಮುದ್ರ ಸ್ನಾನ, ಕೋಟಿತೀರ್ಥ ಸ್ನಾನ ಮಾಡಿ ದೇವರ ದರ್ಶನ ಪಡೆದರು. ಇನ್ನು ಕೆಲವರು ಮುಖ್ಯ ಕಡಲತೀರದಲ್ಲಿ ಮರಳಿನ ಶಿವಲಿಂಗ ಮಾಡಿ ಪೂಜೆ, ಶಿವ ಧ್ಯಾನ ಮಾಡಿ ವಂದಿಸಿದರು.ಭದ್ರತೆಗೆ ಪೊಲೀಸ್ ಸಿಬ್ಬಂದಿ ಕೊರತೆ:
ಅಂಕೋಲಾ, ಹೊನ್ನಾವರಕ್ಕೆ ಇಲ್ಲಿನ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಬಂದೋಬಸ್ತ್‌ಗೆ ತೆರಳಿದ್ದರಿಂದ ಇದೇ ಮೊದಲ ಬಾರಿ ಜಾತ್ರಾ ಮಹೋತ್ಸವದ ಭದ್ರತೆಗೆ ಪೊಲೀಸ್ ಸಿಬ್ಬಂದಿ ಕೊರತೆ ಉಂಟಾಗಿತ್ತು. ಆದಾಗ್ಯೂ ಪಿಎಸ್‌ಐ ಖಾದರ್ ಬಾಷಾ, ಶಶಿಧರ ತಮ್ಮ ಸಿಬ್ಬಂದಿ ಜೊತೆಗೆ ಹೊರಗಡೆಯಿಂದ ಗೃಹರಕ್ಷ ದಳದ ಸಿಬ್ಬಂದಿಯೊಂದಿಗೆ ಸೂಕ್ತ ಶಾಂತಿ- ಸುವ್ಯವಸ್ಥೆಗೆ ಶ್ರಮಿಸಿದರು.ಕಾರವಾರದ ಬಾಂಬ್ ನಿಷ್ಕ್ರಿಯ ದಳದವರು ಸಹ ಸೂಕ್ತ ನಿಗಾ ವಹಿಸಿದ್ದರು. ಆರೋಗ್ಯ ಇಲಾಖೆಯವರು ಮಂದಿರದ ಪಕ್ಕದಲ್ಲಿ ಕೌಂಟರ್ ತೆರೆದು ತುರ್ತು ಚಿಕಿತ್ಸೆ ಮತ್ತಿತರ ಮಾಹಿತಿ ನೀಡಿದರು. ಕಾರ್ಮಿಕ ಇಲಾಖೆಯವರು ಭಿಕ್ಷಾಟನೆ, ಬಾಲಕಾರ್ಮಿಕರ ಬಳಕೆಯ ಮೇಲೆ ನಿಗಾ ಇಟ್ಟಿದ್ದರು.
ವಿವಿಧೆಡೆ ಪೂಜೆ:ಭಾವಿಕೊಡ್ಲದ ಚಂಕ್ರಖಂಡೇಶ್ವರ ದೇವಾಲಯ, ಸಿದ್ದೇಶ್ವರದ ದೇವಾಲಯ, ಕೋಟಿತೀರ್ಥಕಟ್ಟೆಯಲ್ಲಿರುವ ವರದೇಶ್ವರ, ಕುಡ್ಲೆಕಡಲತೀರದಲ್ಲಿ ಉಮಾಮಹೇಶ್ವರ ಸೇರಿದಂತೆ ಈ ಭಾಗದ ಶಿವನ ಮಂದಿರದಲ್ಲಿ ಅಸಂಖ್ಯೆ ಭಕ್ತರು ಆಗಮಿಸಿ ದೇವರ ದರ್ಶನ, ಪೂಜೆ ನೆರವೇರಿಸಿ ಪುನೀತರಾದರು.