ದೇಶಕ್ಕೆ ಅನ್ನ ನೀಡುವ ರೈತ ಹಾಗೂ ಯೋಧ ಎರಡು ಕಣ್ಣುಗಳಿದ್ದಂತೆ, ರೈತರ ಸಂಕಷ್ಟವನ್ನು ಕೇಳಲು ಯಾರು ಇಲ್ಲದಂತಾಗಿದೆ.

ಕನ್ನಡಪ್ರಭ ವಾರ್ತೆ ನಂಜನಗೂಡುರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗದೆ ಮತ್ತು ಬರ, ಪ್ರಾಕೃತಿಕ ವಿಕೋಪಗಳಿಂದಾಗಿ ರೈತರು ಸಂಕಷ್ಟದಲ್ಲಿ ಸಿಲುಕಿದ್ದು, ಕಳೆದ ಎರಡುವರೆ ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ರೈತರ ಸಂಕಷ್ಟವನ್ನು ಕೇಳುವವರು ಯಾರು ಇಲ್ಲದಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ನಡೆಯುತ್ತಿರುವ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಕೃಷಿಮೇಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ದೇಶಕ್ಕೆ ಅನ್ನ ನೀಡುವ ರೈತ ಹಾಗೂ ಯೋಧ ಎರಡು ಕಣ್ಣುಗಳಿದ್ದಂತೆ, ರೈತರ ಸಂಕಷ್ಟವನ್ನು ಕೇಳಲು ಯಾರು ಇಲ್ಲದಂತಾಗಿದೆ. ಕಬ್ಬಿನ ವೈಜ್ಞಾನಿಕ ಬೆಲೆಗಾಗಿ ಬೆಳಗಾವಿಯಲ್ಲಿ ರೈತರು ಪ್ರತಿಭಟನೆಗೆ ಮುಂದಾದಾಗ ರಾಜ್ಯ ಸರ್ಕಾರ ರೈತರ ಪ್ರತಿಭಟನೆಯನ್ನು ಕಡೆಗಣಿಸಿದಾಗ ಆತ್ಮಹತ್ಯೆ ಪ್ರಯತ್ನಕ್ಕೆ ಮುಂದಾದ ವೇಳೆ, ನನ್ನ ಹುಟ್ಟುಹಬ್ಬವನ್ನು ಬದಿಗೊತ್ತಿ ಪ್ರತಿಭಟನೆಯಲ್ಲಿ ಭಾಗಿಯಾಗಿ ರೈತರ ಪ್ರತಿಭಟನೆಗೆ ಬೆಂಬಲ ನೀಡುವ ಮೂಲಕ ಅವರಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡಿದ್ದೇನೆ. ದೇಶದ ಇತಿಹಾಸದಲ್ಲೇ ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ, ರೈತರಿಗೆ ಪ್ರತ್ಯೇಕ ಬಜೆಟ್ ಮಂಡಿಸಿ, ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಪೂರೈಸಿದ ಹೆಗ್ಗಳಿಕೆ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ಅಲ್ಲದೆ ಚಾಮರಾಜನಗರ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ಮಾಡಿದ್ದರು. ರಾಜ್ಯದಲ್ಲಿ ಮುಖ್ಯಮಂತ್ರಿಗಳಾದವರು ಅವರವರ ಜಿಲ್ಲೆಗಳಲ್ಲಿ ರೈತರಿಗೆ ನೆರವಾಗಿ ರೈತರ ಬಾಳನ್ನು ಹಸನುಗೊಳಿಸುವ ಯೋಜನೆಗಳನ್ನು ರೂಪಿಸಿದ್ದಲ್ಲಿ ಇಂದು ರೈತರ ಆತ್ಮಹತ್ಯೆಗಳು ನಡೆಯುತ್ತಿರಲಿಲ್ಲ ಎಂದರು.ಉದ್ಯಮಿಗಳು ನೆಮ್ಮದಿ ಜೀವನ ನಡೆಸುತ್ತಿರುವುದಂತೆ, ರೈತರು ಕೂಡ ನೆಮ್ಮದಿ ಜೀವನ ಸಾಗಿಸಿದಾಗ ಮಾತ್ರ ರಾಷ್ಟ್ರದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ರೈತಾಪಿ ವರ್ಗಕ್ಕೆ ದಿಕ್ಕು ತೋರಿಸುವ ಕೆಲಸವನ್ನು ಜಾತ್ರೆಯ ಮೂಲಕ ನಡೆಸಿ ದೇಶಕ್ಕೆ ಮಾದರಿಯಾಗಿ ಶ್ರೀಮಠವು ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.