ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿನೀನೊಲಿದರೆ ಕೊರಡು ಕೊನರುವುದು, ವಿಷವೂ ಅಮೃತವಾಗುವುದು ಎಂಬಂತೆ ಪರಿಶುದ್ಧ ಮನದಿಂದ ಶಿವರಾತ್ರಿಯ ಶುಭರಾತ್ರಿಯಲ್ಲಿ ಶಿವನಾಮ ಸ್ಮರಣೆ ಮಾಡಿದರೆ ಸಕಲದೋಷಗಳ ಪರಿಹಾರವಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಶುಕ್ರವಾರ ಧರ್ಮಸ್ಥಳ ಪ್ರವಚನ ಮಂಟಪದಲ್ಲಿ ಅಹೋರಾತ್ರಿ ಶಿವನಾಮ ಪಂಚಾಕ್ಷರಿ ಪಠಣಕ್ಕೆ ಚಾಲನೆ ನೀಡಿ ಮಾತನಾಡಿದರು.ನಮ್ಮ ಎಲ್ಲ ಮನೋವಿಕಾರಗಳನ್ನು ದೂರಮಾಡಿ ಸಕಲ ಜೀವಿಗಳಿಗೆ ಲೇಸನ್ನೇ ಬಯಸಿ ಉನ್ನತ ಸಾಧನೆ ಮಾಡಬೇಕು. ಶಿವನ ಜೋತೆಗೆ ಶಿವಭಕ್ತರ ಸೇವೆ ಮಾಡಿದರೂ ಪುಣ್ಯ ಬರುತ್ತದೆ ಎಂದು ಅವರು ಹೇಳಿದರು.
ಮಹಿಳೆಯರನ್ನು ಗೌರವದಿಂದ ಕಾಣಬೇಕು. ಅವರು ನೊಂದು ಕಣ್ಣೀರು ಹಾಕಿದರೂ ಅದು ಶಾಪವಾಗಿ ಪರಿಣಮಿಸುತ್ತದೆ. ಹಿತ-ಮಿತ, ಸುಮಧುರ ಮಾತುಗಳನ್ನಾಡಬೇಕು. ಮಾತೇ ಮಾಣಿಕ್ಯ. ಮಾತು ಬಿಡ ಮಂಜುನಾಥ ಎಂಬ ಮಾತನ್ನು ಎಲ್ಲರೂ ಸದಾ ನೆನಪಿಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಮನ, ವಚನ, ಕಾಯದಿಂದ ಪರಿಶುದ್ಧ, ದೃಢಸಂಕಲ್ಪ ಮತ್ತು ಪರಿಶುದ್ಧ ಭಕ್ತಿಯಿಂದ ದೇವರ ಅನುಗ್ರಹಕ್ಕೆ ಪಾತ್ರರಾಗಿ ಉನ್ನತ ಸಾಧನೆ ಮಾಡಬಹುದು. ಶಿವರಾತ್ರಿ ಒಂದೇ ರಾತ್ರಿಗೆ ಸೀಮಿತವಾಗದೆ ಪ್ರತಿ ರಾತ್ರಿಯೂ ಶಿವರಾತ್ರಿಯಾಗಿ, ಶುಭರಾತ್ರಿಯಾಗಿ ಎಲ್ಲೆಲ್ಲೂ ಸುಖ-ಶಾಂತಿ, ನೆಮ್ಮದಿ ನೆಲೆಸಲೆಂದು ಅವರು ಹಾರೈಸಿದರು.
ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಪಾದಯಾತ್ರೆಯ ರೂವಾರಿ ಹನುಮಂತಪ್ಪ ಗುರೂಜಿ, ಮರಿಯಪ್ಪ ಉಪಸ್ಥಿತರಿದ್ದರು.ಡಾ. ಪವನ್ ಸಂಪಾದಿಸಿದ ‘ವೈದ್ಯಾಮೃತ’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.ಬೆಂಗಳೂರಿನ ಭಕ್ತರಿಂದ ಸೇವೆ: ಶಿವರಾತ್ರಿ ಪ್ರಯುಕ್ತ ಬೆಂಗಳೂರಿನ ಹಲವಾರು ಸಂಘಟನೆಗಳು ಸೇರಿ ಶುಕ್ರವಾರ ರಾತ್ರಿ ಭಕ್ತರಿಗೆ ಉಪಾಹಾರ ನೀಡಿದರು.