ಸಾರಾಂಶ
ಬ್ಯಾಡಗಿ: ಇಲ್ಲಿನ ಪಿಎಲ್‌ಡಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಬಿಜೆಪಿಯ ಶಿವಯೋಗಿ ಉಕ್ಕುಂದ, ಉಪಾಧ್ಯಕ್ಷರಾಗಿ ಸಂಕೇತ ಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾದರು.
ಪಿಎಲ್‌ಡಿ ಬ್ಯಾಂಕ್ 14 ಸ್ಥಾನಗಳಲ್ಲಿ 11ರಲ್ಲಿ ಬಿಜೆಪಿ, 3ರಲ್ಲಿ ಕಾಂಗ್ರೆಸ್ ಜಯಗಳಿಸಿದ್ದವು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಎರಡೂ ಸ್ಥಾನಗಳಿಗೆ ತಲಾವೊಂದು ನಾಮಪತ್ರ ಸಲ್ಲಿಕೆಯಾಗಿದ್ದು, ಬಿಜೆಪಿ ಬೆಂಬಲಿತರಿಗೆ ಎರಡೂ ಸ್ಥಾನಗಳು ಲಭಿಸಿವೆ. ಅಲ್ಪಮತ ಹೊಂದಿರುವ ಕಾಂಗ್ರೆಸ್ ಸ್ಪರ್ಧೆಯಿಂದ ಹಿಂದೆ ಸರಿಯಿತು.ಇನ್ಮುಂದೆ ಕಾಂಗ್ರೆಸ್‌ಗೆ ಸೋಲಿನ ಪರ್ವ: ಬಳಿಕ ಮಾತನಾಡಿದ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ರಾಜ್ಯದಲ್ಲಿ ಕಾಂಗ್ರೆಸ್ ದುರಾಡಳಿತಕ್ಕೆ ಜನರು ಬೇಸತ್ತಿದ್ದಾರೆ. ಗ್ಯಾರಂಟಿ ಹೆಸರಲ್ಲಿ ಅಭಿವೃದ್ಧಿಹೀನ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಬರುವ ಎಲ್ಲ ಚುನಾವಣೆಗಳಲ್ಲಿ ರಾಜ್ಯದ ಜನತೆ ಸೋಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.ಕಾಂಗ್ರೆಸ್‌ನಿಂದ ಹಗಲುದರೋಡೆ: ಕಾಂಗ್ರೆಸ್ ಸರ್ಕಾರ ಹಗಲುದರೋಡೆಗಿಳಿದಿದ್ದು, ಗ್ಯಾರಂಟಿ ಬಿಟ್ಟರೆ ಅವರ ಬಳಿ ಮತ್ಯಾವುದೇ ಅಸ್ತ್ರವಿಲ್ಲ. ಗ್ಯಾರಂಟಿ ಹೆಸರಲ್ಲಿ ಜನರನ್ನು ಸೆಳೆದು, ಅವರಿಂದಲೇ ಹಣ ದೋಚಿ ಮತ್ತೆ ಜನರಿಗೆ ಕೊಡುವ ಕೆಲಸದಲ್ಲಿ ಸಿದ್ದರಾಮಯ್ಯ ತಮ್ಮ ಜಾಣತನ ತೋರಿಸುತ್ತಿದ್ದಾರೆ. ಇದೊಂದು ಬೋಗಸ್ ಸರ್ಕಾರವೆಂದು ಜನರಿಗೆ ಇದೀಗ ಅರ್ಥವಾಗಿದೆ. ಮುಂಬರುವ ಚುನಾವಣೆಗಳಲ್ಲಿ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.ಕೊಟ್ಟು ಕಿತ್ತುಕೊಳ್ಳುವ ಸರ್ಕಾರ: ಬಿಜೆಪಿ ತಾಲೂಕಾಧ್ಯಕ್ಷ ಶಿವಯೋಗಿ ಶಿರೂರ ಮಾತನಾಡಿ, ಬೆಲೆ ಏರಿಕೆಯಿಂದ ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ, ₹1 ಕೊಟ್ಟು, ₹4 ಕಿತ್ತುಕೊಳ್ಳುವ ಸರ್ಕಾರಕ್ಕೆ ಬರುವ ದಿನಗಳಲ್ಲಿ ಭವಿಷ್ಯವಿಲ್ಲ. ಬಿಜೆಪಿ ಅವಧಿಯಲ್ಲಿ ಪಿಎಲ್‌ಡಿ ಬ್ಯಾಂಕ್ ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಅದನ್ನೇ ಮುಂದುವರಿಸಿಕೊಂಡು ಹೋಗುವಂತೆ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸಲಹೆ ನೀಡಿದರು.ಈ ವೇಳೆ ಬಿಜೆಪಿ ಉಪಾಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ, ಸುರೇಶ ಯತ್ನಳ್ಳಿ, ಸುರೇಶ ಉದ್ಯೋಗಣ್ಣನವರ, ವೈ.ಎಚ್. ಕುಡುಪಲಿ, ಶಂಕರಗೌಡ್ರ ಪಾಟೀಲ, ಹುಚ್ಚನಗೌಡ ಲಿಂಗನಗೌಡ್ರ, ಚಂದ್ರಣ್ಣ ಶೆಟ್ಟರ, ಅರುಣಕುಮಾರ ಕರಡೇರ, ಮುರಿಗೆಪ್ಪ ಶೆಟ್ಟರ, ಶಂಕ್ರಣ್ಣ ಮಾತನವರ, ಶಿವಬಸಪ್ಪ ಕುಳೇನೂರ, ವಿಜಯ ಮಾಳಗಿ, ಮಹದೇವಪ್ಪ ಶಿಡೇನೂರ, ನಾಗರಾಜ ಹಾವನೂರ, ಶಿವನಗೌಡ ಬಸನಗೌಡ್ರ, ಉಮೇಶ ರಟ್ಟೀಹಳ್ಳಿ, ಮಾರುತಿ ಫಾಸಿ, ಶಶಿಧರ ಕಮ್ಮಾರ ಸೇರಿದಂತೆ ಚುನಾಯಿತ ಸರ್ವ ಸದಸ್ಯರು ಇನ್ನಿತರ ಮುಖಂಡರು ಉಪಸ್ಥಿತರಿದ್ದರು.